ಭಾನುವಾರ, ಮೇ 16, 2021
22 °C
ಕೆ.ಸಿ ವ್ಯಾಲಿ ಯೋಜನೆ: ಬಿಜೆಪಿ ಕಾರ್ಯಕರ್ತರ ಧರಣಿ

3ನೇ ಹಂತದಲ್ಲಿ ನೀರು ಸಂಸ್ಕರಣೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಸಿ ವ್ಯಾಲಿ ಯೋಜನೆ ನೀರನ್ನು 3ನೇ ಹಂತದಲ್ಲಿ ಸಂಸ್ಕರಿಸಿ ಜಿಲ್ಲೆಯ ಕೆರೆಗಳಿಗೆ ಹರಿಸಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಕೋಲಾರದಲ್ಲಿ ಸೋಮವಾರ ಧರಣಿ ನಡೆಸಿದರು.

ಕೋಲಾರ: ಕೆ.ಸಿ ವ್ಯಾಲಿ ಯೋಜನೆ ನೀರನ್ನು 3ನೇ ಹಂತದಲ್ಲಿ ಸಂಸ್ಕರಿಸಿ ಜಿಲ್ಲೆಯ ಕೆರೆಗಳಿಗೆ ಹರಿಸಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಧರಣಿ ನಡೆಸಿದರು.

ನೀರಾವರಿ ಹೋರಾಟ ವೇದಿಕೆಯಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದ ಧರಣಿನಿರತರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನಸಭಾ ಸ್ಪೀಕರ್‌ ಕೆ.ಆರ್.ರಮೇಶ್‌ಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಜೇಬು ತುಂಬಿಸಿಕೊಳ್ಳಲು ಕೆ.ಸಿ ವ್ಯಾಲಿ ಯೋಜನೆ ರೂಪಿಸಿತು. ಕಾಂಗ್ರೆಸ್‌ ಪಕ್ಷವು ಜಿಲ್ಲೆಯ ಜನರಿಗೆ ನೀರು ಕೊಡುವ ಸೋಗಿನಲ್ಲಿ ವಿಷ ಉಣಿಸುವ ಸಂಚು ಮಾಡಿದೆ. ಈ ಯೋಜನೆಯ ಗುತ್ತಿಗೆದಾರರು ಕಾಂಗ್ರೆಸ್‌ ನಾಯಕರ ಜೇಬು ತುಂಬಿಸಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಆರೋಪಿಸಿದರು.

‘ಈಗಾಗಲೇ ಜಿಲ್ಲೆಯ ಜನ ವಿಷಕಾರಿ ಫ್ಲೋರೈಡ್‌ಯುಕ್ತ ನೀರು ಕುಡಿದು ಅನೇಕ ರೋಗಗಳಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿಷಯುಕ್ತ ತ್ಯಾಜ್ಯ ನೀರು ಹರಿಸಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಾಗಿದೆ. ಜಿಲ್ಲೆಯ ಕೆರೆಗಳನ್ನು ನಿರ್ನಾಮ ಮಾಡಲು ಹೊರಟಿರುವ ಕಾಂಗ್ರೆಸ್‌ಗೆ ಜನರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ’ ಎಂದು ದೂರಿದರು.

ನಾಚಿಕೆಗೇಡು: ‘ದಿನದ 24 ತಾಸೂ ರೈತರ ಬಗ್ಗೆ ಚಿಂತಿಸುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೆ.ಸಿ ಯೋಜನೆ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಿಸಬೇಕೆಂಬ ಸಾಮಾನ್ಯ ಪರಿಜ್ಞಾನವಿಲ್ಲ. ಅವರಿಗೆ ಜನಹಿತಕ್ಕಿಂತ ಮುಖ್ಯಮಂತ್ರಿಗಾದಿ ಉಳಿಸಿಕೊಳ್ಳುವುದೇ ಮುಖ್ಯವಾಗಿದೆ. ಕೆ.ಸಿ ವ್ಯಾಲಿ ಅವಾಂತರದ ಬಗ್ಗೆ ಅವರು ಮೌನವಾಗಿರುವುದು ನಾಚಿಕೆಗೇಡು’ ಎಂದು ಧರಣಿನಿರತರು ಕಿಡಿಕಾರಿದರು.

‘ನೊರೆಯುಕ್ತ ತ್ಯಾಜ್ಯ ನೀರನ್ನು ಹರಿಸಿರುವುದರಿಂದ ನರಸಾಪುರ ಭಾಗದಲ್ಲಿ ನೂರಾರು ಎಕರೆ ಬೆಳೆ ನಷ್ಟವಾಗಿದೆ. ಇದಕ್ಕೆಲ್ಲಾ ಸರ್ಕಾರವೇ ಹೊಣೆ. ಎರಡು ಹಂತದಲ್ಲಿ ಸಂಸ್ಕರಣೆಯಾಗಿರುವ ನೀರು ಅಂತರ್ಜಲ ಸೇರಿದರೆ ಆ ನೀರು ಸಹ ವಿಷಮಯವಾಗುತ್ತದೆ. 3ನೇ ಹಂತದಲ್ಲಿ ಸಂಸ್ಕರಿಸಿದ ನೀರು ಮಾತ್ರ ಬಳಕೆಗೆ ಯೋಗ್ಯವೆಂದು ಭಾರತೀಯ ವಿಜ್ಞಾನ ಸಂಸ್ಥೆ ವರದಿ ನೀಡಿತ್ತು. ಸರ್ಕಾರ ಈ ವರದಿಯನ್ನು ಕಡೆಗಣಿಸಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸೌಧಕ್ಕೆ ಮುತ್ತಿಗೆ: ‘ರಾಜ್ಯದಲ್ಲಿ 3,500 ಟಿಎಂಸಿ ನೀರು ಲಭ್ಯವಿದ್ದು, ಮೇಕೆದಾಟು ಯೋಜನೆಯಿಂದ 19 ಟಿಎಂಸಿ ನೀರು ನೀಡಿದರೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಹೀಗಾಗಿ ಆ ಯೋಜನೆಗೆ ಒತ್ತು ಕೊಡಬೇಕು. ಕೆ.ಸಿ ವ್ಯಾಲಿ ನೀರನ್ನು 3ನೇ ಹಂತದಲ್ಲಿ ಸಂಸ್ಕರಿಸಬೇಕು. ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ, ಮಾಜಿ ಶಾಸಕ ಎ.ನಾಗರಾಜ್, ಜಿಲ್ಲಾ ಪಂಚಾಯಿತಿ ಸದಸ್ಯೆ ಅಶ್ವಿನಿ, ಯುವ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಓಂಶಕ್ತಿ ಚಲಪತಿ, ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷೆ ಮಮತಾ, ನಗರ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ನಗರಸಭಾ ಸದಸ್ಯ ಎಸ್‌.ಆರ್‌.ಮುರಳಿಗೌಡ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು