ಶುಕ್ರವಾರ, ಜುಲೈ 30, 2021
25 °C
ಹಳಿ ತಪ್ಪಿದ ಕಸ ಸಂಗ್ರಹಣೆ–ವಿಲೇವಾರಿ ಪ್ರಕ್ರಿಯೆ

ನಗರವಾಸಿಗಳ ನಿದ್ದೆಗೆಡಿಸಿದ ಕಸದ ಸಮಸ್ಯೆ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲಾ ಕೇಂದ್ರದಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆ ಹಳಿ ತಪ್ಪಿದ್ದು, ಕಸದ ಸಮಸ್ಯೆಯು ನಗರವಾಸಿಗಳ ನಿದ್ದೆಗೆಡಿಸಿದೆ.

ನಗರಸಭೆ ವ್ಯಾಪ್ತಿ ಸುಮಾರು 27 ಚದರ ಕಿ.ಮೀ ಇದ್ದು, ನಗರದ ಜನಸಂಖ್ಯೆ 2 ಲಕ್ಷದ ಗಡಿ ದಾಟಿದೆ. ನಗರದ 35 ವಾರ್ಡ್‌ಗಳಿಂದ ದಿನಕ್ಕೆ ಸುಮಾರು 85 ಟನ್‌ ಕಸ ಸಂಗ್ರಹಣೆಯಾಗುತ್ತಿದೆ. ನಗರದ ವ್ಯಾಪ್ತಿ ವಿಸ್ತಾರವಾದಂತೆ ಜನಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಅನುಗುಣವಾಗಿ ಕಸದ ಪ್ರಮಾಣ ಹೆಚ್ಚುತ್ತಿದೆ. ಹಬ್ಬ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಕಸ ಸಂಗ್ರಹಣೆ ಪ್ರಮಾಣ 120 ಟನ್‌ ದಾಟುತ್ತಿದೆ.

ನಗರವನ್ನು ಕಸಮುಕ್ತ ನಗರವಾಗಿಸುವ ಮಹತ್ವಕಾಂಕ್ಷೆಯೊಂದಿಗೆ 2014ರಲ್ಲಿ ಆರಂಭವಾದ ‘ಕ್ಲೀನ್‌ ಸಿಟಿ’ ಯೋಜನೆಗೆ ಗ್ರಹಣ ಹಿಡಿದಿದೆ. ಸೂಕ್ತ ಮೇಲ್ವಿಚಾರಣೆ ಹಾಗೂ ನಿರ್ವಹಣೆ ಕೊರತೆಯಿಂದ ಯೋಜನೆ ಹಳ್ಳ ಹಿಡಿದಿದ್ದು, ಕಸದ ಸಮಸ್ಯೆ ತೀವ್ರಗೊಂಡಿದೆ. ಹಾದಿ ಬೀದಿ ಬದಿಯಲ್ಲಿ ಕಸ ರಾಶಿಯಾಗಿ ಬಿದ್ದಿದ್ದು, ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ.

ನಗರದಲ್ಲಿ ಉತ್ಪತ್ತಿಯಾಗುವ ಕಸದ ವಿಲೇವಾರಿಗೆ ಸ್ಥಳಾವಕಾಶವಿಲ್ಲ. ಈ ಹಿಂದೆ ನಗರದ ಮಣಿಘಟ್ಟ ರಸ್ತೆ, ಸಾರಿಗೆ ನಗರ, ಖಾದ್ರಿಪುರ ರಸ್ತೆ, ರಾಷ್ಟ್ರೀಯ ಹೆದ್ದಾರಿ ಹಾಗೂ ಟಮಕ ಸಮೀಪದ ಹಸಿ ಗೊಬ್ಬರದ (ಕಾಂಪೋಸ್ಟ್‌) ಘಟಕಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿತ್ತು.

ಈ ಸ್ಥಳಗಳಲ್ಲಿ ಕಸ ಸುರಿಯಲು ಸುತ್ತಮುತ್ತಲ ಬಡಾವಣೆಗಳ ನಿವಾಸಿಗಳು ಹಾಗೂ ರೈತರು ವಿರೋಧ ವ್ಯಕ್ತಪಡಿಸಿದ ಕಾರಣ ಕಸ ವಿಲೇವಾರಿ ಪ್ರಕ್ರಿಯೆ ಸ್ಥಗಿತಗೊಳಿಸಲಾಯಿತು. ಈ ಸ್ಥಳಗಳಿಗೆ ಪರ್ಯಾಯವಾಗಿ ಜಾಗ ಹುಡುಕುವ ಪ್ರಯತ್ನ ಏಳೆಂಟು ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ, ಜಾಗ ಮಾತ್ರ ಸಿಕ್ಕಿಲ್ಲ.

ಮತ್ತೊಂದೆಡೆ ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ ಭೂ ಭರ್ತಿ ಘಟಕಗಳಿಲ್ಲ. ಹೀಗಾಗಿ ನಗರದ ಕಸವನ್ನು ಎಲ್ಲಿ ವಿಲೇವಾರಿ ಮಾಡಬೇಕೆಂಬ ಪ್ರಶ್ನೆ ಎದುರಾಗಿದೆ. ಕಸ ಸಾಗಣೆ ವಾಹನಗಳ ಸಿಬ್ಬಂದಿಗೆ ಬೇರೆ ದಾರಿ ಕಾಣದೆ ನಗರದ ಹೊರವಲಯದ ಕೆರೆಯಂಗಳದಲ್ಲಿ ನಿಯಮಬಾಹಿರವಾಗಿ ಕಸ ವಿಲೇವಾರಿ ಮಾಡುತ್ತಿದ್ದಾರೆ. ಪಾಳು ಬಿದ್ದ ಬಾವಿಗಳಿಗೂ ಕಸ ಸುರಿಯಲಾಗುತ್ತಿದೆ.

ಕೊಳೆಗೇರಿ ಸ್ವರೂಪ: ಕೆಲ ದಿನಗಳಿಂದ ನಗರದಲ್ಲಿ ಆಗಾಗ್ಗೆ ತುಂತುರು ಮಳೆಯಾಗುತ್ತಿದ್ದು, ರಸ್ತೆ ಬದಿಯಲ್ಲಿ ವಿಲೇವಾರಿಯಾಗದೆ ಉಳಿದಿರುವ ಕಸ ಸ್ಥಳದಲ್ಲೇ ಕೊಳೆಯಲಾರಂಭಿಸಿದೆ. ಕಸದ ರಾಶಿ ಜತೆ ಮಳೆ ನೀರು ಸೇರಿ ದುರ್ನಾತ ಹೆಚ್ಚಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಸದ ರಾಶಿ ಪಕ್ಕದ ರಸ್ತೆ ಹಾಗೂ ಚರಂಡಿಗಳಿಗೆ ವ್ಯಾಪಿಸಿದ್ದು, ವಾಹನಗಳು ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಜತೆಗೆ ಚರಂಡಿಗಳಲ್ಲಿ ಕಸ ಕಟ್ಟಿಕೊಂಡು ಕೊಳಚೆ ನೀರಿನ ಹರಿವಿಗೆ ಅಡ್ಡಿಯಾಗಿದೆ. ಹಲವೆಡೆ ಕೊಳಚೆ ನೀರು ರಸ್ತೆಗೆ ಹರಿಯುತ್ತಿದ್ದು, ಬಡಾವಣೆಗಳು ಕೊಳೆಗೇರಿಯಂತಾಗಿವೆ.

ರೋಗ ಭೀತಿ: ಕಸದ ರಾಶಿ ಮತ್ತು ಕೊಳಚೆ ನೀರಿನಿಂದ ನೈರ್ಮಲ್ಯ ಸಮಸ್ಯೆ ಎದುರಾಗಿದ್ದು, ಜನರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ. ಕಸದ ರಾಶಿ ಬಳಿ ನಾಯಿ, ಹಂದಿ ಹಾಗೂ ಸೊಳ್ಳೆ ಕಾಟ ಹೆಚ್ಚಿದ್ದು, ಅಕ್ಕಪಕ್ಕದ ನಿವಾಸಿಗಳು ಪ್ರತಿನಿತ್ಯ ಬವಣೆಪಡುವಂತಾಗಿದೆ. ಈಗಾಗಲೇ ಹಲವರು ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಕಸದ ಸಮಸ್ಯೆ ಪರಿಹರಿಸುವಂತೆ ನಗರವಾಸಿಗಳು ನಗರಸಭಾ ಸದಸ್ಯರು ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ರೋಗಗ್ರಸ್ಥ ಆರೋಗ್ಯ ಶಾಖೆ: ತ್ಯಾಜ್ಯ ನಿರ್ವಹಣೆಯ ಹೊಣೆ ಹೊತ್ತಿರುವ ನಗರಸಭೆ ಆರೋಗ್ಯ ಶಾಖೆಯು ಸಿಬ್ಬಂದಿ ಕೊರತೆಯಿಂದ ರೋಗಗ್ರಸ್ಥವಾಗಿದೆ. ಆರೋಗ್ಯ ಶಾಖೆಗೆ ಮಂಜೂರಾಗಿರುವ ತಲಾ 3 ಹಿರಿಯ ಹಾಗೂ 3 ಕಿರಿಯ ಆರೋಗ್ಯ ನಿರೀಕ್ಷಕರ ಹುದ್ದೆ, 9 ಮಂದಿ ಸ್ಯಾನಿಟರಿ ಮೇಲ್ವಿಚಾರಕರ ಹುದ್ದೆಗಳು ಹಲವು ವರ್ಷಗಳಿಂದ ಖಾಲಿಯಿವೆ.

ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆ ಇಲ್ಲದ ಕಾರಣ ಪೌರ ಕಾರ್ಮಿಕರು ಕರ್ತವ್ಯಕ್ಕೆ ಗೈರಾದರೂ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ವಂಚಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಪೌರ ಕಾರ್ಮಿಕರ ಕೊರತೆ ನಡುವೆಯೂ ತ್ಯಾಜ್ಯ ನಿರ್ವಹಣೆಯು ನಗರಸಭೆಗೆ ದೊಡ್ಡ ಸವಾಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು