ಗುರುವಾರ , ಜೂನ್ 4, 2020
27 °C
ಅದಾನಿ ಗೋಧಿ ಸಂಸ್ಕರಣಾ ಸರಬರಾಜು ಘಟಕಕ್ಕೆ ಸಚಿವ ಕೆ.ಗೋಪಾಲಯ್ಯ ದಿಢೀರ್‌ ಭೇಟಿ

ಬಡವರ ಅನ್ನಕ್ಕೆ ಅಡ್ಡಿ ಬಂದವರ ಮೇಲೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಲೂರು: ಸರ್ಕಾರದ ಸೂಚನೆಯಂತೆ ಪಡಿತರ ಅಂಗಡಿಗಳಲ್ಲಿ ಬಡವರಿಗೆ ನೀಡಬೇಕಾದ ಪಡಿತರವನ್ನು ಯಾವುದೇ ರೀತಿಯ ತೊಂದರೆ ನೀಡದೆ ವಿತರಣೆ ಮಾಡಬೇಕು ಎಂದು ಆಹಾರ ಮತ್ತು ನಾಗರಿಕ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

ಪಟ್ಟಣದ ಹೊರವಲಯದಲ್ಲಿರುವ ಅದಾನಿ ಗೋಧಿ ಸಂಸ್ಕರಣಾ ಸರಬರಾಜು ಘಟಕಕ್ಕೆ ಮಂಗಳವಾರ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.

ಬಜೆಟ್ ಅಧಿವೇಶನದಲ್ಲಿ ಬಡವರಿಗೆ ಗೋಧಿ ನೀಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದರು. ಈ ಕಾರ್ಯ ವಿಳಂಬವಾದ ಹಿನ್ನೆಲೆಯಲ್ಲಿ ಖುದ್ದಾಗಿ ಘಟಕ ನೋಡಲು ಬಂದಿದ್ದೇನೆ. ಪ್ರತಿ ಕುಟುಂಬಕ್ಕೆ ತಲಾ 10 ಕೆ.ಜಿ ಅಕ್ಕಿ ಮತ್ತು 2 ಕೆ.ಜಿ ಗೋಧಿ ವಿತರಿಸಲಾಗುತ್ತಿದೆ. ಏಪ್ರಿಲ್ 20ರ ನಂತರ ಮತ್ತೆ ಇದೇ ಪ್ರಮಾಣದಲ್ಲಿ ಪಡಿತರವನ್ನು ವಿತರಿಸಲಾಗುವುದು ಎಂದರು.

ಪಡಿತರ ಅಂಗಡಿಗಳಿಗೆ ಭೇಟಿ: ಗೋಧಿ ಸಂಸ್ಕರಣಾ ಘಟಕದಿಂದ ಪಟ್ಟಣದ ದೊಡ್ಡ ಪೇಟೆಯಲ್ಲಿರುವ ಶಂಕರನಾರಾಯಣ ಸ್ವಾಮಿ ಸಹಕಾರ ಸಂಘಕ್ಕೆ ಸಚಿವ ಕೆ.ಗೋಪಾಲಯ್ಯ ಭೇಟಿ ನೀಡಿ ಪರಿಶೀಲಿಸಿದರು. ಶೇ 80ರಷ್ಟು ಪಡಿತರ ವಿತರಣೆ ಮಾಡಿರುವುದನ್ನು ಕಂಡು ಸಮಾಧಾನ ವ್ಯಕ್ತಪಡಿಸಿದರು.

ಶಿಷ್ಟಾಚಾರ ಪಾಲನೆಗೆ ಒತ್ತಾಯ: ಸಚಿವ ಕೆ.ಗೋಪಾಲಯ್ಯ ಪಟ್ಟಣದ ಶಂಕರನಾರಾಯಣ ಸ್ವಾಮಿ ಸಹಕಾರ ಸಂಘದ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಶಾಸಕ ಕೆ.ವೈ.ನಂಜೇಗೌಡ ಸ್ಥಳಕ್ಕೆ ಆಗಮಿಸಿ ಮಂತ್ರಿ ಜತೆ ಶಿಷ್ಟಾಚಾರದ ಬಗ್ಗೆ ಚರ್ಚಿಸಿದರು. ಯಾವುದೇ ಕ್ಷೇತ್ರಕ್ಕೆ ಬರುವ ಮುನ್ನ ಆಯಾ ಕ್ಷೇತ್ರದ ಶಾಸಕರಿಗೆ ಮಾಹಿತಿ ನೀಡಬೇಕು. ನಿಮ್ಮ ಆಪ್ತ ಸಹಾಯಕರು ಸಮರ್ಪಕ ಕೆಲಸ ಮಾಡುತ್ತಿಲ್ಲ ಎಂದು ಖಾರವಾಗಿ ಹೇಳಿದರು.

ಇದಕ್ಕೆ ಉತ್ತರಿಸಿದ ಸಚಿವರು ಗೋಧಿ ಸರಬರಾಜು ಬಗ್ಗೆ ಸಂಶಯವಿತ್ತು. ಇದರಿಂದ ಮಾಹಿತಿ ನೀಡದೇ ಅಧಿಕಾರಿಗಳೊಂದಿಗೆ ದಿಢೀರ್‌ ಭೇಟಿ ನೀಡಬೇಕಾಯಿತು ಎಂದರು. ಇಷ್ಟಕ್ಕೆ ಸುಮ್ಮನಾಗದ ಶಾಸಕರು ಶಿಷ್ಟಾಚಾರ ಪಾಲಿಸಬೇಕು ಎಂದರು. ಇದಕ್ಕೆ ಅಸಮಾಧಾನಗೊಂಡ ಸಚಿವರು ಇದು ಪ್ರವಾಸ ಕಾರ್ಯಕ್ರಮವಲ್ಲ. ಗೋಧಿ ಸರಬರಾಜು ಬಗ್ಗೆ ಸಂಶಯ ಬಂದಾಗ ದಿಢೀರ್ ಭೇಟಿ ನೀಡಲಾಗಿದೆ. ಇಂತಹ ಸಮಯದಲ್ಲಿ ಯಾರಿಗೂ ತಿಳಿಸಬೇಕಾದ ಅವಶ್ಯಕತೆ ಇಲ್ಲ ಎಂದು ಖಾರವಾಗಿ ಉತ್ತರಿಸಿದರು. ವಾತವರಣ ಬಿಸಿಯಾಗುತ್ತಿದ್ದಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುಳ ಮಧ್ಯಪ್ರವೇಶಿಸಿ ಸಮಾಧಾನಪಡಿಸಿದರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುಳಾ, ಆಯುಕ್ತ ಶಾಮಲ ಇಕ್ಬಾಲ್, ಉಪ ನಿರ್ದೇಶಕ ನಾಗರಾಜ್ ಕೆಳಮನೆ, ವ್ಯವಸ್ಥಾಪಕ ಶಿವಣ್ಣ, ತಹಶೀಲ್ದಾರ್ ಮಂಜುನಾಥ, ಶಿರಸ್ತೇದಾರ್ ಶೈಲೇಶ್ ಬಾಬು, ಮಂಜುಳಾ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು