ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಕೊಳವೆ ಬಾವಿ ವಶಕ್ಕೆ ಪಡೆಯಿರಿ: ಜಿಲ್ಲಾಧಿಕಾರಿ ಮಂಜುನಾಥ್‌ ಆದೇಶ

ಪ್ರಗತಿ ಪರಿಶೀಲನಾ ಸಭೆ
Last Updated 24 ಮೇ 2019, 15:41 IST
ಅಕ್ಷರ ಗಾತ್ರ

ಕೋಲಾರ: ‘ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿ ಬಾಡಿಗೆಗೆ ಪಡೆದು ನೀರು ಪೂರೈಸಿ. ಕೊಳವೆ ಬಾವಿ ಮಾಲೀಕರು ನೀರು ಕೊಡಲು ಒಪ್ಪದಿದ್ದರೆ ಕೊಳವೆ ಬಾವಿ ವಶಕ್ಕೆ ಪಡೆದು ನೀರು ಕೊಡಿ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಧಿಕಾರಿಗಳಿಗೆ ಆದೇಶಿಸಿದರು.

ಬರ ಕಾಮಗಾರಿಗಳ ನಿರ್ವಹಣೆ ಕುರಿತು ಇಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಈಗಾಗಲೇ ನೀರಿನ ಸಮಸ್ಯಾತ್ಮಕ ಗ್ರಾಮಗಳಿಗೆ 178 ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಈ ಗ್ರಾಮಗಳಿಗೂ ಖಾಸಗಿ ಕೊಳವೆ ಬಾವಿ ನೀರು ಪಡೆದುಕೊಳ್ಳಲು ಆದ್ಯತೆ ನೀಡಿ’ ಎಂದು ಸೂಚಿಸಿದರು.

‘ಟ್ಯಾಂಕರ್ ಮತ್ತು ಖಾಸಗಿ ಕೊಳವೆ ಬಾವಿ ಮಾಲೀಕರಿಗೆ ಪಾವತಿಸುವ ಬಿಲ್‌ನ ವರದಿಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗೆ ಸಲ್ಲಿಸಬೇಕು. ಆದ ಕಾರಣ ಪ್ರತಿ 15 ದಿನಕ್ಕೊಮ್ಮೆ ಟ್ಯಾಂಕರ್ ಮತ್ತು ಖಾಸಗಿ ಕೊಳವೆ ಬಾವಿ ಮಾಲೀಕರ ಬಿಲ್‌ ತಪ್ಪದೇ ನೀಡಿ. ಬಿಲ್‌ನ ಜತೆ ನೀರು ಪೂರೈಸಲು ನೀಡಿರುವ ಅನುಮತಿ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಿ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಬಿಲ್‌ಗಳ ಲೆಕ್ಕ ಪರಿಶೋಧನೆಗೆ ಸಕಾಲಕ್ಕೆ ದಾಖಲೆಪತ್ರ ಸಲ್ಲಿಸಿ’ ಎಂದು ತಿಳಿಸಿದರು.

ಗ್ರಾಮಗಳ ಪಟ್ಟಿ ಮಾಡಿ: ‘ಜಿಲ್ಲೆಯಲ್ಲಿ ಈಗಾಗಲೇ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ. ಇದರ ಜತೆಗ ಮುಂದೆ ಸಮಸ್ಯೆ ಸೃಷ್ಟಿಯಾಗಲಿರುವ ಗ್ರಾಮಗಳ ಪಟ್ಟಿ ಮಾಡಿ ನೀರು ಪೂರೈಸಬೇಕು. ಹೊಸದಾಗಿ ಕೊರೆಸುವ ಕೊಳವೆ ಬಾವಿಗಳಿಗೆ ಬಾಕಿ ಉಳಿದಿರುವ ಹಳೆಯ ಪಂಪ್‌, ಮೋಟರ್‌ ಅಳವಡಿಸಿ’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ್ ಹೇಳಿದರು.

‘14ನೇ ಹಣಕಾಸು ಅನುದಾನದಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಆದ್ಯತೆ ನೀಡಿ ಹೆಚ್ಚಿನ ಅನುದಾನ ಬಳಕೆ ಮಾಡಿಕೊಳ್ಳಲು ಗ್ರಾಮ ಪಂಚಾಯಿತಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ವರ್ಷವನ್ನು ‘ಜಲಾಮೃತ’ ವರ್ಷವೆಂದು ಘೋಷಿಸಲಾಗಿದ್ದು, ನರೇಗಾ ಯೋಜನೆಯಲ್ಲಿ ನೀರಿನ ಸಂಗ್ರಹಣೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ’ ಎಂದು ವಿವರಿಸಿದರು.

‘ಪ್ರಸಕ್ತ ವರ್ಷದಲ್ಲಿ ನರೇಗಾ ಅಡಿ 50 ಲಕ್ಷ ಮಾನವ ದಿನ ಸೃಜಿಸುವ ಗುರಿಯಿತ್ತು. ಈಗಾಗಲೇ 5 ಲಕ್ಷ ಮಾನವ ದಿನ ಸೃಜಿಸಲಾಗಿದೆ. ಜಿಲ್ಲೆಯಿಂದ ಕೆಲಸ ಇಲ್ಲವೆಂದು ಯಾರೂ ಗುಳೆ ಹೋಗದಂತೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT