ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಂಡರ್‌ಗೆ ಸರ್ಕಾರದಿಂದ ತಡೆ: ವಿರೋಧ

ರೈತ ಸಂಘದ ಕಾರ್ಯಕರ್ತರಿಂದ ಹಸುಗಳ ಸಮೇತ ಧರಣಿ
Last Updated 9 ಮಾರ್ಚ್ 2020, 11:26 IST
ಅಕ್ಷರ ಗಾತ್ರ

ಕೋಲಾರ: ಕೋಚಿಮುಲ್ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಟೆಂಡರ್‌ನ್ನು ರದ್ದುಪಡಿಸುವಂತೆ ಆದೇಶ ಹೊರಡಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಇಲ್ಲಿನ ಮೆಕ್ಕೆ ವೃತ್ತದಲ್ಲಿ ಸೋಮವಾರ ಹಸುಗಳ ಸಮೇತ ಧರಣಿ ನಡೆಸಿದರು.

ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ‘ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಸಹಕಾರಿ ಸಚಿವರ ಮೇಲೆ ಒತ್ತಡ ಹಾಕಿಸಿ ಟೆಂಡರ್‌ಗಳ ಆದೇಶವನ್ನು ರದ್ದುಗೊಳಿಸುವ ಮೂಲಕ ರೈತ ವಿರೋಧಿ ತೀರ್ಮಾನಕೈಗೊಂಡಿದ್ದಾರೆ’ ಎಂದು ದೂರಿದರು.

‘ಕೋಚಿಮುಲ್‌ನಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೇಘಾ ಡೇರಿ ನಿರ್ಮಿಸಿದೆ. ಇದರ ಜತೆಗೆ ₹ 130 ಕೋಟಿ ವೆಚ್ಚದಲ್ಲಿ ದಿವಂಗತ ಎಂ.ವಿ.ಕೃಷ್ಣಪ್ಪ ಜನ್ಮ ಶತಮಾನೋತ್ಸವದ ಅಂಗವಾಗಿ ಎಂವಿಕೆ ಗೋಲ್ಡನ್ ಡೇರಿ ನಿರ್ಮಿಸಲು ತೀರ್ಮಾನಕೈಗೊಂಡು ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಆದರೆ ರಾಜಕೀಯ ದುರುದ್ದೇಶವಿಟ್ಟುಕೊಂಡು ಆದೇಶ ಹೊರಡಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ’ ಎಂದು ಆರೋಪಿಸಿದರು.

‘ಸತತ ಬರಗಾಲದಿಂದ ತತ್ತರಿಸಿ ಹೋಗಿರುವ ರೈತರು ಹೈನೋದ್ಯಮವನ್ನೆ ಜೀವನಾಡಿ ಎಂದು ಭಾವಿಸಿದ್ದಾರೆ. ಬರದ ಪರಿಸ್ಥಿತಿಯಲ್ಲೂ ರೈತರು ನಿರೀಕ್ಷೆಗೂ ಮೀರಿ ಹಾಲು ಉತ್ಪಾದಿಸಿ ಒಕ್ಕೂಟಕ್ಕೆ ಪೂರೈಕೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತ ವಿರೋಧಿ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ರೈತರನ್ನು ಬೀದಿಪಾಲು ಮಾಡಲು ಸಂಚು ರೂಪಿಸಿದ್ದಾರೆ’ ಎಂದು ಗುಡುಗಿದರು.

‘ಖಾಸಗಿ ಡೇರಿಗಳಿಗೆ ಉತ್ತೇಜನ ನೀಡುವ ಉದ್ದೇಶ ಸರ್ಕಾರದಾಗಿದೆ. ಎಂವಿಕೆ ಗೋಲ್ಡನ್ ಡೇರಿ ನಿರ್ಮಾಣಕ್ಕೆ ಅಡ್ಡಿಪಡಿಸುವ ಮೂಲಕ ಎಂ.ವಿ.ಕೃಷ್ಣಪ್ಪ ಅವರಿಗೆ ಅಗೌರವ ತೋರಿದ್ದಾರೆ. ಕೋಚಿಮುಲ್ ಸ್ಥಾಪನೆಯ ಬಗ್ಗೆ ಅರಿವಿಲ್ಲದೆ ತೀರ್ಮಾನಕೈಗೊಂಡಿದ್ದಾರೆ. ಸಚಿವ ಸುಧಾಕರ್ ವರ್ತನೆ ಸರಿಮಾಡಿಕೊಳ್ಳದಿದ್ದರೆ ತೀವ್ರ ಹೋರಾಟ ನಡೆಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ ಮಾತನಾಡಿ, ‘ರೈತರು ನಷ್ಟಕ್ಕೆ ಒಳಗಾಗಬಾರದು ಎಂಬ ಉದ್ದೇಶದಿಂದ ಒಕ್ಕೂಟ ಹಾಲಿನ ದರ ಹೆಚ್ಚಳ ಮಾಡಿದೆ. ಎರಡೂ ಜಿಲ್ಲೆಗೆ ಒಂದೇ ಒಕ್ಕೂಟವಿದ್ದು ಆಡಳಿತ ಮಂಡಳಿಯವರು ಯಾವುದೇ ರೀತಿ ತಾರತಮ್ಯ ತೋರುತ್ತಿಲ್ಲ, ಸಚಿವರು ಹೊರೆಡಿಸಿರುವ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಪದಾಧಿಕಾರಿಗಳಾದ ಪುಷ್ಪಾ, ತಿಮ್ಮಣ್ಣ, ಪಿ.ಮುನಿಯಪ್ಪ, ನಾಗೇಶ್, ವೆಂಕಟೇಶಪ್ಪ, ಹನುಮಯ್ಯ, ಸಹದೇವಣ್ಣ, ವೆಂಕಟೇಶಪ್ಪ, ಭಕ್ತನ್, ರಾಮಣ್ಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT