ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಕ್ಕಾಗಿ ಬರುವವರ ವಿಶ್ವಾಸಕ್ಕೆ ಧಕ್ಕೆ ತರಬೇಡಿ: ನ್ಯಾ. ಸಂದೇಶ್

ಜಿಲ್ಲಾ ವಕೀಲರ ಬಳಗದಿಂದ ಜಿಲ್ಲೆಯ ನ್ಯಾಯಮೂರ್ತಿಗಳಿಗೆ ಅಭಿನಂದನಾ ಕಾರ್ಯಕ್ರಮ
Published 6 ನವೆಂಬರ್ 2023, 6:45 IST
Last Updated 6 ನವೆಂಬರ್ 2023, 6:45 IST
ಅಕ್ಷರ ಗಾತ್ರ

ಕೋಲಾರ: ‘ನ್ಯಾಯಾಲಯವನ್ನು ನಂಬಿ ನ್ಯಾಯಕ್ಕಾಗಿ ಬರುವ ಜನರ ನೆರವಿಗೆ ನಿಲ್ಲಬೇಕು. ಯಾವುದೇ ಕಾರಣಕ್ಕೆ ಜನರ ವಿಶ್ವಾಸಕ್ಕೆ ಧಕ್ಕೆ ಬರದಂತೆ ನ್ಯಾಯವಾದಿಗಳು ಜವಾಬ್ದಾರಿಯಿಂದ ನಡೆದು ಕೊಂಡಾಗ ಮಾತ್ರ ನ್ಯಾಯಾಲಯಕ್ಕೆ ಹಾಗೂ ವಕೀಲ ವೃತ್ತಿಗೆ ಹೆಚ್ಚು ಮಹತ್ವ ಬರುತ್ತದೆ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಕಿವಿಮಾತು ಹೇಳಿದರು.

ಶನಿವಾರ ಸಂಜೆ ಜಿಲ್ಲಾ ವಕೀಲರ ಬಳಗದಿಂದ ನಗರದ ವಕೀಲರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಕೀಲ ವೃತ್ತಿ ಅತ್ಯಂತ ಪವಿತ್ರವಾಗಿದೆ, ಇಲ್ಲಿ ನಿಮ್ಮನ್ನು ನಂಬಿ ಜನ ನ್ಯಾಯ ಕೇಳಿ ಬರುತ್ತಾರೆ. ಅಂತಹ ಜನರ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬ ವಕೀಲರ ಜವಾಬ್ದಾರಿಯಾಗಿದೆ’ ಎಂದು ತಿಳಿಸಿದರು.

‘ವಕೀಲ ವೃತ್ತಿಯಲ್ಲಿ ಯಶಸ್ವಿಯಾಗಲು ನಿರಂತರ ಅಧ್ಯಯನದ ಅಗತ್ಯವಿದೆ. ವಕೀಲರ ಸಂಘದಲ್ಲಿ ಇರುವ ಗ್ರಂಥಾಲಯ ಸದುಪಯೋಗ ಮಾಡಿಕೊಳ್ಳಿ, ಕಾನೂನುಗಳ ಅರಿವು ಹೆಚ್ಚಲು ಅಧ್ಯಯನ ನಡೆಸಿ’ ಎಂದರು.

‘ಕೋಲಾರ ಜಿಲ್ಲೆ ವಕೀಲರು ಮಾತ್ರವಲ್ಲ; ಅನೇಕ ನ್ಯಾಯಾಮೂರ್ತಿಗಳು, ನ್ಯಾಯಾಧೀಶರನ್ನು ಕೊಡುಗೆಯಾಗಿ ನೀಡಿದೆ. ಈ ಮಣ್ಣಿನ ಗುಣವೇ ಅಂತದ್ದು. ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿನವರು ನ್ಯಾಯಾಂಗದ ಅನೇಕ ಉನ್ನತ ಹುದ್ದೆಗಳಲ್ಲಿ ಅಲಂಕರಿಸಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿಯೂ ಜಿಲ್ಲೆಯವರು ಕಾರ್ಯ ನಿರ್ವಹಿಸಿರುವುದು ನಮ್ಮ ಹೆಮ್ಮೆ’ ಎಂದು ನುಡಿದರು.

ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ ಮಾತನಾಡಿದರು. ಕೋಲಾರ ಜಿಲ್ಲೆಯವರಾಗಿ, ಹೈಕೋರ್ಟ್‍ನ್ಯಾಯಮೂರ್ತಿಗಳಾಗಿ ಆಯ್ಕೆಯಾಗಿರುವ ನ್ಯಾಯಮೂರ್ತಿ ಕೆ.ವಿ.ಅರವಿಂದ್, ಎಚ್‌.ಪಿ.ಸಂದೇಶ್, ಎಸ್.ಎನ್.ಸಂಜಯ್‍ಗೌಡ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ, ಎನ್ ಬೈರಾರೆಡ್ಡಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಡಿ.ಕೆ.ರಮೇಶ್, ಕೋಲಾರ ಜಿಲ್ಲಾ ವಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ, ಮುಳಬಾಗಲು ವಕೀಲ ಡಿ.ವೆಂಕಟರಾಮೇಗೌಡ, ವಕೀಲರ ಸಂಘದ ಮುಖಂಡರಾದ ಸಿಬಿ ಜಯರಾಂ, ಎಂಪಿ ನಾರಾಯಣಸ್ವಾಮಿ, ನೋಟರಿಗಳಾದ ರವೀಂದ್ರಬಾಬು, ಟಿ.ಜಿ.ಮನ್ಮಥರೆಡ್ಡಿ, ರಾಮಲಿಂಗೇಗೌಡ, ಕೃಷ್ಣೇಗೌಡ, ಜಿಲ್ಲಾ ಗ್ರಾಹಕರ ಸಂಘದ ಅಧ್ಯಕ್ಷ ಸೈಯದ್ ಅಪ್ಸರ್ ಸಲೀಂ, ಬಿ ಎನ್ ಮಲ್ಲಿಕಾರ್ಜುನ, ರತ್ನಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT