ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆ ವಿಷಯ ಮಂಡಿಸಲು ಸಿಇಒಗೆ ಆಹ್ವಾನ

ನರೇಗಾ ಅನುಷ್ಠಾನ: ಜಿಲ್ಲೆಯ ರೇಷ್ಮೆ ಇಲಾಖೆ ರಾಜ್ಯದಲ್ಲೇ ಪ್ರಥಮ
Last Updated 17 ಅಕ್ಟೋಬರ್ 2019, 6:14 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ರೇಷ್ಮೆ ಇಲಾಖೆಯು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಅನುಷ್ಠಾನದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಜಿ.ಪಂ ಸಿಇಒ ಎಚ್.ವಿ.ದರ್ಶನ್‌ ದೆಹಲಿಯಲ್ಲಿ ಅ.21ರಂದು ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾಧನೆ ಬಗ್ಗೆ ವಿವರ ಮಂಡಿಸಲಿದ್ದಾರೆ.

ನರೇಗಾದಡಿ ರೇಷ್ಮೆ ಕೃಷಿಯಲ್ಲಿ ಜಿಲ್ಲೆಯು ಉತ್ತಮ ಸಾಧನೆ ತೋರಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದೆಹಲಿಯ ಕಾರ್ಯಕ್ರಮದಲ್ಲಿ ವಿಷಯ ಮಂಡಿಸಲು ಜಿ.ಪಂ ಸಿಇಒ ಹಾಗೂ ರೇಷ್ಮೆ ಇಲಾಖೆ ಉಪ ನಿರ್ದೇಶಕ ಎಂ.ಕೆ.ಪ್ರಭಾಕರ್ ಅವರಿಗೆ ಆಹ್ವಾನ ನೀಡಿದೆ. ಈ ಹಿನ್ನೆಲೆಯಲ್ಲಿ ಸಿಇಒ ದರ್ಶನ್‌ ಅವರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ಹಿಪ್ಪುನೇರಳೆ ತೋಟಗಳು ಹಾಗೂ ರೇಷ್ಮೆ ಹುಳು ಮನೆಗಳಿಗೆ ಮಂಗಳವಾರ ಭೇಟಿ ನೀಡಿ ರೇಷ್ಮೆ ಕೃಷಿ ಚಟುವಟಿಕೆ ವೀಕ್ಷಿಸಿದರು.

ಕೋಲಾರದ ರೇಷ್ಮೆ ಬಿತ್ತನೆ ಕೋಠಿಗೆ ಭೇಟಿ ನೀಡಿದ ಸಿಇಒ ರೇಷ್ಮೆ ಗೂಡು ಹರಾಜು, ವಹಿವಾಟು ಪರಿಶೀಲಿಸಿದರು. ಜತೆಗೆ ಪ್ರತಿ ತಿಂಗಳು ಬಿತ್ತನೆಯಾಗುವ ರೇಷ್ಮೆ ಮೊಟ್ಟೆ ಹಾಗೂ ರೈತರ ಬೇಡಿಕೆ ಬಗ್ಗೆ ಮಾಹಿತಿ ಸಂಗ್ರಹಿಸಿದರು. ತಾಲ್ಲೂಕಿನ ಉಪ್ಪುಕುಂಟೆ ಗ್ರಾಮದ ಬಳಿಯ ಹಿಪ್ಪುನೇರಳೆ ತೋಟಗಳಿಗೆ ಭೇಟಿ ಕೊಟ್ಟು ಕೃಷಿ ಚಟುವಟಿಕೆಗಳು ಮತ್ತು ನರೇಗಾ ಅಡಿ ಕೈಗೊಂಡಿರುವ ಕಾರ್ಯಗಳನ್ನು ಪರಿಶೀಲಿಸಿದರು.

ತಾಲ್ಲೂಕಿನ ಅಂಕತಟ್ಟಿ ಗ್ರಾಮದ ಪ್ರಗತಿಪರ ರೈತ ಈಶ್ವರ್ ಅವರ ಜಮೀನಿನಲ್ಲಿ ವಿವಿಧ ಮಾದರಿಯ ಹಿಪ್ಪುನೇರಳೆ ಬೆಳೆ ಬೆಳೆದಿರುವುದು, ನೀರಿನ ಮಿತ ಬಳಕೆ, ಮರ ವಿಧಾನದ ಬಗ್ಗೆ ಮಾಹಿತಿ ಕಲೆ ಹಾಕಿದರು. ರಾಜ್ಯ ಪ್ರಶಸ್ತಿ ವಿಜೇತ ರೇಷ್ಮೆ ಕೃಷಿಕ ನಾಗನಾಳ ಗ್ರಾಮದ ಶ್ರೀನಿವಾಸ್‌ರ ಹುಳು ಸಾಕಣೆ ಮನೆಯಲ್ಲಿ ದ್ವಿತಳಿ ರೇಷ್ಮೆ ಹುಳು ಸಾಕಣೆ ತಾಂತ್ರಿಕತೆ ಬಗ್ಗೆ ಮಾಹಿತಿ ಪಡೆದರು.

ಕೃಷಿಯಲ್ಲಿ ಸಾಧನೆ: ‘ತಾಲ್ಲೂಕಿನ ರೈತರು ಬರ ಪರಿಸ್ಥಿತಿ ನಡುವೆಯೂ ಎದೆಗುಂದದೆ ಕೃಷಿ ನಿರ್ವಹಣೆ ಮಾಡುತ್ತಿದ್ದಾರೆ. ವಿಜ್ಞಾನಿಗಳ ತಾಂತ್ರಿಕತೆಯನ್ನೂ ಮೀರಿಸಿ ನೀರಿನ ಮಿತ ಬಳಕೆಯೊಂದಿಗೆ ರೇಷ್ಮೆ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ. ರೈತರ ಜೀವನಾಡಿಯಾಗಿರುವ ರೇಷ್ಮೆ ಕೃಷಿ ಅಭಿವೃದ್ಧಿಗೆ ಸಕಲ ನೆರವು ನೀಡುತ್ತೇವೆ’ ಎಂದು ದರ್ಶನ್‌ ಹೇಳಿದರು.

‘ರೇಷ್ಮೆ ಉತ್ಪಾದನೆಯಲ್ಲಿ ದೇಶವು ಜಾಗತಿಕವಾಗಿ 2ನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದೆ. ಚೀನಾ ರೇಷ್ಮೆ ಆಮದಿನಿಂದ ದೇಶದ ರೇಷ್ಮೆ ಬೆಳೆಗಾರರು ಹಾಗೂ ನೂಲು ಬಿಚ್ಚಾಣಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೂಲು ಬಿಚ್ಚಾಣಿಕೆದಾರರು ದ್ವಿತಳಿ ರೇಷ್ಮೆ ಬೇಕೆಂದು ಬಯಸುತ್ತಾರೆ. ರೈತರು ದ್ವಿತಳಿ ರೇಷ್ಮೆ ಹುಳು ಸಾಕಾಣಿಕೆ ಮಾಡುವ ಮೂಲಕ ನೂಲು ಬಿಚ್ಚಾಣಿಕೆದಾರರ ಬೇಡಿಕೆ ಈಡೇರಿಸಬೇಕು’ ಎಂದು ಸಲಹೆ ನೀಡಿದರು.

ಹೆಚ್ಚು ಇಳುವರಿ: ‘ವಿದೇಶಿ ಮಾರುಕಟ್ಟೆಯ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ರೈತರು ದ್ವಿತಳಿ ರೇಷ್ಮೆಗೂಡು ಉತ್ಪಾದಿಸಬೇಕು. ಆಧುನಿಕ ತಾಂತ್ರಿಕತೆ ಬಳಕೆಯಿಂದ ರೇಷ್ಮೆ ಹುಳುಗಳಿಗೆ ರೋಗಬಾಧೆ ತಪ್ಪಿಸಬಹುದು. ವೈಜ್ಞಾನಿಕ ಪದ್ಧತಿ ಅನುಸರಿಸಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬಹುದು’ ಎಂದು ರೇಷ್ಮೆ ಇಲಾಖೆ ಉಪ ನಿರ್ದೇಶಕ ಪ್ರಭಾಕರ್ ತಿಳಿಸಿದರು.

ಪವರ್ ಗ್ರಿಡ್ ಬಳಿ ₹ 3 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸ್ವಯಂಚಾಲಿತ ನೂಲು ಬಿಚ್ಚಾಣಿಕೆ ಕೇಂದ್ರವನ್ನು ಸಿಇಒ ವೀಕ್ಷಿಸಿದರು. ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಜಿಲ್ಲಾ ರೇಷ್ಮೆ ಬೆಳೆಗಾರರ ಸಂಘದ ಕಾರ್ಯದರ್ಶಿ ಬಿ.ಎಂ.ಶಂಕರೇಗೌಡ, ಖಜಾಂಚಿ ರಮೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT