ಶುಕ್ರವಾರ, ಡಿಸೆಂಬರ್ 13, 2019
24 °C
ಗ್ರಾ.ಪಂ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಕೃಷ್ಣಬೈರೇಗೌಡ ಆರೋಪ

ಕೆಸಿ ವ್ಯಾಲಿ 2ನೇ ಹಂತ ಅನುಷ್ಟಾನಕ್ಕೆ ಸರ್ಕಾರ ನಿರ್ಲಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೆಸಿ ವ್ಯಾಲಿ ಯೋಜನೆಯಿಂದ ಅವಿಭಜಿತ ಕೋಲಾರ ಜಿಲ್ಲೆಯ 150 ಕೆರೆಗಳಿಗೆ 2ನೇ ಹಂತದಲ್ಲಿ ನೀರು ಹರಿಸಲು ಸಮ್ಮಿಶ್ರ ಸರ್ಕಾರದಲ್ಲಿ ಟೆಂಡರ್ ಅಗಿದ್ದು, ಅದನ್ನು ಕಾರ್ಯಗತಗೊಳಿಸಲು ಈಗಿನ ಸರ್ಕಾರಕ್ಕೆ ಬದ್ಧತೆಯಿಲ್ಲ’ ಎಂದು ಶಾಸಕ ಕೃಷ್ಣಬೈರೇಗೌಡ ಆರೋಪಿಸಿದರು.

ತಾಲ್ಲೂಕಿನ ಅಮ್ಮನಲ್ಲೂರು ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘2ನೇ ಹಂತದಲ್ಲಿ ₨ 450 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿಸಲಾಗಿದ್ದು, ಇದರ ಕಡೆ ಜಿಲ್ಲಾ ಉಸ್ತುವಾರಿ ಸಚಿವರು ಗಮನಹರಿಸುತ್ತಿಲ್ಲ’ ಎಂದರು.

‘ಮೊದಲ ಹಂತದಲ್ಲಿ ತುಂಬಿ ೧೩೦ ಕೆರೆಗಳಿಗೆ ಹತ್ತಿರ ಇರುವ ಕೆರೆಗಳ ಸಾಲಿಗೆ ನೀರನ್ನು ಪಂಪ್ ಮಾಡಿ ಹರಿಸಲಾಗುತ್ತಿದೆ. ಚಿಂತಾಮಣಿ ತಾಲ್ಲೂಕಿನ ಮಾಡಿಕೆರೆ ಕೆರೆ ಬಳಿ ಪಂಪ್‌ಹೌಸ್ ನಿರ್ಮಾಣ ಮಾಡಿ ಅಲ್ಲಿಂದ ಕೈವಾರ, ಮೈಲಾಪುರ, ಚಿನ್ನಸಂದ್ರ, ಹೀರೆಕಟ್ಟಿಗೇನಹಳ್ಳಿ, ಕುರುಬೂರು ಕೆರೆಗಳಿಗೆ ನೀರು ಹರಿಸಲು ಅಂದಾಜು ಪಟ್ಟಿ ತಯಾರಿಸಲಾಗಿದೆ’ ಎಂದರು.

‘ಈಗಿನ ಉಸ್ತುವಾರಿ ಸಚಿವರಿಗೆ ಈ ಬಗ್ಗೆ ಬದ್ಧತೆ ಇದ್ದಂತಿಲ್ಲ. ಬೆಂಗಳೂರಿನಲ್ಲಿ ನೀರು ವ್ಯರ್ಥವಾಗಿ ಹೋಗುತ್ತಿದೆ, ಅಲ್ಲಿಂದ ಕೆಸಿ ವ್ಯಾಲಿ ಮೂಲಕ ನೀರನ್ನು ೩೦೦ ರಿಂದ ೪೦೦ ಎಂಎಲ್‌ಡಿಗೆ ಏರಿಸುವ ಪ್ರಯತ್ನ ನಡೆಸಬೇಕಾಗಿತ್ತು ಆದರೆ ಆ ಕಾರ್ಯ ನಡೆಯುತ್ತಿಲ್ಲ ಉಸ್ತುವಾರಿ ಸಚಿವರಿಗೆ ಆ ಮಾಹಿತಿ ಇದೆಯೋ ಇಲ್ಲವೋ ಗೊತ್ತಿಲ್ಲ’ ಎಂದು ವಿಷಾದಿಸಿದರು.

‘ಎತ್ತಿನ ಹೊಳೆ ಯೋಜನೆ ಕುಡಿಯುವ ನೀರಿನ ಯೋಜನೆಯಾಗಿದ್ದು, ೧೫೦ ಕೆರೆಗಳನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿ ಸರ್ಕಾರ ಬಂದ ಮೇಲೆ ಯೋಜನೆ ಕಾಮಗಾರಿ ಮಂದಗತಿಯಾಗಿದೆ. ದೊಡ್ಡಬಳ್ಳಾಪುರ, ಕೊರಟಗೆರೆ ಬಳಿ ಡ್ಯಾಂ ನಿರ್ಮಿಸಲು ಭೂಸ್ವಾಧೀನ ಪ್ರಕ್ರಿಯೆ ತಡವಾಗಿದೆ, ಇದಕ್ಕೆ ಸರ್ಕಾರದ ನಿರ್ಲಕ್ಷವೇ ಕಾರಣ’ ಎಂದು ಟೀಕಿಸಿದರು.

ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ‘ಕೆಸಿ ವ್ಯಾಲಿ ನೀರನ್ನು ಯಾರು ಸಹ ನೇರವಾಗಿ ಕೃಷಿಗೆ ಬಳಸಬಾರದು. ಯೋಜನೆಯನ್ನು ಅನುಷ್ಟಾನಗೊಳಿಸಿರುವ ಅರಿವು ಪಡೆದುಕೊಂಡು, ಬಳಕೆಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಅಂತರ್ಜಲ ಮಟ್ಟವನ್ನು ವೃದ್ಧಿಸಲು ಕೆಸಿ ವ್ಯಾಲಿ ಯೋಜನೆ ಜಾರಿಗೆ ತರಲಾಗಿದೆ. ಸ್ವಲ್ಪ ದಿನ ಹೋದರೆ ಬತ್ತಿ ಹೋಗಿರುವ ಕೊಳವೆಬಾವಿಗಳು ಮರುಪೂರ್ಣಗೊಂಡು ಅಂತರ್ಜಲ ವೃದ್ಧಿಯಾಗುತ್ತದೆ. ಅಗ ಯಾರು ನಿಮ್ಮನ್ನು ತಡೆಯುವುದಿಲ್ಲ’ ಎಂದು ಹೇಳಿದರು.

ಅಮ್ಮನಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನಮ್ಮ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ಕೆ.ವಿ.ದಯಾನಂದ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ಎನ್.ಪಾಪಣ್ಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ಹಾಜರಿದ್ದರು.

ಪ್ರತಿಕ್ರಿಯಿಸಿ (+)