ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿಯಲ್ಲಿ ಒಕ್ಕಣೆ ತಡೆಗೆ ಒತ್ತಾಯ

Last Updated 22 ನವೆಂಬರ್ 2020, 4:26 IST
ಅಕ್ಷರ ಗಾತ್ರ

ಮುಳಬಾಗಿಲು: ರಾಷ್ಟ್ರೀಯ ಹೆದ್ದಾರಿಯಲ್ಲಿ ಒಕ್ಕಣೆ ಮಾಡುವ ರೈತರಿಗೆ ಕರಪತ್ರಗಳ ಮೂಲಕ ಜಾಗೃತಿ ಮೂಡಿಸಿ ಮುಂದೆ ಆಗುವ ಅನಾಹುತ ತಪ್ಪಿಸಬೇಕೆಂದು ಆಗ್ರಹಿಸಿ ಹೊಸಕೋಟೆ ಲ್ಯಾಂಕೋದ ಹನುಮನಹಳ್ಳಿ ಟೋಲ್ ವ್ಯವಸ್ಥಾಪಕ ವೇಣುಗೋಪಾಲ ರೆಡ್ಡಿ ಅವರಿಗೆ ರೈತ ಸಂಘದಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಈ ವರ್ಷ ಎಲ್ಲೆಡೆ ಉತ್ತಮವಾಗಿ ಮಳೆಯಾಗಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಸಮೃದ್ಧವಾಗಿ ರಾಗಿ ಬೆಳೆ ಬೆಳೆಯಲಾಗಿದೆ. ಆದರೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಈಗಾಗಲೇ ಕಣ್ಮರೆಯಾಗಿರುವ ಕಣಗಳನ್ನು ನಿರ್ಮಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಸರ್ಕಾರದಿಂದ ಸಾವಿರಾರು ಕೋಟಿ ಅನುದಾನ ಬಂದಿದ್ದರೂ ಬಳಸಿಕೊಳ್ಳುವುದಕ್ಕೂ ಮುಂದಾಗಿಲ್ಲ ಎಂದು ದೂರಿದರು.

ಅನುದಾನ ಬಳಸಿಕೊಂಡು ಗ್ರಾಮೀಣ ಪ್ರದೇಶದ ಪ್ರತಿ ಹಳ್ಳಿಯಲ್ಲಿಯೂ ಒಂದು ಅಥವಾ ಎರಡು ಕಡೆಗಳಲ್ಲಿ ಒಕ್ಕಣೆ ಕಣಗಳನ್ನು ನಿರ್ಮಿಸಿಕೊಡಲು ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಅಧ್ಯಕ್ಷ ಫಾರೂಖ್ ಪಾಷ ಮಾತನಾಡಿ, ಕಣ ಇಲ್ಲದೆ ರೈತರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದಾರೆ. ರಾಗಿ ತೂರುವ ವೇಳೆ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ತೆನೆಗಳನ್ನು ರಸ್ತೆಯಲ್ಲಿ ಹಾಕುವುದರಿಂದ ದ್ವಿಚಕ್ರವಾಹನ ಸವಾರರು ಅಪಘಾತಗಳಿಗೆ ಒಳಗಾಗಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇಷ್ಟೆಲ್ಲಾ ಅವ್ಯವಸ್ಥೆ ಇರುವುದರಿಂದ ಎನ್ಎಚ್ಐ ಮತ್ತು ಲ್ಯಾಂಕೋ ಅಧಿಕಾರಿಗಳು ರಸ್ತೆಯಲ್ಲಿ ಒಕ್ಕಣೆ ಮಾಡುವುದರಿಂದಾಗಿ ಆಗುವ ಅನಾಹುತದ ಬಗ್ಗೆ ರೈತರಿಗೆ ಕರಪತ್ರಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ವೇಣುಗೋಪಾಲರೆಡ್ಡಿ, ಈ ಸಂಬಂಧ ಕೃಷಿ ಇಲಾಖೆ ಹಾಗೂ ತಾ.ಪಂ. ಇಒಗಳ ಗಮನಕ್ಕೆ ತಂದು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ರೈತ ಸಂಘದ ಕೋಲಾರ ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜು, ವಿಶ್ವನಾಥ್, ಸುಪ್ರಿಂಚಲ, ಪುತ್ತೇರಿ ರಾಜು, ವೇಣು, ವಿಜಯ್, ಸಾಗರ್, ನವೀನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT