ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಪಾಲರ ಕೋಲಾರ ಭೇಟಿ ದಿಢೀರ್‌ ರದ್ದು!

ಕಪ್ಪು ಬಾವುಟ ಪ್ರದರ್ಶನ ಎಚ್ಚರಿಕೆ ನೀಡಿದ್ದ ಕಾಂಗ್ರೆಸ್‌ ಅಹಿಂದ ಮುಖಂಡರು
Published : 1 ಸೆಪ್ಟೆಂಬರ್ 2024, 16:54 IST
Last Updated : 1 ಸೆಪ್ಟೆಂಬರ್ 2024, 16:54 IST
ಫಾಲೋ ಮಾಡಿ
Comments

ಕೋಲಾರ: ಕೋಲಾರ ನಗರದಲ್ಲಿ ಸೋಮವಾರ (ಸೆ.2) ನಡೆಯಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನಾಲ್ಕನೇ ವಾರ್ಷಿಕ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಬೇಕಿದ್ದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಕೊನೆ ಗಳಿಗೆಯಲ್ಲಿ ತಮ್ಮ ಪ್ರವಾಸ ರದ್ದುಪಡಿಸಿದ್ದಾರೆ.

ಅನಿವಾರ್ಯ ಕಾರಣಗಳಿಂದ ಪ್ರವಾಸ ರದ್ದಾಗಿರುವ ವಿಚಾರವನ್ನು ರಾಜಭವನ ಕಚೇರಿ ಭಾನುವಾರ ಮಧ್ಯಾಹ್ನ ಖಚಿತಪಡಿಸಿದೆ.

ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಸೋಮವಾರ ಮುಂದುವರಿಯಲಿದೆ. ರಾಜ್ಯಪಾಲರ ಪ್ರವಾಸ ರದ್ದು ಮಾಡಲು ಈ ವಿಚಾರವೂ ಕಾರಣ ಎನ್ನಲಾಗಿದೆ.

ಅಲ್ಲದೆ, ಭಾನುವಾರ ಬೆಳಗ್ಗೆ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಪಕ್ಷದ ಅಹಿಂದ ಒಕ್ಕೂಟದ ಮುಖಂಡರು ಕೋಲಾರಕ್ಕೆ ಸೋಮವಾರ ಭೇಟಿ ನೀಡುತ್ತಿರುವ ರಾಜ್ಯಪಾಲರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸುವ ಎಚ್ಚರಿಕೆಯನ್ನೂ ನೀಡಿದ್ದರು‌.

‘ರಾಜ್ಯಪಾಲರು ಬಿಜೆಪಿ ಮಾತು ಕೇಳಿ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿದ್ದಾರೆ. ಬಿಜೆಪಿ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ. ಸಾಧ್ಯವಾದರೆ ಅವರಿಗೆ ದಿಗ್ಬಂಧನ ವಿಧಿಸುತ್ತೇವೆ’ ಎಂದು ಅಹಿಂದ ಮುಖಂಡರು ಹೇಳಿದ್ದರು.

ಈ ಎಲ್ಲ ಕಾರಣಗಳಿಂದ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯಪಾಲರ ಭೇಟಿ ರದ್ದಾಗಿರುವುದು ಗೊತ್ತಾಗಿದೆ.

ಸೋಮವಾರ ಬೆಳಗ್ಗೆ 11ಕ್ಕೆ ಕೋಲಾರ ನಗರ ಹೊರವಲಯದ ನಂದಿನಿ ಪ್ಯಾಲೆಸ್‌ನಲ್ಲಿ ಘಟಿಕೋತ್ಸವ ನಡೆಯಲಿದೆ. ಈ ಸಂಬಂಧ ವಿಶ್ವವಿದ್ಯಾಲಯ ಈಗಾಗಲೇ ಆಹ್ವಾನ ಪತ್ರಿಕೆ ವಿತರಿಸಿದೆ. ರಾಜ್ಯಪಾಲರು ಘಟಿಕೋತ್ಸವ ಅಧ್ಯಕ್ಷತೆ ವಹಿಸಿ ಗೌರವ ಡಾಕ್ಟರೇಟ್‌ ಹಾಗೂ ಪದಕ ಪ್ರದಾನ ಮಾಡಬೇಕಿತ್ತು.

ರಾಜ್ಯಪಾಲರು ಬರುತ್ತಾರೆಂದು ಪೊಲೀಸರು ಬಿಗಿ ಬಂದೋಬಸ್ತ್‌ ಕಲ್ಪಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಅವರನ್ನು ಸ್ವಾಗತಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾಡಳಿತವೂ ಸಜ್ಜಾಗಿತ್ತು.

‘ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಮ ಕುಲಾಧಿಪತಿ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅಧ್ಯಕ್ಷತೆ ವಹಿಸಿ ಘಟಿಕೋತ್ಸವ ನಡೆಸಿಕೊಡಲಿದ್ದಾರೆ’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ನಡುವೆ, ರಾಜ್ಯಪಾಲರ ಭೇಟಿ ರದ್ದಾಗಿರುವುದರಿಂದ ಸೋಮವಾರ ಬೆಳಗ್ಗೆ ಮತ್ತೊಮ್ಮೆ ಸಭೆ ನಡೆಸಿ ಪ್ರತಿಭಟನೆ ಸ್ವರೂಪದ ಬಗ್ಗೆ ಚರ್ಚಿಸುವುದಾಗಿ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT