ಬುಧವಾರ, ಡಿಸೆಂಬರ್ 8, 2021
28 °C
ಜಿಲ್ಲೆಯ ಭರತ್‌ ಯುಪಿಎಸ್‌ಸಿ ಪರೀಕ್ಷೆಯಲ್ಲಿ 545ನೇ ರ‍್ಯಾಂಕ್

ಕೋಲಾರ | ‘ಚಿನ್ನ’ದೂರಿನ ಹುಡುಗನ ಚಿನ್ನದ ಸಾಧನೆ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ (ಯುಪಿಎಸ್‌ಸಿ) ‘ಚಿನ್ನದ ಊರಿನ’ ಹೆಮ್ಮೆಯ ಪುತ್ರ ಕೆ.ಆರ್‌.ಭರತ್‌ 545ನೇ ರ‍್ಯಾಂಕ್‌ ಗಳಿಸುವ ಮೂಲಕ ಚಿನ್ನದ ಸಾಧನೆ ಮಾಡಿದ್ದಾರೆ.

ಮುಳಬಾಗಿಲು ತಾಲ್ಲೂಕಿನ ಕಪ್ಪಲಮಡಗು ಗ್ರಾಮದ ಭರತ್‌ ಅವರು ಓದಿನಲ್ಲಿ ಸದಾ ಮುಂದೆ. ಮುಳಬಾಗಿಲು ನಗರದ ಸೇಂಟ್‌ ಆನ್ಸ್‌ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪೂರೈಸಿದ ಇವರು ಜಿಲ್ಲಾ ಕೇಂದ್ರದ ಸಹ್ಯಾದ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಓದಿದ್ದರು. ನಂತರ ಬೆಂಗಳೂರಿನ ದಯಾನಂದ ಸಾಗರ್‌ ಕಾಲೇಜಿನಲ್ಲಿ ಬಿ.ಇ ಪದವಿ ಶಿಕ್ಷಣ ಪಡೆದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 91, ದ್ವಿತೀಯ ಪಿಯುಸಿಯಲ್ಲಿ ಶೇ 88 ಹಾಗೂ ಬಿ.ಇ ಪದವಿಯಲ್ಲಿ ಶೇ 70 ಫಲಿತಾಂಶ ಪಡೆದಿದ್ದ ಇವರು ಗುರುಗಳ ಅಚ್ಚುಮೆಚ್ಚಿನ ವಿದ್ಯಾರ್ಥಿ. ಭರತ್‌ ಅವರ ತಂದೆ ರಘುನಾಥ್‌ರಾವ್‌ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಉದ್ಯೋಗಿಯಾಗಿದ್ದಾರೆ. ತಾಯಿ ವಾಸವಿ ಗೃಹಿಣಿಯಾಗಿದ್ದಾರೆ.

ಬಿ.ಇ ಓದುತ್ತಿರುವಾಗಲೇ ಭರತ್‌ ಅವರಿಗೆ ಇನ್ಫೋಸಿಸ್‌ ಕಂಪನಿಯಲ್ಲಿ ಎಂಜಿನಿಯರ್‌ ಕೆಲಸ ಸಿಕ್ಕಿತ್ತು. ಆದರೆ, ಕೆಲಸಕ್ಕೆ ಸೇರದೆ ಯುಪಿಎಸ್‌ಸಿ ಪರೀಕ್ಷೆಯ ಗುರಿ ಸಾಧನೆಯುತ್ತ ಮುಖ ಮಾಡಿದ ಭರತ್‌ ಪರೀಕ್ಷೆಗೆ ಸಿದ್ಧತೆ ಮುಂದುವರಿಸಿದರು. 2015ರಿಂದ 4 ಬಾರಿ ಯುಪಿಎಸ್‌ ಪರೀಕ್ಷೆ ಬರೆದ ಇವರು 2 ಬಾರಿ ಮುಖ್ಯ ಹಂತದ ಪರೀಕ್ಷೆಗೆ ಆಯ್ಕೆಯಾಗಿದ್ದರು. ಆದರೆ, ಸಂದರ್ಶನದ ಹಂತಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ.

ಆದರೂ ಛಲ ಬಿಡದ ತ್ರಿವಿಕ್ರಮನಂತೆ ಪ್ರಯತ್ನ ಮುಂದುವರಿಸಿದ ಭರತ್‌ ಅವರು ಇಬ್ಬರು ಸ್ನೇಹಿತರ ಜತೆ ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಪರೀಕ್ಷೆಗೆ ಸಿದ್ಧರಾಗುತ್ತಿದ್ದರು. ಟ್ಯುಟೋರಿಯಲ್‌ ಅಥವಾ ಕೋಚಿಂಗ್‌ ಸೆಂಟರ್‌ಗಳಿಗೆ ಸೇರದೆ ಮನೆಯಲ್ಲೇ ಅಭ್ಯಾಸ ಮಾಡುತ್ತಿದ್ದರು.

ಪೋಷಕರು ಬೆನ್ನೆಲುಬು: ‘ಪೋಷಕರು ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತರು. ನನ್ನ ಯಶಸ್ಸಿನ ಸಂಪೂರ್ಣ ಶ್ರೇಯ ತಂದೆ ತಾಯಿಗೆ ಸಲ್ಲಬೇಕು. ಅವರು ಪ್ರತಿ ಹಂತದಲ್ಲೂ ನನಗೆ ವಿಶ್ವಾಸ ತುಂಬಿ ಮುನ್ನಡೆಸಿದರು’ ಎಂದು ಭರತ್‌ ಪೋಷಕರನ್ನು ಸ್ಮರಿಸಿದರು.

‘ಗ್ರಾಮೀಣ ಭಾಗದ ಮಕ್ಕಳೆಂಬ ಕಾರಣಕ್ಕೆ ಕೀಳರಿಮೆ ಬೇಡ. ನಾನೂ ಗ್ರಾಮೀಣ ವಿದ್ಯಾರ್ಥಿಯೇ. ಕೀಳರಿಮೆ ಬಿಟ್ಟು ಗುರಿ ಸಾಧನೆ ಹಾದಿಯಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಯುಪಿಎಸ್‌ಸಿ ಪರೀಕ್ಷೆಗೆ ದೆಹಲಿಯಲ್ಲಿ ಒಳ್ಳೆಯ ಕೋಚಿಂಗ್‌ ಸೆಂಟರ್‌ಗಳಿವೆ ಎಂದು ವಿದ್ಯಾರ್ಥಿಗಳು ಪೂರ್ವಾಗ್ರಹ ಪೀಡಿತರಾಗಿದ್ದಾರೆ. ಆದರೆ, ಬೆಂಗಳೂರಿನಲ್ಲೇ ಒಳ್ಳೆಯ ಕೋಚಿಂಗ್‌ ಸೆಂಟರ್‌ಗಳಿವೆ’ ಎಂದು ಹೇಳಿದರು.

ವಿಶ್ವಾಸವಿತ್ತು: ‘ಮೊದಲಿನಿಂದಲೂ ಓದಿನಲ್ಲಿ ಮುಂದಿದ್ದ ಮಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಖಂಡಿತ ರ್‌್ಯಾಂಕ್‌ ಪಡೆಯುತ್ತಾನೆ ಎಂಬ ವಿಶ್ವಾಸವಿತ್ತು. ಈಗ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದಿರುವುದರಿಂದ ತುಂಬಾ ಸಂತೋಷವಾಗಿದೆ’ ಎಂದು ರಘುನಾಥ್‌ರಾವ್‌ ‘ಪ್ರಜಾವಾಣಿ’ ಜತೆ ಸಂತಸ ಹಂಚಿಕೊಂಡರು.

‘ಮಕ್ಕಳಿಗೆ ಆಸ್ತಿ ಸಂಪಾದಿಸಿ ಇಡಬಾರದು. ಬದಲಿಗೆ ಶಿಕ್ಷಣ ಕೊಡುವ ಮೂಲಕ ಅವರನ್ನೇ ದೊಡ್ಡ ಆಸ್ತಿಯಾಗಿ ಮಾಡಬೇಕು. ಮಗ ಸತತ ಪ್ರಯತ್ನ ಮತ್ತು ಶ್ರಮದಿಂದ ಈ ಸಾಧನೆ ಮಾಡಿದ್ದಾನೆ. ಆತನ ಸಾಧನೆ ಜಿಲ್ಲೆಯ ಮಕ್ಕಳಿಗೆ ಮಾದರಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಬ್ಬದ ವಾತಾವರಣ: ಭರತ್‌ ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ ವಿಷಯ ತಿಳಿಯುತ್ತಿದ್ದಂತೆ ಅವರ ಸ್ನೇಹಿತರು ಹಾಗೂ ಸಂಬಂಧಿಕರು ಕಪ್ಪಲಮಡಗು ಗ್ರಾಮದಲ್ಲಿನ ಮನೆಗೆ ಬಂದು ಅಭಿನಂದಿಸಿದರು. ಮನೆಯಲ್ಲಿ ಹಬ್ಬದ ವಾತಾವರಣವಿತ್ತು. ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು ಸಿಹಿ ಹಂಚಿ ಸಂಭ್ರಮಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು