ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕು ಉಲ್ಲಂಘನೆ: ವಿದ್ಯಾವಂತರ ಮೌನ

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಘುನಾಥ್ ಕಳವಳ
Last Updated 10 ಡಿಸೆಂಬರ್ 2020, 13:56 IST
ಅಕ್ಷರ ಗಾತ್ರ

ಕೋಲಾರ: ‘ಜನರು ಮಾನವ ಹಕ್ಕುಗಳ ಉಲ್ಲಂಘನೆಯ ಲಕ್ಷ್ಮಣ ರೇಖೆ ದಾಟದೆ ಉತ್ತಮ ಸಮಾಜ ಸೃಷ್ಟಿಸಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್‌.ರಘುನಾಥ್ ಕಿವಿಮಾತು ಹೇಳಿದರು.

ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾರಾಗೃಹ ಮತ್ತು ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಜಿಲ್ಲಾ ಕಾರಾಗೃಹದಲ್ಲಿನ ವಿಚಾರಣಾಧಿ ಕೈದಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಜನ ಸ್ವತಂತ್ರವಾಗಿದ್ದರೂ ಶೋಷಕರ ಮಧ್ಯೆ ಬದುಕುತ್ತಿದ್ದಾರೆ. ಇದಕ್ಕೆ ಹಕ್ಕುಗಳ ಉಲ್ಲಂಘನೆ ಪ್ರಶ್ನಿಸದಿರುವುದು ಮುಖ್ಯ ಕಾರಣ. ಸಮಾಜದಲ್ಲಿ ಪ್ರತಿ 3 ಸೆಕೆಂಡ್‌ಗೆ 1 ಅಪರಾಧ ಪ್ರಕರಣ ಸಂಭವಿಸುತ್ತಿದೆ. ಜನರು ತಮ್ಮ ಹಕ್ಕು ಕಾಪಾಡಿಕೊಳ್ಳುವುದರ ಜತೆಗೆ ಇತರರ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಆದರೆ, ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದ್ದರೂ ವಿದ್ಯಾವಂತರು ಮೌನವಾಗಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಜನರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕೆ ಹೊರತು ಮತ್ತೊಬ್ಬರ ಹಕ್ಕು ಕಸಿದುಕೊಳ್ಳಬಾರದು. ಪ್ರತಿ ಹಂತದಲ್ಲೂ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಕಾಲಕ್ರಮೇಣ ಅಗೌರವ ಕಡಿಮೆ ಮಾಡಬೇಕು. ಹಕ್ಕುಗಳು ಏನೆಂದು ಅರ್ಥ ಮಾಡಿಕೊಳ್ಳಬೇಕು. ಮಾನವ ಹಕ್ಕುಗಳ ಮಹತ್ವ ಅರಿತು ಉತ್ತಮ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು’ ಎಂದು ಸಲಹೆ ನೀಡಿದರು.

ಜವಾಬ್ದಾರಿ: ‘ದೇಶದಲ್ಲಿ ಸಂವಿಧಾನದಡಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದ್ದರೂ ಅನಾದಿ ಕಾಲದಿಂದಲೂ ಹಂತ ಹಂತವಾಗಿ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್‌.ಗಂಗಾಧರ್ ವಿಷಾದಿಸಿದರು.

‘ಎಲ್ಲಾ ಧರ್ಮಗಳ ಮೂಲ ಮಾನವ ಧರ್ಮವಾಗಿದ್ದು, ಸಂವಿಧಾನದ ಮೂಲವೂ ಇದೇ ಆಗಿದೆ. ಒಬ್ಬರು ಮತ್ತೊಬ್ಬರಿಗೆ ತೊಂದರೆ ಕೊಡುವುದು, ಕೊಲೆ ಮಾಡುವಂತೆ ಯಾವ ಧರ್ಮದಲ್ಲಿಯೂ ಹೇಳಿಲ್ಲ. ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಮಾನವ ಹಕ್ಕುಗಳು ಎಲ್ಲರಿಗೂ ಸಿಗಬೇಕು. ಯಾವುದೇ ಕಾರಣಕ್ಕೂ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕು’ ಎಂದು ತಿಳಿಸಿದರು.

‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ಅರಿವು ಮೂಡಿಸಿದಾಗ ಹಕ್ಕುಗಳ ಉಲ್ಲಂಘನೆ ತಡೆಯಬಹುದು. ಜೈಲಿನಲ್ಲಿರುವ ವಿಚಾರಣಾ ಕೈದಿಗಳ ಹಕ್ಕುಗಳ ರಕ್ಷಣೆಗೆ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ನೀಡಲಾಗುತ್ತದೆ. ಕೈದಿಗಳು ಕಾನೂನು ಸೇವೆ ಪಡೆಯಬೇಕು’ ಎಂದು ಮನವಿ ಮಾಡಿದರು.

‘2ನೇ ಮಹಾಯುದ್ಧದಲ್ಲಿ 50 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಮಾನವನ ರಕ್ಷಣೆಗಾಗಿ ಮಾನವ ಹಕ್ಕುಗಳ ದಿನಾಚರಣೆ ಜಾರಿಗೆ ತರಲಾಗಿದೆ. ಮಾನವ ಹಕ್ಕುಗಳ ಆಯೋಗವು ರಾಜ್ಯ, ರಾಷ್ಟ್ರ ಮಟ್ಟದಲ್ಲಿದ್ದರೆ ಜಿಲ್ಲಾ ಮಟ್ಟದಲ್ಲಿ ನ್ಯಾಯಾಧೀಶರಿಗೆ ಜವಾಬ್ದಾರಿ ವಹಿಸಲಾಗಿದೆ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ್ ವಿವರಿಸಿದರು.

‘ಸಮಾಜದಲ್ಲಿ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದರೂ ಕಾನೂನು ಅರಿವಿನ ಕೊರತೆಯಿಂದ ಅರ್ಜಿ ಹಾಕಿಕೊಳ್ಳುವ ವಿಧಾನ ಗೊತ್ತಿಲ್ಲದಂತಾಗಿದೆ. ಹೀಗಾಗಿ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ. ನಮ್ಮಿಂದ ಮತ್ತೊಬ್ಬರ ಹಕ್ಕುಗಳ ಉಲ್ಲಂಘನೆಯಾಗದಿದ್ದರೆ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ರಘುಪತಿಗೌಡ, ಜಿಲ್ಲಾ ಕಾರಾಗೃಹದ ಸೂಪರಿಂಟೆಂಡೆಂಟ್‌ ಕೆ.ಎನ್.ಮೋಹನ್, ವಕೀಲ ಕೆ.ಆರ್.ಧನರಾಜ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT