ಸೋಮವಾರ, ಅಕ್ಟೋಬರ್ 21, 2019
24 °C
ಸಭೆಯಲ್ಲಿ ಕಾರ್ಯದರ್ಶಿಗಳಿಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಸೂಚನೆ

ಸೊಸೈಟಿ ಆಡಳಿತ ಮಂಡಳಿ: ಚುನಾವಣೆ ನಡೆಸಿ

Published:
Updated:
Prajavani

ಕೋಲಾರ: ‘ಸೊಸೈಟಿಗಳ ಆಡಳಿತ ಮಂಡಳಿಯ ಅಧಿಕಾರಾವಧಿ ಮುಗಿದಿದ್ದರೆ ಕಾರ್ಯದರ್ಶಿಗಳು ಚುನಾವಣೆ ನಡೆಸಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಸೂಚಿಸಿದರು.

ಇಲ್ಲಿ ಶನಿವಾರ ನಡೆದ ಸೊಸೈಟಿ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿ, ‘ಆಡಳಿತ ಮಂಡಳಿಯ ಅಧಿಕಾರಾವಧಿ ಮುಗಿದಿದ್ದರೆ ಯಾವುದೇ ಕೆಲಸ ನಡೆಯುವುದಿಲ್ಲ. ಹೀಗಾಗಿ ಜನರ ಹಿತದೃಷ್ಟಿಯಿಂದ ಚುನಾವಣೆ ನಡೆಸಲು ದಿನಾಂಕ ನಿಗದಿ ಮಾಡಿ’ ಎಂದು ಸಲಹೆ ನೀಡಿದರು.

‘ಸೊಸೈಟಿಗಳನ್ನು ಗಣಕೀಕರಣಗೊಳಿಸುವುದರಿಂದ ಜನರಿಗೆ ನಂಬಿಕೆ ಬರುತ್ತದೆ. ಜತೆಗೆ ಪಾರದರ್ಶಕ ಆಡಳಿತ ಸೇವೆ ಕಲ್ಪಿಸಬಹುದು. ಶಿಥಿಲಗೊಂಡಿರುವ ಸೊಸೈಟಿ ಕಟ್ಟಡಗಳನ್ನು ವಾರದೊಳಗೆ ದುರಸ್ತಿ ಮಾಡಬೇಕು. ವಿದ್ಯುತ್ ಸಂಪರ್ಕ ಸಮರ್ಪಕವಾಗಿ ಇರಬೇಕು. ಎಲ್ಲಾ ಸೊಸೈಟಿಗಳು ಆರ್ಥಿಕವಾಗಿ ಶಕ್ತಿಯುತವಾಗಿದ್ದು, ಕೂಡಲೇ ಕೆಲಸ ಆರಂಭಿಸಬೇಕು’ ಎಂದು ತಾಕೀತು ಮಾಡಿದರು.

ಸಭೆಯಲ್ಲಿ ಕೆಲ ಸೊಸೈಟಿ ಕಾರ್ಯದರ್ಶಿಗಳು ವೇತನ ನಿಗದಿಪಡಿಸುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗೋವಿಂದಗೌಡ, ‘ಕೆಲಸದ ಆಧಾರದ ಮೇಲೆ ವೇತನ ಪಾವತಿಯಾಗುತ್ತದೆ. ಅಲ್ಪ ಸ್ವಲ್ಪ ಕೆಲಸವನ್ನು ಕಾಲಮಿತಿಯಲ್ಲಿ ಮಾಡಲು ಆಗುವುದಿಲ್ಲ. ಸರಿಯಾಗಿ ಕೆಲಸ ಮಾಡಿದರೆ ವೇತನ ನಿಗದಿಯಾಗುತ್ತದೆ’ ಎಂದರು.

‘ಆರ್ಥಿಕವಾಗಿ ಸದೃಢವಾಗಿರುವ ಸೊಸೈಟಿಗಳ ಸುತ್ತ ಕಳ್ಳರು ಸುತ್ತಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳನ್ನು ಸೊಸೈಟಿಯೊಳಗೆ ಬಿಟ್ಟುಕೊಳ್ಳಬೇಡಿ. ಕೆಲ ಸೊಸೈಟಿಗಳಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ಅಕ್ರಮ ತಡೆಗಾಗಿ ಸೊಸೈಟಿ ಕಾರ್ಯ ಚಟುವಟಿಕೆಗಳನ್ನು ಗಣಕೀರಣಗೊಳಿಸಬೇಕು’ ಎಂದು ತಿಳಿಸಿದರು.

ಕಾರ್ಯದರ್ಶಿಗಳ ಪಾತ್ರ: ‘ಬ್ಯಾಂಕ್ ಮತ್ತು ಸೊಸೈಟಿಗಳಿಗೆ ಶಕ್ತಿ ತುಂಬಲು ಆಡಳಿತ ಮಂಡಳಿಯು ಹಗಲು ರಾತ್ರಿ ಕೆಲಸ ಮಾಡುತ್ತಿದೆ. ಬ್ಯಾಂಕ್‌ಗೆ ಹಿಂದಿನ ಪರಿಸ್ಥಿತಿ ಎದುರಾಗದಂತೆ ನೋಡಿಕೊಳ್ಳಲಾಗುತ್ತಿದೆ. ಬ್ಯಾಂಕ್‌ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿರುವುದರ ಹಿಂದೆ ಕಾರ್ಯದರ್ಶಿಗಳ ಪಾತ್ರವಿದೆ’ ಎಂದು ಹೇಳಿದರು.

‘ಕೋಟಿಗಟ್ಟಲೇ ವಹಿವಾಟು ನಡೆಯುತ್ತಿರುವುದರಿಂದ ಹಣ ದುರುಪಯೋಗದ ಭಯ ಶುರುವಾಗಿದೆ. ನಗದು ಪುಸ್ತಕ, ಶೆಡ್ಯೂಲ್ ಮತ್ತು ಸಾಲದ ಪಟ್ಟಿ ನಿರ್ವಹಣೆ ಸಮರ್ಪಕವಾಗಿರಬೇಕು. ಆನ್‌ಲೈನ್ ಮಾಹಿತಿ ಮತ್ತು ದಾಖಲೆಪತ್ರದಲ್ಲಿನ ವಿವರ ತಾಳೆಯಾಗಬೇಕು’ ಎಂದು ಸೂಚನೆ ನೀಡಿದರು.

‘ಪ್ರತಿ ವಿಧಾನಸಭಾ ಕ್ಷೇತ್ರದಿಂದ ಶಾಸಕರು ಅನುದಾನದಲ್ಲಿ ₹ 25 ಲಕ್ಷ ಕೊಡಲು ಒಪ್ಪಿದ್ದಾರೆ. ಇಬ್ಬರು ಕಾರ್ಯದರ್ಶಿಗಳು ಕಾರ್ಯ ನಿರ್ವಹಿಸುತ್ತಿರುವ ಸೊಸೈಟಿಯಿಂದ ಕಾರ್ಯದರ್ಶಿ ಹುದ್ದೆ ಖಾಲಿಯಿರುವ ಸೊಸೈಟಿಗೆ ವರ್ಗಾವಣೆ ಮಾಡಲಾಗುವುದು. ಆಸಕ್ತಿಯಿಂದ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ. ಕೆಲಸದಲ್ಲೇ ಮುಂದುವರಿದು ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸದಿದ್ದರೆ ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

Post Comments (+)