ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ನ ಅಭಿವೃದ್ದಿಗೆ ಅಡ್ಡಗಾಲು: ಸಿಇಒ ವಿರುದ್ಧ ಶಿಸ್ತುಕ್ರಮಕ್ಕೆ ನಿರ್ಣಯ

ಭುಗಿಲೆದ್ದ ಆಕ್ರೋಶ
Last Updated 10 ನವೆಂಬರ್ 2021, 15:20 IST
ಅಕ್ಷರ ಗಾತ್ರ

ಕೋಲಾರ: ಇಲ್ಲಿ ಬುಧವಾರ ನಡೆದ ಡಿಸಿಸಿ ಬ್ಯಾಂಕ್‌ನ ಸರ್ವ ಸದಸ್ಯರ ಸಭೆಯಲ್ಲಿ ಬ್ಯಾಂಕ್‌ನ ಪ್ರಭಾರ ಸಿಇಒ ವೆಂಕಟೇಶ್‌ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.

‘ವೆಂಕಟೇಶ್‌ ಅವರು ಬ್ಯಾಂಕ್‌ನ ಅಭಿವೃದ್ದಿಗೆ ಅಡ್ಡಗಾಲು ಹಾಕುತ್ತಿದ್ದಾರೆ’ ಎಂದು ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಸಿಇಒ ವಿರುದ್ಧ ಮುಗಿಬಿದ್ದ ಸದಸ್ಯರು, ‘ಬ್ಯಾಂಕ್‌ನ ಘನತೆಗೆ ಚ್ಯುತಿ ತರುತ್ತಿದ್ದೀರಿ. ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಾ ರೈತರು, ಮಹಿಳೆಯರಿಗೆ ದ್ರೋಹ ಬಗೆಯುತ್ತಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡರು.

ಲೆಕ್ಕಪತ್ರ ಆಯವ್ಯಯ ಮಂಡನೆ, ಲೆಕ್ಕಪರಿಶೋಧನಾ ವರದಿಯ ಅನುಪಾಲನಾ ವರದಿ ಮಂಡನೆಗೆ ಸಹಕಾರ ಸಂಘಗಳ ನಿಬಂಧಕರು ನೀಡಿರುವ ತಡೆಯಾಜ್ಞೆ ಧಿಕ್ಕರಿಸಿ ಸಭೆಯಲ್ಲಿ ಸರ್ವಾನುಮತದ ಮೂಲಕ ವರದಿ ಮಂಡನೆಗೆ ಅವಕಾಶ ಕಲ್ಪಿಸಿ ಅನುಮೋದಿಸಲಾಯಿತು.

‘ಅಧಿಕಾರಿಗಳು 10 ವರ್ಷ ಈ ಬ್ಯಾಂಕ್‌ನಲ್ಲಿ ಅಧಿಕಾರ ನಡೆಸಿ ರೈತರ ಬದುಕು ನಾಶ ಮಾಡಿದ್ದರು, ಈಗ ಬ್ಯಾಂಕ್ ಲಕ್ಷಾಂತರ ಜನರ ಜೀವಾಳವಾಗಿ ದೇಶದಲ್ಲೇ ನಂ.1 ಆಗಿದೆ, ಅನ್ನಕ್ಕೆ ಮಣ್ಣು ಹಾಕುವ ಕೆಲಸ ಮಾಡುವ ಸಿಇಒ ವೆಂಕಟೇಶ್‍ರಂತಹ ಅಧಿಕಾರಿಗಳಿಗೆ ಬುದ್ಧಿ ಕಲಿಸಬೇಕು’ ಎಂದು ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ ಗುಡುಗಿದರು.

ಪ್ರಶ್ನೆಗಳ ಸುರಿಮಳೆ: ಸಿಇಒ ವೆಂಕಟೇಶ್‌ ಅವರು ನಿಬಂಧಕರು ನೀಡಿರುವ ತಡೆಯಾಜ್ಞೆ, ಬಡ್ಡಿ ಕ್ಲೈಮ್‍ನಲ್ಲಿ ಅವ್ಯವಹಾರದ ಕುರಿತು ಮಾತನಾಡಲು ಆರಂಭಿಸುತ್ತಿದ್ದಂತೆ ಸದಸ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು, ‘ನೀವೇ ಉಪ ನಿಬಂಧಕರು, ನೀವೇ ಬ್ಯಾಂಕ್‌ನ ಪ್ರಭಾರ ಸಿಇಒ ಆಗಿದ್ದು ಯಾರ ಮೇಲೆ ದೂರು ನೀಡಿದ್ದೀರಿ’ ಎಂದು ಸದಸ್ಯರು ಪ್ರಶ್ನೆಗಳ ಸುರಿಮಳೆಗರೆದರು.

ಆಗ ಮಧ್ಯಪ್ರವೇಶಿಸಿದ ಬ್ಯಾಂಕ್‌ನ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡರು ಸದಸ್ಯರನ್ನು ಸಮಾಧಾನಪಡಿಸಿ, ‘ಬಡ್ಡಿ ಕ್ಲೈಮ್‍ನಲ್ಲಿ ತಪ್ಪಾಗಿಲ್ಲ. ತಪ್ಪಾಗಿದ್ದರೆ ಅದಕ್ಕೆ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳೇ ನೇರ ಹೊಣೆ, ಸೊಸೈಟಿಗಳ ಹಿಡಿತ ಇರುವುದು ಉಪ ನಿಬಂಧಕರ ಕೈಯಲ್ಲೇ’ ಎಂದು ಹೇಳಿದರು.

ಮಣ್ಣು ಹಾಕಬೇಡಿ: ‘ಅಧಿಕಾರಿಗಳು ಯಾರದ್ದೋ ಮಾತು ಕೇಳಿಕೊಂಡು ಬ್ಯಾಂಕ್‌ನ ಗೌರವ ಕಳೆದು ರೈತರ ಬಾಯಿಗೆ ಮಣ್ಣು ಹಾಕಬೇಡಿ, ಬ್ಯಾಂಕ್ ರೈತರ ಆಸ್ತಿ, ನಿಮ್ಮ ಮಕ್ಕಳಿಗೆ ಒಳ್ಳೆಯದಾಗಲ್ಲ’ ಎಂದು ಕುರಗಲ್ ಎಂಪಿಸಿಎಸ್ ಅಧ್ಯಕ್ಷ ವೆಂಕಟೇಶ್ ಶಪಿಸಿದರು.

‘ಅವಳಿ ಜಿಲ್ಲೆಯ ರೈತರು, ಮಹಿಳೆಯರು ಬ್ಯಾಂಕ್‌ ನಂಬಿ ಜೀವನ ನಡೆಸುತ್ತಿದ್ದಾರೆ. ಸುಮ್ಮನೆ ಏಕೆ ಅಪಪ್ರಚಾರ ಮಾಡುತ್ತೀರಿ? ನೀವೇ ಬಡ್ಡಿ ಕ್ಲೈಮ್‍ಗೆ ಸಹಿ ಹಾಕುವ ಅಧಿಕಾರ ಹೊಂದಿದ್ದೀರಿ, ನೀವೇ ಭ್ರಷ್ಟಾಚಾರವಾಗಿದೆ ಎಂದು ದೂರು ನೀಡುತ್ತೀರಿ. ಇಂತಹ ಬೇಜವಾಬ್ದಾರಿ ಅಧಿಕಾರಿ ವಿರುದ್ಧ ಶಿಸ್ತುಕ್ರಮಕ್ಕೆ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿ’ ಎಂದು ಜಿ.ಪಂ ಮಾಜಿ ಅಧ್ಯಕ್ಷೆ ನಾಗರತ್ನಮ್ಮ ಆಗ್ರಹಿಸಿದರು.

ನಿರ್ಣಯವೇ ಅಂತಿಮ: ‘ಸರ್ವ ಸದಸ್ಯರ ಸಭೆಯ ತೀರ್ಮಾನಕ್ಕೆ ಬದ್ಧವಾಗಿರುತ್ತೇವೆ. ಲೆಕ್ಕಪತ್ರ, ಆಯವ್ಯಯ ಮಂಡನೆ ಕುರಿತಂತೆ ಸದಸ್ಯರ ನಿರ್ಣಯವೇ ಅಂತಿಮ’ ಎಂದು ಬ್ಯಾಂಕ್‌ನ ಅಧ್ಯಕ್ಷರು ಹೇಳಿದರು.

ಬ್ಯಾಂಕನ್‌ ಸಹಾಯಕ ಪ್ರಧಾನ ವ್ಯವಸ್ಥಾಪಕ ಶಿವಕುಮಾರ್, 2020–21ನೇ ಸಾಲಿನ ಲೆಕ್ಕಪತ್ರ ಪರಿಶೀಲನಾ ತಃಖ್ತೆಗಳನ್ನು ಮಂಡಿಸಿದಾಗ ಇಡೀ ಸಭೆ ಸರ್ವಾನುಮತದ ಅನುಮೋದನೆ ನೀಡಿತು. ಸದಸ್ಯರ ಸಿಟ್ಟಿಂಗ್ ಗೌರವಧನ ಹೆಚ್ಚಳ, ಗೌರಿಬಿದನೂರಿನಲ್ಲಿ ನೂತನ ಕಟ್ಟಡ ನಿರ್ಮಾಣ ಸೇರಿದಂತೆ ಹಲವು ವಿಷಯಗಳಿಗೆ ಅನುಮೋದನೆ ನೀಡಲಾಯಿತು.

ಕೆಲ ಸದಸ್ಯರು ಡಿಸಿಸಿ ಬ್ಯಾಂಕ್‌ ವಿಭಜನೆಯ ವಿಷಯ ಪ್ರಸ್ತಾಪಿಸಿದಾಗ ಅಧ್ಯಕ್ಷರು, ‘ಬ್ಯಾಂಕ್‌ ವಿಭಜನೆಗೆ ನಮ್ಮ ವಿರೋಧವಿಲ್ಲ. ಆದರೆ, ಈಗ ವಿಭಜನೆಗೆ ಆರ್ಥಿಕವಾದ ಮತ್ತು ಕಾನೂನಾತ್ಮಕವಾದ ಕೆಲ ಸಮಸ್ಯೆಗಳಿವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT