ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19 ವರ್ಷಗಳಿಂದ ಕಾಂಗ್ರೆಸ್‌ಗೆ ಒಲಿಯದ 'ಕೋಲಾರ' ಸಿದ್ದರಾಮಯ್ಯಗೆ ಎಷ್ಟು ಸುರಕ್ಷಿತ?

ಪಕ್ಷದೊಳಗಿನ ಬಣಗಳ ಭಯ
Last Updated 17 ನವೆಂಬರ್ 2022, 6:04 IST
ಅಕ್ಷರ ಗಾತ್ರ

ಕೋಲಾರ: ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದಿದ್ದಾರೇನೋ ಎಂಬಂತೆ ದಿನವಿಡೀ ಸುತ್ತಾಡಿ ಸ್ಪರ್ಧೆಯ ಸುಳಿವು ನೀಡಿ ತೆರಳಿರುವ ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರ ಸುರಕ್ಷಿತವೇ ಎಂಬ ಪ್ರಶ್ನೆಎದುರಾಗಿದ್ದು, ರಾಜ್ಯ ರಾಜಕೀಯದ ಚಿತ್ತ ಚಿನ್ನದ ಗಣಿಯ ನಾಡಿನತ್ತ ಹರಿಯುವಂತೆ ಮಾಡಿದೆ.

ಈ ಕ್ಷೇತ್ರದಲ್ಲಿ 2004ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿದ್ದೇ ಕೊನೆ. ಮತ್ತೆ ಇಲ್ಲಿ ಪಕ್ಷಕ್ಕೆ ಗೆಲುವು ಒಲಿದಿಲ್ಲ. ಬರೋಬ್ಬರಿ 19 ವರ್ಷಗಳಾಗಿದ್ದು, ಪಕ್ಷದ ಕಾರ್ಯಕರ್ತರು ಚದುರಿ ಹೋಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ಎಚ್‌. ಮುನಿಯಪ್ಪ ಸೋತಿರುವ ಉದಾಹರಣೆಯೂ ಮುಂದಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಎರಡು ಬಣಗಳಿದ್ದು, ಹೊಂದಾಣಿಕೆ ಕೊರತೆ ಎದ್ದು ಕಾಣುತ್ತಿದೆ. ಮುನಿಯಪ್ಪ ಬೆಂಬಲಿಗರು ಹಾಗೂ ಸಿದ್ದರಾಮಯ್ಯ ಜತೆ ಗುರುತಿಸಿಕೊಂಡಿರುವ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಬೆಂಬಲಿಗರು ನಿತ್ಯ ಹಾವು–ಮುಂಗುಸಿ ರೀತಿ ಕಚ್ಚಾಡುತ್ತಿದ್ದಾರೆ.ಹೈಕಮಾಂಡ್ಸೂಚನೆ ಮೇರೆಗೆ ಮುಂದಿನ ದಿನಗಳಲ್ಲಿ ಮುನಿಯಪ್ಪ–ಸಿದ್ದರಾಮಯ್ಯ–ರಮೇಶ್‌ ಕುಮಾರ್‌ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡೂ ಅವರ ಬೆಂಬಲಿಗರು ಹೊಂದಾಗುತ್ತಾರೆಯೇಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ನಡೆದಿದೆ.

ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಮತದಾರರು ಹೆಚ್ಚಿರುವ ಈ ಕ್ಷೇತ್ರವೂ ‘ಅಹಿಂದ’ ನಾಯಕ ಎನಿಸಿಕೊಂಡಿರುವ ಅವರಿಗೆ ಹೇಳಿ ಮಾಡಿಸಿದಂತಿದೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಭಾನುವಾರ ದೇಗುಲ, ಚರ್ಚ್‌, ಮಸೀದಿಗೆ ಭೇಟಿ ನೀಡಿ, ಮಹಾನ್‌ ವ್ಯಕ್ತಿಗಳ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಸಮುದಾಯಗಳನ್ನು ಮೆಚ್ಚಿಸುವ ಪ್ರಯತ್ನ ನಡೆಸಿದರು. ಒಕ್ಕಲಿಗರನ್ನು ಸೆಳೆಯಲು ಸೀತಿ ಬೆಟ್ಟದ ಬೈರವೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ, ಮಾಜಿ ಸಚಿವ ಸಿ.ಬೈರೇಗೌಡರ ಪ್ರತಿಮೆಗೆ ನಮಿಸಿದರು.

ಕ್ಷೇತ್ರದಲ್ಲಿ ಮುಸ್ಲಿಂ ಹಾಗೂ ಪರಿಶಿಷ್ಟ ಮತದಾರರು ಹೆಚ್ಚಿದ್ದು, ನಂತರದ ಸ್ಥಾನದಲ್ಲಿ ಕುರುಬರು, ಒಕ್ಕಲಿಗರಿದ್ದಾರೆ.ಮುಖ್ಯಮಂತ್ರಿಆಗಿದ್ದಾಗ ಜಾರಿ ಮಾಡಿದ ಕೆ.ಸಿ.ವ್ಯಾಲಿಯಿಂದ ಕ್ಷೇತ್ರದ ಕೆರೆಗಳು ತುಂಬಿದ್ದು, ರೈತರಿಗೆಪ್ರಯೋಜನವೂ ಆಗಿದೆ.

ಸಿದ್ದರಾಮಯ್ಯ ಸ್ಪರ್ಧೆಯು ಜಿಲ್ಲೆಯ ಇತರೆ ಕ್ಷೇತ್ರಗಳು, ಪಕ್ಕದ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಿಗೂ ನೆರವಾಗಬಲ್ಲದು ಎನ್ನಲಾಗುತ್ತಿದೆ.

ಈ ಭಾಗದಲ್ಲಿ ಜೆಡಿಎಸ್‌ ಪ್ರಬಲವಾಗಿದೆ.2018ರಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ಕೆ.ಶ್ರೀನಿವಾಸಗೌಡ ಈಗ ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಇಲ್ಲಿ ಒಮ್ಮೆಯೂ ಗೆದ್ದಿಲ್ಲ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT