ಬುಧವಾರ, ಮೇ 18, 2022
25 °C
ಕೋವಿಡ್ ಅಲೆ ಸಮರ್ಥ ನಿರ್ವಹಣೆ

ಜನರ ಜೀವ ರಕ್ಷಣೆಗೆ ಐತಿಹಾಸಿಕ ಕೊಡುಗೆ: ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೋವಿಡ್ ಅಲೆಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಜನರ ಜೀವ ರಕ್ಷಣೆಗೆ ಮತ್ತು ಆರೋಗ್ಯ ಸುರಕ್ಷತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡಿದ ಕೊಡುಗೆ ಐತಿಹಾಸಿಕವಾದದ್ದು’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಅವರು ನಗರದ ಎಸ್‍ಎನ್‍ಆರ್ ಜಿಲ್ಲಾ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ ಆಂಬುಲೆನ್ಸ್‌ ವಾಹನದ ಸೇವೆಗೆ ಇಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ‘ಕೋವಿಡ್‌ ಲಸಿಕೆ ನೀಡಿಕೆ ಇಂದು ವಿಶ್ವಮಾನ್ಯವಾಗಿದೆ. ಸ್ವದೇಶಿ ಲಸಿಕೆ ತಯಾರಿಸಿ ಜನರಿಗೆ ವಿಶ್ವದಲ್ಲೇ ಮೊದಲು ನೀಡಿದ ಹೆಗ್ಗಳಿಕೆ ಭಾರತದ್ದು’ ಎಂದರು.

‘ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ತಮ್ಮ ಕ್ಷೇತ್ರದ ವ್ಯಾಪ್ತಿಯ 34 ತಾಲ್ಲೂಕುಗಳ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಿಗೆ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಆಮ್ಲಜನಕ ಸಾಂದ್ರಕಗಳನ್ನು ಒದಗಿಸಿದ್ದೆವು. ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿನ ಶೌಚಾಲಯ ಮತ್ತು ನೀರಿನ ಸಮಸ್ಯೆ ಪರಿಹರಿಸಬೇಕು’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚಿಸಿದರು.

‘ಕೋವಿಡ್ ನಿರ್ವಹಣೆಗೆ ಸರ್ಕಾರ ಜಿಲ್ಲೆಗೆ ಪೂರ್ಣ ಪ್ರಮಾಣದಲ್ಲಿ ಉಸ್ತುವಾರಿ ಸಚಿವರನ್ನು ನೇಮಿಸಬೇಕು. ಜಿಲ್ಲಾಧಿಕಾರಿ ಸೆಲ್ವಮಣಿ ವರ್ಗಾವಣೆ ಬೇಸರ ತರಿಸಿದೆ. ಸರ್ಕಾರ ಶೀಘ್ರವೇ ಮತ್ತೊಬ್ಬ ದಕ್ಷ ಅಧಿಕಾರಿಯನ್ನು ನಿಯೋಜಿಸಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯ ಸರ್ಕಾರ 14,500 ಅತಿಥಿ ಶಿಕ್ಷಕರ ಬೇಡಿಕೆ ಈಡೇರಿಸಿದೆ. ₹ 33 ಸಾವಿರ ಮತ್ತು ಕನಿಷ್ಠ ₹ 26 ಸಾವಿರ ವೇತನ ನಿಗದಿಪಡಿಸಿದೆ. ಪ್ರತಿ ತಿಂಗಳು ಸಂಬಳ ಸಿಗಲಿದೆ. ಭವಿಷ್ಯದಲ್ಲಿ ಸೇವಾ ಭದ್ರತೆ ಕುರಿತು ಹೋರಾಟಕ್ಕೆ ಕೈಜೋಡಿಸುತ್ತೇನೆ’ ಎಂದು ಭರವಸೆ ನೀಡಿದರು.

ಅಮೂಲಾಗ್ರ ಬದಲಾವಣೆ: ‘ದೇಶ ಮತ್ತು ರಾಜ್ಯದಲ್ಲಿ ಕೋವಿಡ್ 3 ಅಲೆಗಳನ್ನೂ ಸಮರ್ಪಕವಾಗಿ ನಿರ್ವಹಿಸಲಾಗಿದೆ. ಜನರ ಜೀವ ರಕ್ಷಣೆಗೆ ಒತ್ತು ನೀಡಿದ್ದು, ಆಸ್ಪತ್ರೆಗಳಲ್ಲಿ ಅಮೂಲಾಗ್ರ ಬದಲಾವಣೆ ತಂದು ವೈದ್ಯರ ಕೊರತೆ, ವೈದ್ಯಕೀಯ ಆಮ್ಲಜನಕ ಕೊರತೆ ನೀಗಿಸಲಾಗಿದೆ’ ಎಂದು ಚಿದಾನಂದ ಗೌಡ ತಿಳಿಸಿದರು.

‘ಸರ್ಕಾರಿ ಆಸ್ಪತ್ರೆಗಳ ಮೇಲಿನ ಅವಲಂಬನೆ ಹೆಚ್ಚಿರುವುದು ಉತ್ತಮ ಬೆಳವಣಿಗೆ. ಜೀವ ಉಳಿಸುವ ಕೆಲಸ ಸರ್ಕಾರಿ ಆಸ್ಪತ್ರೆಗಳಿಂದ ಮಾತ್ರ ಸಾಧ್ಯ ಎಂಬುದು ಖಾತರಿಯಾಗಿದೆ. ಮೊಬೈಲ್ ಐ.ಸಿಯು ಇರುವ ಸುಸಜ್ಜಿತ ಆಂಬುಲೆನ್ಸ್‌ಗೆ ಜಿಲ್ಲಾಸ್ಪತ್ರೆಯಿಂದ ಇದ್ದ ಬೇಡಿಕೆ ಈಡೇರಿಸಿದ್ದು, ಇದನ್ನು ರೋಗಿಗಳ ಜೀವ ಉಳಿಸಲು ಸದುಪಯೋಗ ಮಾಡಿಕೊಳ್ಳಿ’ ಎಂದು ಸಲಹೆ ನೀಡಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಘುನಾಥರೆಡ್ಡಿ, ಆರ್‍ಎಂಒ ಡಾ.ಬಾಲಸುಂದರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್, ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ನಗರಸಭೆ ಸದಸ್ಯ ಎಸ್.ಆರ್.ಮುರಳಿಗೌಡ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.