ಗುರುವಾರ , ನವೆಂಬರ್ 21, 2019
26 °C
ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮಂಜುನಾಥ್‌ ಶಿಸ್ತುಕ್ರಮದ ಎಚ್ಚರಿಕೆ

ಹೆದ್ದಾರಿ ಸಮಸ್ಯೆ: ಪರಿಹಾರಕ್ಕೆ 15 ದಿನ ಗಡುವು

Published:
Updated:
Prajavani

ಕೋಲಾರ: ‘ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ಹಾಗೂ ಲೋಕೋಪಯೋಗಿ ಇಲಾಖೆ ರಸ್ತೆಗಳಲ್ಲಿನ ಸಮಸ್ಯೆ ಸರಿಪಡಿಸದಿದ್ದರೆ ಪ್ರಕರಣ ದಾಖಲಿಸಿ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇಲ್ಲಿ ಗುರುವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿ, ‘ರಾಷ್ಟ್ರೀಯ ಹೆದ್ದಾರಿಯಲ್ಲಿ 14 ಅಪಾಯಕಾರಿ ಸ್ಥಳ (ಬ್ಲಾಕ್‌ ಸ್ಪಾಟ್‌) ಗುರುತಿಸಲಾಗಿದೆ. ಹೆದ್ದಾರಿಯಲ್ಲಿ ಅಪಘಾತ ನಿಯಂತ್ರಣಕ್ಕೆ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಹಿಂದಿನ ಸಭೆಯಲ್ಲಿ ಸೂಚಿಸಿದ್ದರೂ ಯಾವುದೇ ಸುಧಾರಣೆ ಆಗಿಲ್ಲ’ ಎಂದು ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ನಿಖಿಲ್ ಅವರನ್ನು ತರಾಟೆಗೆ ತೆಗೆದುಕೊಂಡು.

‘ಟಮಕ, ಕೊಂಡರಾಜನಹಳ್ಳಿ, ವಡಗೂರು, ತಂಬಿಹಳ್ಳಿ, ಕಾಂತರಾಜ ಸರ್ಕಲ್ ಸೇರಿದಂತೆ 14 ಕಡೆ ಹೆಚ್ಚು ಅಪಾಯಕಾರಿ ಸ್ಥಳ ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಏಕೆ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಬೇಜವಾಬ್ದಾರಿ ತೋರಿದರೆ ಸಭೆ ನಡೆಸುವ ಅಗತ್ಯವಿಲ್ಲ. 15 ದಿನದೊಳಗೆ ಹೆದ್ದಾರಿ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ಪ್ರಕರಣ ದಾಖಲಿಸುವುದು ನಿಶ್ಚಿತ’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

‘ಹಿಂದಿನ ಸಭೆಗಳಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ಸೂಕ್ತ ಮಾಹಿತಿಯಿಲ್ಲದೆ ಸಭೆಗೆ ಬಂದಿದ್ದೀರಿ. ಅಪಾಯಕಾರಿ ಸ್ಥಳಗಳಲ್ಲಿ ಮಿನುಗು ದೀಪ (ಬ್ಲಿಂಕರ್ಸ್‌), ಬ್ಯಾರಿಕೇಡ್ ಅಳವಡಿಸಿಲ್ಲ. ಜಿಲ್ಲಾ ಕೇಂದ್ರದ ಪವನ್ ಕಾಲೇಜು ಮುಂಭಾಗ ಮತ್ತು ಟಮಕ ಬಳಿ ಮೇಲ್ಸೇತುವೆ, ಕೊಂಡರಾಜನಹಳ್ಳಿ ಹಾಗೂ ಜಿಲ್ಲಾಡಳಿತ ಭವನದ ಬಳಿ ಸರ್ವಿಸ್‌ ರಸ್ತೆ ನಿರ್ಮಿಸಿಲ್ಲ. ಮೂಲಸೌಕರ್ಯ ಕಲ್ಪಿಸದೆ ಏಕೆ ಟೋಲ್ ಸಂಗ್ರಹಿಸುತ್ತಿದ್ದೀರಿ’ ಎಂದು ಪ್ರಶ್ನಿಸಿದರು.

‘ಮುಳಬಾಗಿಲು ಟೋಲ್ ಬಳಿ ಪ್ರಯಾಣಿಕರಿಗೆ ಶೌಚಾಲಯ ಸೌಕರ್ಯ ಕಲ್ಪಿಸದ ಬಗ್ಗೆ ಸಾಕಷ್ಟು ದೂರು ಬಂದಿವೆ’ ಎಂದು ಜಿಲ್ಲಾಧಿಕಾರಿ ಕೆಂಡಾಮಂಡಲರಾದರು. ಇದಕ್ಕೆ ಪ್ರತಿಕ್ರಿಯಿಸಿದ ಲ್ಯಾಂಕೋ ಕಂಪನಿ ಪ್ರತಿನಿಧಿಗಳು, ‘ರಸ್ತೆಯ ಒಂದು ಬದಿಯಲ್ಲಿ ಶೌಚಾಲಯ ತೆರೆಯಲಾಗಿದೆ. ಇನ್ನೊಂದು ಕಡೆ ಶೌಚಾಲಯ ದುರಸ್ತಿಯಲ್ಲಿದೆ’ ಎಂದರು. ಇದಕ್ಕೆ ಸಿಡಿಮಿಡಿಗೊಂಡ ಜಿಲ್ಲಾಧಿಕಾರಿ, ‘ಶುಕ್ರವಾರದೊಳಗೆ ಎರಡೂ ಕಡೆ ಶೌಚಾಲಯ ತೆರೆದಿರಬೇಕು’ ಎಂದು ತಾಕೀತು ಮಾಡಿದರು.

ಪತ್ರ ಬರೆಯುತ್ತೇನೆ: ಸಭೆ ಮಧ್ಯೆ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಕರೆ ಮಾಡಿ, ‘ಪ್ರಾಧಿಕಾರದ ಕಾರ್ಯವೈಖರಿ ತೃಪ್ತಿಕರವಾಗಿಲ್ಲ. ರಸ್ತೆ ಸುರಕ್ಷತಾ ಸಮಿತಿ ರದ್ದುಪಡಿಸಿ, ಇಲ್ಲವೆ ಸಮಿತಿ ಮುಂದುವರಿಸಿದರೆ ಕೈಗೊಂಡ ನಿರ್ಣಯ ಪಾಲಿಸಿ. ನಿರ್ಲಕ್ಷ್ಯ ಮುಂದುವರಿಸಿದರೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುತ್ತೇನೆ’ ಎಂದು ಗುಡುಗಿದರು.

‘ರಸ್ತೆ ಸುರಕ್ಷತಾ ಸಮಿತಿ ಸೂಚಿಸಿದ ಸಣ್ಣಪುಟ್ಟ ಕೆಲಸವೂ ಆಗುತ್ತಿಲ್ಲ. ಅಪಾಯಕಾರಿ ಸ್ಥಳಗಳಲ್ಲಿ ಕೈಗೊಂಡ ಸುರಕ್ಷತಾ ಕ್ರಮಗಳ ಮಾಹಿತಿಯಿಲ್ಲ. ಸಭೆಯ ನಡವಳಿ ಆಧರಿಸಿ ನಿಮ್ಮ ಮೇಲೆ ಪ್ರಕರಣ ದಾಖಲಿಸಬೇಕು. ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ನಾನೇ ಸೂಚಿಸುತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹೆದ್ದಾರಿ ನಿರ್ಮಾಣದ ವೇಳೆ ಬೆಟ್ಟದ ತಪ್ಪಲಿನ ರಾಜಕಾಲುವೆ ಹಾಗೂ ಪೋಷಕ ಕಾಲುವೆಗಳನ್ನು ಮುಚ್ಚಲಾಗಿದೆ. ಇದರಿಂದ ಮಳೆ ನೀರು ಕೆರೆಗೆ ಹರಿದು ಬರುತ್ತಿಲ್ಲ. ರಾಜಕಾಲುವೆ ಮತ್ತು ಪೋಷಕ ಕಾಲುವೆಯಿಂದ ನೀರು ಕೆರೆಗೆ ಹರಿದು ಬರುವಂತೆ ಕ್ರಮ ಕೈಗೊಳ್ಳಿ. ಜಲಶಕ್ತಿ ಅಭಿಯಾನದಡಿ ಹೆದ್ದಾರಿ ಪ್ರಾಧಿಕಾರವೂ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಡಿಪಿಆರ್‌ ಸಲ್ಲಿಸಿ: ತಾಲ್ಲೂಕಿನ ಲಕ್ಷ್ಮೀಸಾಗರದಿಂದ ಮುಳಬಾಗಿಲಿನ ನಂಗಲಿವರೆಗೆ ಹಾದು ಹೋಗಿರುವ ಹೆದ್ದಾರಿಯಲ್ಲಿ ಯಾವ ಭಾಗದಲ್ಲಿ ಸೇವಾ ರಸ್ತೆ, ಪಾದಾಚಾರಿ ಮೇಲ್ಸೇತುವೆ ಅವಶ್ಯಕತೆಯಿದೆ ಎಂಬ ಬಗ್ಗೆ ಪರಿಶೀಲಿಸಿ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಲ್ಲಿಸಿ’ ಎಂದು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

‘ಪವನ್ ಕಾಲೇಜು ಬಳಿ ಪಾದಾಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿದೆ. 15 ದಿನದಲ್ಲಿ ಕಾಮಗಾರಿ ಆರಂಬಿಸಲಾಗುವುದು. ಕೊಂಡರಾಜನಹಳ್ಳಿ ಬಳಿ ಸೇವಾ ರಸ್ತೆ ನಿರ್ಮಾಣಕ್ಕೆ ಡಿಪಿಆರ್ ಸಲ್ಲಿಸಲಾಗಿದೆ’ ಎಂದು ಪ್ರಾಧಿಕಾರದ ಎಂಜಿನಿಯರ್ ನಿಖಿಲ್ ವಿವರಿಸಿದರು.

ಎ.ಇ ಗೈರು: ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ ಬದ್ರಿನಾಥ್ ಅವರು ಸಭೆಗೆ ಗೈರಾಗಿದ್ದಕ್ಕೆ ಗರಂ ಆದ ಜಿಲ್ಲಾಧಿಕಾರಿ, ‘ನಿವೃತ್ತಿಗೆ 6 ತಿಂಗಳಿದೆ ಎಂದು ಏನೂ ಕೆಲಸ ಮಾಡುತ್ತಿಲ್ಲ. ಯಾವ ಸಭೆಗೂ ಬರುತ್ತಿಲ್ಲ. ನಗರದ ರಸ್ತೆ ವಿಸ್ತರಣೆಗೆ ಸೂಚಿಸಿದ್ದರೂ ಆ ಕೆಲಸ ಮಾಡಲಿಲ್ಲ. 6 ತಿಂಗಳಲ್ಲಿ ನ್ಯಾಯಾಲಯದ ಕಟ್ಟಡ ನಿರ್ಮಾಣ ಬಿಟ್ಟರೆ ಇಲಾಖೆಯಿಂದ ಯಾವ ಕೆಲಸ ಮಾಡಿದ್ದೀರಿ. ಸುಮ್ಮನೆ ಸಂಬಳ ತೆಗೆದುಕೊಂಡು ಹೋಗುತ್ತೀರಿ. ಆಸಕ್ತಿ ಇಲ್ಲದಿದ್ದರೆ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಳ್ಳಿ’ ಎಂದು ಗುಡುಗಿದರು.

‘ರಸ್ತೆ ಹದಗೆಟ್ಟಿದ್ದರೂ ಜನ ನನ್ನ ಮುಖ ನೋಡಿ ಸುಮ್ಮನಿದ್ದಾರೆ. ಯಾವ ಹಣ ತಂದು, ಯಾರಿಂದ ಕೆಲಸ ಮಾಡಿಸುತ್ತಿರೋ ಗೊತ್ತಿಲ್ಲ. ನ.8ರ ಸಂಜೆಯೊಳಗೆ ವೈಜ್ಞಾನಿಕವಾಗಿ ರಸ್ತೆಗೆ ತೇಪೆ ಹಾಕುವ ಕೆಲಸ ಮುಗಿಸದಿದ್ದಲ್ಲಿ ಎ.ಇಗೆ ಕಡ್ಡಾಯ ನಿವೃತ್ತಿ ನೀಡುತ್ತೇನೆ. ಕಚೇರಿ ಮುಚ್ಚಿದರೆ ಪಿಡಬ್ಲ್ಯೂಡಿ ಇಲಾಖೆಯೇ ಇಲ್ಲವೆಂದು ಜನರಿಗೆ ಉತ್ತರವನ್ನಾದರೂ ಹೇಳಬಹುದು’ ಎಂದರು.

ಸಿಗ್ನಲ್‌ ಅಳವಡಿಸಿ: ‘ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಂಗಲಿ ಬಳಿ ವಾಹನ ಸಂಚಾರ ಹಾಗೂ ಜನದಟ್ಟಣೆ ಹೆಚ್ಚಿರುತ್ತದೆ. ಹೀಗಾಗಿ ಆ ಭಾಗದಲ್ಲಿ ಹೆಚ್ಚು ಅಪಘಾತ ಸಂಭವಿಸುತ್ತಿವೆ. ಅಲ್ಲಿ ಸಿಗ್ನಲ್ ದೀಪ ಅಳವಡಿಸಬೇಕು’ ಎಂದು ಸಮಿತಿ ಸದಸ್ಯ ಕೆ.ವಿ.ಸುರೇಶ್‌ಕುಮಾರ್‌ ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಡಾಬಿನ್ ಅಂತೋಣಿ, ಸರ್ಕಾರಿ ಮಹಿಳಾ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ, ನಗರಸಭೆ ಆಯುಕ್ತ (ಪ್ರಭಾರ) ಶಿವಪ್ರಕಾಶ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)