ಮಂಗಳವಾರ, ಫೆಬ್ರವರಿ 25, 2020
19 °C
ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಬಾಬು ಅಭಿಪ್ರಾಯ

ಅನಕ್ಷರತೆ: ಹಿಂದುಳಿದ ನಗರ ಪ್ರದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಅನಕ್ಷರತೆಯಿಂದಾಗಿ ರಾಜ್ಯದಲ್ಲಿನ ನಗರ ಪ್ರದೇಶ ಮತ್ತು ಗ್ರಾಮಗಳು ಹಿಂದುಳಿದಿವೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎನ್.ವಿ.ಬಾಬು ಅಭಿಪ್ರಾಯಪಟ್ಟರು.

ಜಿಲ್ಲಾ ಮತ್ತು ತಾಲ್ಲೂಕು ಲೋಕ ಶಿಕ್ಷಣ ಸಮಿತಿ, ಸರಸ್ವತಿ ಮಹಿಳಾ ಮಂಡಳಿ ಸಹಯೋಗದಲ್ಲಿ ಇಲ್ಲಿ ಶನಿವಾರ ಸಾಕ್ಷರತಾ ಕಾರ್ಯಕ್ರಮದಡಿ ಬೋಧಕರಿಗೆ ಹಮ್ಮಿಕೊಂಡಿದ್ದ ತರಬೇತಿ ಉದ್ಘಾಟಿಸಿ ಮಾತನಾಡಿ, ‘ನಗರ ಪ್ರದೇಶ ಮತ್ತು ಗ್ರಾಮಗಳಲ್ಲಿರುವ ಅನಕ್ಷರಸ್ಥರನ್ನು ಸಾಕ್ಷರಸ್ಥರನ್ನಾಗಿ ಮಾಡಬೇಕು. ಇದರಿಂದ ರಾಜ್ಯ ಮತ್ತು ದೇಶ ಅಭಿವೃದ್ಧಿಯಾಗುತ್ತದೆ’ ಎಂದರು.

‘ರಾಜ್ಯ ಮತ್ತು ದೇಶದ ಅಭಿವೃದ್ಧಿ ಕಾರ್ಯಗಳ ಪೂರ್ಣ ಮಾಹಿತಿಯನ್ನು ಎಲ್ಲರಿಗೂ ತಿಳಿಸುವ ನಿಟ್ಟಿನಲ್ಲಿ ಪ್ರದೇಶಗಳಲ್ಲಿನ ವಿದ್ಯಾವಂತರು ಸ್ವಯಂಪ್ರೇರಿತರಾಗಿ ಸಾಕ್ಷರ ಭಾರತ್ ಕಾರ್ಯಕ್ರಮದಡಿ ಪಾಲ್ಗೊಳ್ಳಬೇಕು. ಮನೆ ಮತ್ತು ನೆರೆಹೊರೆಯಲ್ಲಿರುವ ಅನಕ್ಷರಸ್ಥರಿಗೆ ಓದು ಬರಹ ಕಲಿಸಿ ಸಾಕ್ಷರರನ್ನಾಗಿ ಮಾಡಬೇಕು’ ಎಂದು ಸಾಕ್ಷರತಾ ಕಾರ್ಯಕ್ರಮದ ಸಹಾಯಕ ಡಿ.ಆರ್.ರಾಜಪ್ಪ ಸಲಹೆ ನೀಡಿದರು.

‘ಸಾಕ್ಷರತೆ ಮತ್ತು ಶಿಕ್ಷಣ ಮಟ್ಟವು ಸಮಾಜದ ಅಭಿವೃದ್ಧಿ ಮಟ್ಟಕ್ಕೆ ಮೂಲ ಸೂಚಕಗಳಾಗಿವೆ. ಸಾಕ್ಷರತೆ ಹರಡುವಿಕೆಯು ಆಧುನೀಕರಣ, ನಗರೀಕರಣ, ಕೈಗಾರೀಕರಣ, ಸಂವಹನ ಮತ್ತು ವಾಣಿಜ್ಯದಂತಹ ಆಧುನಿಕ ನಾಗರಿಕತೆಯ ಪ್ರಮುಖ ಗುಣಲಕ್ಷಣ’ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಜಿ.ಎಂ.ಗಂಗಪ್ಪ ಅಭಿಪ್ರಾಯಪಟ್ಟರು.

‘ವ್ಯಕ್ತಿಗಳ ಒಟ್ಟಾರೆ ಅಭಿವೃದ್ದಿಯಲ್ಲಿ ಸಾಕ್ಷರತೆ ಪ್ರಮುಖ ಸಾಧನ. ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಾತಾವರಣವನ್ನು ಉತ್ತಮವಾಗಿ ಗ್ರಹಿಸಲು ಹಾಗೂ ಸೂಕ್ತವಾಗಿ ಪ್ರತಿಕ್ರಿಯಿಸಲು ಸಾಕ್ಷರತೆ ಅನುವು ಮಾಡಿಕೊಡುತ್ತದೆ’ ಎಂದು ಹೇಳಿದರು.

ಜಾಗೃತಿಗೆ ಕಾರಣ: ‘ಉನ್ನತ ಶಿಕ್ಷಣ ಮತ್ತು ಸಾಕ್ಷರತೆಯು ಜಾಗೃತಿಗೆ ಕಾರಣವಾಗುತ್ತದೆ. ಅಲ್ಲದೇ, ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಸುಧಾರಣೆಗೆ ಸಹಕಾರಿ. ಜತೆಗೆ ಜನಸಂಖ್ಯೆ ನಿಯಂತ್ರಣ, ಆರೋಗ್ಯ, ನೈರ್ಮಲ್ಯ, ಪರಿಸರ ಮಾಲಿನ್ಯ ತಡೆಗೆ ಪೂರಕ. ಸಮಾಜದ ದುರ್ಬಲ ವರ್ಗಗಳಿಗೆ ಉದ್ಯೋಗ ಕಲ್ಪಿಸಲು ಮತ್ತು ಅಭಿವೃದ್ಧಿಯ ಪ್ರಯತ್ನದ ಪ್ರತಿ ಅಂಶದಲ್ಲೂ ಹೂಡಿಕೆ ಆದಾಯವನ್ನು ಹೆಚ್ಚಿಸುವ, ಸಾಮಾಜಿಕ ಉನ್ನತಿಗಾಗಿ ವೇಗವರ್ಧಕವಾಗಿ ಸಾಕ್ಷರತೆ ಕಾರ್ಯ ನಿರ್ವಹಿಸುತ್ತದೆ’ ಎಂದು ನಗರಸಭೆ ಸದಸ್ಯ ಪ್ರವೀಣ್‌ಗೌಡ ಅಭಿಪ್ರಾಯಪಟ್ಟರು.

ತಾಲ್ಲೂಕು ಸಾಕ್ಷರತಾ ಸಂಯೋಜಕ ಅಶ್ವತ್ಥನಾರಾಯಣ, ಸರಸ್ವತಿ ಮಹಿಳಾ ಮಂಡಳಿ ಕಾರ್ಯದರ್ಶಿ ಸರಸ್ವತಮ್ಮ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು