ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಜ್ಜಾಗಿ

Last Updated 5 ಸೆಪ್ಟೆಂಬರ್ 2020, 14:00 IST
ಅಕ್ಷರ ಗಾತ್ರ

ಕೋಲಾರ: ‘ಮೆಕಾಲೆ ಶಿಕ್ಷಣ ಪದ್ಧತಿಯ ದಾಸ್ಯದಿಂದ ಹೊರಬಂದು ಬಲಿಷ್ಠ ಭಾರತಕ್ಕಾಗಿ ಪ್ರಧಾನಿ ಮೋದಿಯವರು ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಶಿಕ್ಷಕರು ಸಜ್ಜಾಗಬೇಕು’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.

ಇಲ್ಲಿ ಶನಿವಾರ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ‘ಶಿಕ್ಷಣ ಎಂದರೆ ಅಂಕ ಗಳಿಕೆ ಮಾತ್ರವಲ್ಲ, ಜ್ಞಾನ ತುಂಬುವುದಾಗಿದೆ. ಶಿಕ್ಷಣದ ಜ್ಞಾನ ದೀವಿಗೆ ಮೂಲಕ ಯುವ ಪೀಳಿಗೆಗೆ ದಾರಿ ತೋರದಿದ್ದರೆ ದೇಶ ಕಷ್ಟಕ್ಕೆ ಸಿಲುಕುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ದೇಶದ ಪ್ರತಿಭಾವಂತ ಸಾಧಕರು ಬೇರೆ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಿ ಅವರಿಗೆ ದೇಶದಲ್ಲೇ ಬದುಕಲು ವೇದಿಕೆ ಕಲ್ಪಿಸುವ ರಾಷ್ಟ್ರೀಯ ಶಿಕ್ಷಣ ಪದ್ಧತಿಯು ಮೋದಿಯವರ ದೂರದೃಷ್ಟಿಯ ನಡೆ’ ಎಂದು ಬಣ್ಣಿಸಿದರು.

‘ಈ ಹಿಂದೆ ಕಾಂಗ್ರೆಸ್ ಸರ್ಕಾರ 10 ಸಾವಿರ ಶಿಕ್ಷಕರಿಗಾಗಿ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸಿದಾಗ 1,500 ಮಂದಿ ಮಾತ್ರ ಇತ್ತೀರ್ಣರಾಗಿದ್ದರು. ಇಂತಹ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳ ಅಗತ್ಯವಿಲ್ಲ. ಮಕ್ಕಳಲ್ಲಿ ಜ್ಞಾನ ತುಂಬಬೇಕು. ಉತ್ತರದಾಯಿತ್ವ ಕೊಡುವ ಶಕ್ತಿ ತುಂಬಬೇಕು. ಅಂತಹ ಜೀವನ ಪರಿಕಲ್ಪನೆ ರೂಪಿಸುವ ಶಿಕ್ಷಣ ಬೇಕು’ ಎಂದರು.

‘ಉತ್ತಮ ಶಿಕ್ಷಕರ ಆಯ್ಕೆಗೆ ಅರ್ಜಿ ಹಾಕಿಕೊಳ್ಳುವ ಪದ್ಧತಿ ಕೊನೆಗೊಳ್ಳಬೇಕು. ಸ್ವತಂತ್ರ ಸಂಸ್ಥೆಯಿಂದ ಶಿಕ್ಷಕರ ಆಯ್ಕೆ ನಡೆಯಬೇಕು. ಶಿಕ್ಷಕರು ಪ್ರಶಸ್ತಿಗೆ ಅರ್ಜಿ ಹಾಕಿಕೊಳ್ಳುವುದು ದುರಂತ. ಪ್ರಶಸ್ತಿಗೆ ಶಿಕ್ಷಕರ ಆಯ್ಕೆ ಪದ್ಧತಿಯಲ್ಲಿ ಬದಲಾವಣೆ ತರಲು ಪ್ರಾಥಮಿಕ ಶಿಕ್ಷಣ ಸಚಿವರು ಮುಂದಾಗಿದ್ದಾರೆ’ ಎಂದು ವಿವರಿಸಿದರು.

ಕ್ರಾಂತಿಕಾರಿ ಹೆಜ್ಜೆ: ‘ಬೆಲ್ ಹಾಗೂ ಬಿಲ್‌ಗೆ ಸೀಮಿತರಾದ ಶಿಕ್ಷಕರು ತಮ್ಮ ಧೋರಣೆ ಬದಲಿಸಿಕೊಳ್ಳಬೇಕು. ದೇಶದಲ್ಲಿ ಶೇ 40ರಷ್ಟು ಯುವಶಕ್ತಿ ಇದೆ. 30 ಕೋಟಿ ಮಂದಿ ವಿವಿಧ ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಮೋದಿ ಹೊಸ ಶಿಕ್ಷಣ ನೀತಿಯು ಕ್ರಾಂತಿಕಾರಿ ಹೆಜ್ಜೆಯಾಗಿದೆ. ರಾಮಕೃಷ್ಣ ಪರಮಹಂಸರು-ವಿವೇಕಾನಂದರ ಗುರುಶಿಷ್ಯ ಪರಂಪರೆಗೆ ಧಕ್ಕೆಯಾಗದಂತೆ ಬಲಿಷ್ಠ ಭಾರತ ನಿರ್ಮಾಣದಲ್ಲಿ ಶ್ರೇಷ್ಠ ಗುರುಗಳಾಗಿ ಕಾರ್ಯ ನಿರ್ವಹಿಸಿ’ ಎಂದು ಕಿವಿಮಾತು ಹೇಳಿದರು.

‘ಡ್ರಗ್ಸ್ ಜಾಲದಿಂದ ಇಡೀ ರಾಜ್ಯಕ್ಕೆ ಕಳಂಕ ಎದುರಾಗಿದೆ. ಶಾಲೆ, ಕಾಲೇಜುಗಳಿಗೆ ಡ್ರಗ್ಸ್‌ ಜಾಲ ಹರಡದಂತೆ ಎಚ್ಚರ ವಹಿಸಬೇಕು. ಆತ್ಮವಂಚನೆ ಮಾಡಿಕೊಳ್ಳದೆ ಈ ಕೃತ್ಯದಲ್ಲಿ ಭಾಗಿಯಾದ ಎಲ್ಲರಿಗೂ ಶಿಕ್ಷೆಯಾಗಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT