ಶನಿವಾರ, ಜನವರಿ 28, 2023
20 °C
73 ಸ್ತ್ರೀಶಕ್ತಿ ಸಂಘಗಳಿಗೆ ₹ 3.60 ಕೋಟಿ ಸಾಲ ಸೌಲಭ್ಯ

ಸಾಲದ ಮೊತ್ತ ಹೆಚ್ಚಳ: ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ‘ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಸ್ತ್ರೀಶಕ್ತಿ ಸಂಘದ ಸದಸ್ಯೆಯರಿಗೆ ಡಿಸಿಸಿ ಬ್ಯಾಂಕ್‌ನಿಂದ ನೀಡಲಾಗುವ ಶೂನ್ಯ ಬಡ್ಡಿ ಸಾಲದ ಮೊತ್ತವನ್ನು ಹೆಚ್ಚಿಸಲಾಗುವುದು’ ಎಂದು ಶಾಸಕ ಕೆ.ಆರ್. ರಮೇಶ್ ಕುಮಾರ್ ಹೇಳಿದರು.

ಪಟ್ಟಣದ ಮಾರುತಿ ಸಭಾಂಗಣದಲ್ಲಿ ಕಸಬಾ ರೇಷ್ಮೆ ಬೆಳೆಗಾರರ ಸಂಘದಿಂದ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ 73 ಸ್ತ್ರೀಶಕ್ತಿ ಸಂಘಗಳಿಗೆ ₹ 3.60 ಕೋಟಿ ಸಾಲದ ಚೆಕ್ ವಿತರಿಸಿ ಅವರು ಮಾತನಾಡಿದರು.

ಪ್ರಸ್ತುತ ಪ್ರತಿ ಸದಸ್ಯರಿಗೆ ₹ 50 ಸಾವಿರ ಶೂನ್ಯ ಬಡ್ಡಿ ಸಾಲ ಹಾಗೂ ನಂತರ ಬಡ್ಡಿ ಸಹಿತ ₹ 50 ಸಾವಿರ ಸಾಲ ನೀಡಲಾಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ₹ 1 ಲಕ್ಷ ಬಡ್ಡಿ ರಹಿತ ಸಾಲ ನೀಡಲಾಗುವುದು. ಪಡೆದುಕೊಂಡ ಸಾಲ ಸದುಪಯೋಗವಾಗಬೇಕು. ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.

ಬಡವರಿಗೆ ಬಡ್ಡಿ ರಹಿತ ಸಾಲ ನೀಡುವುದರೊಂದಿಗೆ ಅವರನ್ನು ಖಾಸಗಿ ಲೇವಾದೇವಿಗಾರರ ಕಿರುಕುಳದಿಂದ ತಪ್ಪಿಸಲಾಗಿದೆ. ಮಧ್ಯವರ್ತಿಗಳ ಹಾವಳಿಯಿಂದ ಪಾರು ಮಾಡಲಾಗಿದೆ. ಇದನ್ನು ಸಹಿಸದ ಕೆಲವರು ಸಾಲ ನೀಡುವ ಕುರಿತು ಟೀಕೆ ಮಾಡುತ್ತಿದ್ದಾರೆ. ಆದರೆ, ಮಹಿಳೆಯರ ಸ್ವಾವಲಂಬನೆಗೆ ಅದೆಲ್ಲವನ್ನೂ ಗಣನೆಗೆ ತೆಗೆದುಕೊಳ್ಳದೆ ಸಾಲ ವಿತರಣೆಯನ್ನು ಮುಂದುವರಿಸಲಾಗಿದೆ ಎಂದು ತಿಳಿಸಿದರು.

‘ಸಾಲ ನೀಡಿಕೆಯಲ್ಲಿ ಮಧ್ಯವರ್ತಿಗಳನ್ನು ದೂರ ಇಡಲಾಗಿದೆ. ಅರ್ಹ ಫಲಾನುಭವಿಗಳಿಗೆ ಮಾತ್ರ ಪಕ್ಷಾತೀತವಾಗಿ ಸಾಲ ವಿತರಣೆ ಮಾಡಲಾಗುತ್ತಿದೆ. ಸರ್ಕಾರದ ಎಲ್ಲಾ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸಿಗುವಂತೆ ನೋಡಿಕೊಳ್ಳಲಾಗಿದೆ’ ಎಂದರು.

‘ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ ಮತದಾರರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಅವರ ಆಶೀರ್ವಾದ ಇರುವವರೆಗೆ ಆತಂಕ ಪಡಬೇಕಾದ ಅಗತ್ಯವಿಲ್ಲ’ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ವಿ. ಸುಧಾಕರ್, ಮುಖಂಡರಾದ ಸಂಜಯ್ ರೆಡ್ಡಿ, ಅಯ್ಯಪ್ಪ, ಶಬ್ಬೀರ್ ಅಹ್ಮದ್, ನಾಗರಾಜ್, ಮುನಿವೆಂಕಟಪ್ಪ, ಪುರಸಭೆ ಅಧ್ಯಕ್ಷ ಉನಿಕಿಲಿ ನಾಗರಾಜ್, ಅನ್ನೀಸ್ ಅಹ್ಮದ್, ಬೈರಾರೆಡ್ಡಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು