ಬುಧವಾರ, ಆಗಸ್ಟ್ 21, 2019
27 °C
ಅಧಿಕಾರಿಗಳ ವಿರುದ್ಧ ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್‌ ಅಸಮಾಧಾನ

ಆಸ್ಪತ್ರೆ ಅವ್ಯವಸ್ಥೆ: ಶಿಸ್ತುಕ್ರಮಕ್ಕೆ ಒತ್ತಾಯ

Published:
Updated:
Prajavani

ಕೋಲಾರ: ‘ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರೂ ಕ್ರಮ ಕೈಗೊಂಡಿಲ್ಲ, ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವಿ.ಶ್ರೀನಿವಾಸ್ ಒತ್ತಾಯಿಸಿದರು.

ಇಲ್ಲಿ ಬುಧವಾರ ನಡೆದ ಜಿ.ಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ನಾನು ಯಾವುದೇ ಅಧಿಕಾರಿಯನ್ನು ಗುರಿಯಾಗಿಸಿಕೊಂಡು ಶಿಸ್ತುಕ್ರಮಕ್ಕೆ ಒತ್ತಾಯಿಸುತ್ತಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಆರೋಪ ಮಾಡುತ್ತಿದ್ದೇನೆ. ಅಧಿಕಾರಿಗಳು ಸೌಜನ್ಯಕ್ಕೂ ಆಸ್ಪತ್ರೆಗೆ ಬರಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮುಳಬಾಗಿಲು ಆಸ್ಪತ್ರೆ ಆಡಳಿತಾಧಿಕಾರಿ ಉದ್ಧಟತನ ತೋರುತ್ತಾರೆ. ಇಲ್ಲಿ ಯಾರೂ ಏನೂ ಪ್ರಶ್ನಿಸಬಾರದು. ಜನ ಸಮಸ್ಯೆ ಹೇಳಲೂ ಭಯಪಡುತ್ತಾರೆ. ಆಸ್ಪತ್ರೆಗಳ ಅವ್ಯವಸ್ಥೆ ಸಂಬಂಧ ಡಿಎಚ್‌ಒಗೆ ಮಾಹಿತಿ ನೀಡಿದರೆ ಅವರು ತಾವೇನು ಅಧಿಕಾರಿಯೇ ಎಂದು ನನ್ನನ್ನೇ ಪ್ರಶ್ನಿಸಿದರು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಳಬಾಗಿಲು ಆಸ್ಪತ್ರೆ ಆಡಳಿತಾಧಿಕಾರಿ ರಾಜೇಶ್, ‘ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆಯಿದೆ. ಟ್ಯಾಂಕರ್ ನೀರು ಕೊಡುವಂತೆ ನಗರಸಭೆಯನ್ನು ಕೋರಲಾಗಿದೆ. ನಾನು ಅರವಳಿಕೆ ತಜ್ಞ, ಔಷಧ ಮಾತ್ರೆಗೆ ಚೀಟಿ ಬರೆದುಕೊಡುವ ಹಕ್ಕಿಲ್ಲ. ಸಮಿತಿ ಅಧ್ಯಕ್ಷರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಹೊರಗೆ ಔಷಧ ಮಾತ್ರೆ ಖರೀದಿಸುವಂತೆ ರೋಗಿಗಳಿಗೆ ನಾನು ಚೀಟಿ ಬರೆದುಕೊಟ್ಟಿದ್ದರೆ ಈ ಕ್ಷಣವೇ ರಾಜೀನಾಮೆ ನೀಡುತ್ತೇನೆ’ ಎಂದು ತಿರುಗೇಟು ನೀಡಿದರು. ಆಗ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆಯಿತು.

ಶೌಚಾಲಯ ದುರ್ನಾತ: ಆಗ ಮಧ್ಯಪ್ರವೇಶಿಸಿದ ಜಿ.ಪಂ ಅಧ್ಯಕ್ಷೆ ಗೀತಮ್ಮ, ‘ಹಿಂದಿನ ವಾರ ಮುಳಬಾಗಿಲು ಆಸ್ಪತ್ರೆಗೆ ಭೇಟಿ ನೀಡಿದಾಗ ಶೌಚಾಲಯ ದುರ್ನಾತ ಬೀರುತ್ತಿತ್ತು. ಈ ಬಗ್ಗೆ ಪ್ರಶ್ನೆ ಮಾಡಿದಾಗ ಶೌಚಾಲಯ ಸ್ವಚ್ಛಗೊಳಿಸಲು ನೀರಿನ ಸಮಸ್ಯೆಯಿದೆ ಎಂದು ಆಡಳಿತಾಧಿಕಾರಿ ಹೇಳಿದರು. ಮಧ್ಯಾಹ್ನ ಆಸ್ಪತ್ರೆಗೆ ಹೋದಾಗ ಜನರಿಕ್ ಔಷಧ ಮಳಿಗೆ ಮುಚ್ಚಲಾಗಿತ್ತು. ಮಧ್ಯಾಹ್ನ 3.45ರವರೆಗೆ ಕಾದರೂ ಬಾಗಿಲು ತೆರೆಯಲಿಲ್ಲ’ ಎಂದು ಗುಡುಗಿದರು.

‘ಆಸ್ಪತ್ರೆಯಲ್ಲಿನ ಸ್ವಚ್ಛತೆ ಸಮಸ್ಯೆ ಹಾಗೂ ಜನರಿಕ್‌ ಔಷಧ ಮಳಿಗೆ ಬಾಗಿಲು ಹಾಕಿರುವ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಆಡಳಿತಾಧಿಕಾರಿಗಳು ಅದನ್ನೆಲ್ಲಾ ಕೇಳಲು ತಾವು ಯಾರು? ಗಲಾಟೆ ಮಾಡಲು ಇಲ್ಲಿಗೆ ಬಂದಿದ್ದೀರಾ ದರ್ಪದಿಂದ ಮಾತನಾಡಿದರು’ ಎಂದು ದೂರಿದರು.

ಸಂಬಳ ಕೊಟ್ಟಿಲ್ಲ: ‘ಜಿಲ್ಲೆಯ ವಿವಿಧ ಆಸ್ಪತ್ರೆಗಳ ನರ್ಸ್‌ಗಳಿಗೆ ಸಂಬಳ ಕೊಟ್ಟಿಲ್ಲ. ಬಂಗಾರಪೇಟೆಯಲ್ಲಿ ಮಹಿಳಾ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿ ಅವರ ಸಂಬಳ ತೆಗೆದುಕೊಳ್ಳಲಾಗಿದೆ. ಹೊರಗುತ್ತಿಗೆಯಡಿ ನೇಮಕಗೊಂಡ ಸಿಬ್ಬಂದಿಗೆ ನೇಮಕಾತಿ ಏಜೆನ್ಸಿಗಳು ಇಎಸ್‍ಐ ಮತ್ತು ಪಿ.ಎಫ್ ಸೌಲಭ್ಯ ಕಲ್ಪಿಸುತ್ತಿಲ್ಲ. ಆಸ್ಪತ್ರೆಗಳಲ್ಲಿ ಬಿಸಿ ನೀರು ವ್ಯವಸ್ಥೆಯಿಲ್ಲ’ ಎಂದು ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಅಧ್ಯಕ್ಷೆ ಗೀತಮ್ಮ, ‘ಮುಳಬಾಗಿಲು ಆಸ್ಪತ್ರೆ ಆಡಳಿತಾಧಿಕಾರಿಯನ್ನು ತಕ್ಷಣವೇ ಅಮಾನತು ಮಾಡಿ’ ಎಂದು ಸಿಇಒಗೆ ಸೂಚಿಸಿದರು.

ತನಿಖೆ ನಡೆದಿದೆ: ಸ್ಥಾಯಿ ಸಮಿತಿ ಅಧ್ಯಕ್ಷರ ಆರೋಪಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್‌ಕುಮಾರ್, ‘ಎಂಎಸ್‍ಐಎಲ್ ಜನರಿಕ್ ಔಷಧ ಮಳಿಗೆ ನಡೆಸುತ್ತಿದೆ. ಮಧ್ಯಾಹ್ನ ಊಟಕ್ಕೆ ಬಿಡುವಿದ್ದಾಗ ಮಳಿಗೆ ಮುಚ್ಚಿರಬಹುದು. ಬಂಗಾರಪೇಟೆ ಆಸ್ಪತ್ರೆ ಸಿಬ್ಬಂದಿಯ 6 ತಿಂಗಳ ಸಂಬಳ ₹ 1 ಲಕ್ಷ ಪಾವತಿಸದೆ ಆರೋಗ್ಯಾಧಿಕಾರಿಯೇ ತೆಗೆದುಕೊಂಡಿದ್ದು, ಈ ಸಂಬಂಧ ತನಿಖೆ ನಡೆದಿದೆ. ಆ ಆರೋಗ್ಯಾಧಿಕಾರಿ ನಿವೃತ್ತಿಯಾಗಿದ್ದು, ಅವರ ಪಿಂಚಣಿ ತಡೆ ಹಿಡಿಯಲಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಜನರಿಕ್ ಔಷಧ ಮಳಿಗೆಗಳಲ್ಲಿ ಮಾರ್ಗಸೂಚಿ ಪಾಲನೆಯಾಗುತ್ತಿಲ್ಲ. ಸ್ಥಾಯಿ ಸಮಿತಿ ಅಧ್ಯಕ್ಷರು ಪ್ರಸ್ತಾಪಿಸಿದ ಅಂಶಗಳ ಕುರಿತು ತನಿಖೆ ನಡೆಸಿ 2 ದಿನದಲ್ಲಿ ವರದಿ ನೀಡಿ. ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸಿ’ ಎಂದು ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್‌ ಡಿಎಚ್‌ಒಗೆ ಆದೇಶಿಸಿದರು

Post Comments (+)