ಭಾನುವಾರ, ಜನವರಿ 19, 2020
22 °C
ಮಕರ ಸಂಕ್ರಾಂತಿ ಅಶುಭವೆಂಬ ನಂಬಿಕೆ: ಅವ್ಯಕ್ತ ಭಯಕ್ಕೆ ಹಬ್ಬ ಬಿಟ್ಟ ಜನ

ಕೋಲಾರ: ಸುಗ್ಗಿ ಹಬ್ಬದ ಹಿಗ್ಗಿಲ್ಲ: ಸಿಹಿ ಅಡುಗೆ ಘಮಲಿಲ್ಲ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

prajavani

ಕೋಲಾರ: ಇಡೀ ನಾಡು ಮಕರ ಸಂಕ್ರಾಂತಿ ಆಚರಿಸಿದರೆ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಸುಗ್ಗಿ ಹಬ್ಬದ ಸಂಭ್ರಮವಿಲ್ಲ. ಎಲ್ಲೆಡೆ ಸಂಕ್ರಾಂತಿಯು ಶುಭ ಸಂಕೇತವಾದರೆ ಅರಾಭಿಕೊತ್ತನೂರು ಜನರಿಗೆ ಈ ಹಬ್ಬವು ಅಶುಭವೆಂಬ ನಂಬಿಕೆ.

ಶತಶೃಂಗ ಪರ್ವತ ಶ್ರೇಣಿಯ ಮಡಿಲಲ್ಲಿರುವ ಈ ಪುಟ್ಟ ಹಳ್ಳಿಯಲ್ಲಿ ಶತಮಾನದಿಂದ ಸಂಕ್ರಾಂತಿ ಹಬ್ಬದ ಆಚರಣೆಯಿಲ್ಲ. ಹಳ್ಳಿಯಲ್ಲಿ ಸುಮಾರು 400 ಮನೆಗಳಿದ್ದು, ಜನಸಂಖ್ಯೆ 2 ಸಾವಿರದ ಗಡಿ ದಾಟಿಲ್ಲ. ಬೆಟ್ಟಗಳಿಂದ ಸುತ್ತುವರಿದಿರುವ ಗ್ರಾಮದಲ್ಲಿ ಬಹುಪಾಲು ಕುಟುಂಬಗಳು ಕೃಷಿ ಆಶ್ರಯಿಸಿವೆ. ರೈತರು ಉಪ ಕಸುಬಾಗಿ ಹೈನುಗಾರಿಕೆ ನಡೆಸುತ್ತಿದ್ದಾರೆ.

ಗ್ರಾಮದಲ್ಲಿ ಸುಮಾರು 300 ವರ್ಷಗಳ ಹಿಂದೆ ಸಂಕ್ರಾಂತಿ ಹಬ್ಬದ ದಿನ ಜಾನುವಾರುಗಳು ಕಾಲರ ಮಾದರಿಯ ಕಾಯಿಲೆಗೆ ತುತ್ತಾಗಿ ಸಾಮೂಹಿಕವಾಗಿ ಮೃತಪಟ್ಟಿದ್ದವು. ಹೀಗಾಗಿ ಗ್ರಾಮಸ್ಥರು ಅಂದಿನಿಂದ ಸಂಕ್ರಾಂತಿ ಹಬ್ಬದ ಆಚರಣೆ ನಿಲ್ಲಿಸಿದರು.

ಅದೇ ಸಂಪ್ರದಾಯ ಈಗಲೂ ಮುಂದುವರಿದಿದ್ದು, ಸಂಕ್ರಾಂತಿ ಹಬ್ಬ ಆಚರಿಸಿದರೆ ರಾಸುಗಳು ಸಾಯುತ್ತವೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಬೇರೂರಿದೆ. ಈ ಅವ್ಯಕ್ತ ಭಯದಿಂದಾಗಿ ಗ್ರಾಮಸ್ಥರು ಈಗಲೂ ಸಂಕ್ರಾಂತಿ ದಿನ ಹೊಸ ಬಟ್ಟೆ ಧರಿಸುವುದಿಲ್ಲ, ಮನೆಗಳಲ್ಲಿ ಸಿಹಿ ಅಡುಗೆ ಮಾಡುವುದಿಲ್ಲ, ರಾಸುಗಳನ್ನು ಕಿಚ್ಚು ಹಾಯಿಸುವುದಿಲ್ಲ ಮತ್ತು ಮನೆಗಳಲ್ಲಿ ಹಬ್ಬದ ಸಂಭ್ರಮ ಇರುವುದಿಲ್ಲ. ಜನ ದೈನಂದಿನ ಕೆಲಸದಲ್ಲಿ ತೊಡಗಿಸಿಕೊಂಡು ಹಬ್ಬದ ದಿನವನ್ನು ಸಾಮಾನ್ಯವಾಗಿ ಕಳೆದುಬಿಡುತ್ತಾರೆ.

ಹರಕೆ ಕಾರಣ: ‘ಮೂರ್ನಾಲ್ಕು ತಲೆಮಾರುಗಳ ಹಿಂದೆ ಸಂಕ್ರಾಂತಿ ಹಬ್ಬದಂದೇ ರಾಸುಗಳು ಮೃತಪಟ್ಟಿದ್ದರಿಂದ ಪೂರ್ವಜರು ಬಸವೇಶ್ವರ ದೇವಾಲಯದಲ್ಲಿ ಸೇರಿ ಮಕರ ಸಂಕ್ರಾಂತಿ ಹಬ್ಬದಂದು ರಾಸುಗಳನ್ನು ಕಿಚ್ಚು ಹಾಯಿಸುವುದಿಲ್ಲ ಹಾಗೂ ಹಬ್ಬ ಆಚರಿಸುವುದಿಲ್ಲ. ಬದಲಿಗೆ ಪ್ರತಿ ವರ್ಷ ಬಸವ ಜಯಂತಿ ದಿನ ದೇವಾಲಯದಲ್ಲಿ ಪೂಜೆ ಸಲ್ಲಿಸುವುದಾಗಿ ಹರಕೆ ಹೊತ್ತ ನಂತರ ರಾಸುಗಳಿಗೆ ಕಾಯಿಲೆ ವಾಸಿಯಾಯಿತಂತೆ. ಪೂರ್ವಜರ ಹರಕೆ ಕಾರಣಕ್ಕೆ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬ ಆಚರಿಸುವುದಿಲ್ಲ’ ಎಂದು ಗ್ರಾಮದ ಹಿರಿಯರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಕ್ರಾಂತಿ ಬದಲಿಗೆ ಬಸವ ಜಯಂತಿ ದಿನ ರಾಸುಗಳನ್ನು ಪೂಜಿಸುವ ಪ್ರತೀತಿ ಇದೆ. ಆ ದಿನ ರಾಸುಗಳ ಮೈ ತೊಳೆದು ಬಸವೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ಮಾಡಲಾಗುತ್ತದೆ. ಇಡೀ ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗುತ್ತದೆ. ಗ್ರಾಮಸ್ಥರು ಮನೆಗಳಲ್ಲಿ ಸಿಹಿ ಅಡುಗೆ ಮಾಡಿ ಭರ್ಜರಿಯಾಗಿ ಹಬ್ಬ ಆಚರಿಸುತ್ತಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು