ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡದ ಅಸ್ಮಿತೆಗೆ ಧಕ್ಕೆಯಾಗಿಲ್ಲ’

Last Updated 27 ಜನವರಿ 2021, 15:00 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯು ತಮಿಳು, ತೆಲುಗು ಭಾಷೆಯ ಮಿಶ್ರಣದಿಂದ ಕೂಡಿದ್ದರೂ ಕನ್ನಡದ ಅಸ್ಮಿತೆಗೆ ಧಕ್ಕೆಯಾಗಿಲ್ಲ’ ಎಂದು ಸಾಹಿತಿ ಕೆ.ವೈ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ‘ಪರಿಸರ ನಾಡು–ನುಡಿ ಹೋರಾಟ’ ಕುರಿತ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಕೋಲಾರ ಜಿಲ್ಲೆಯು ದೇಶದ ಸಂವಿಧಾನದಲ್ಲಿ ಉಲ್ಲೇಖಿಸಿರುವ ಭ್ರಾತೃತ್ವದ ಭಾವನಾತ್ಮಕ ಸಂಬಂಧವನ್ನು ಜತೆಯಲ್ಲಿ ಬೆಸೆದುಕೊಂಡು ಹೋಗುತ್ತಿದೆ’ ಎಂದರು.

‘ಜಿಲ್ಲೆಯ ಕೂಡಿಕೊಳ್ಳುವಿಕೆ, ಭಾಷೆ ಬೆಳೆದು ಬಂದ ಚರಿತ್ರೆ, ಸಾಂಸ್ಕೃತಿಕ ಕಲೆಯ ಆಯಾಮ ಶೋಧಿಸುವುದು ನಮ್ಮೆಲ್ಲರ ಜವಾಬ್ದಾರಿ. ಗಡಿ ಜಿಲ್ಲೆಯ ಸಾಂಸ್ಕೃತಿಕ ಸ್ವರೂಪ ಇನ್ನೂ ಅರ್ಥವಾಗಿಲ್ಲ. ಶೋಧಿಸಿದರೆ ಮಾತ್ರ ಜಿಲ್ಲೆಯಲ್ಲಿ ಅಪಾರ ಇತಿಹಾಸ ಸಿಗುತ್ತದೆ. ವರ್ತಮಾನದ ಪ್ರಶ್ನೆಗೆ ಪೂರ್ವಿಕರ ಚರಿತ್ರೆಯನ್ನು ಭವಿಷ್ಯಕ್ಕೆ ತೋರಿಸಬೇಕು. ಸಾಂಸ್ಕೃತಿಕ ಮಾತೃ ಪರಂಪರೆ ಗುರುತಿಸುವ ಕೆಲಸವಾಗಬೇಕು’ ಎಂದು ತಿಳಿಸಿದರು.

‘ಕೋಲಾರ ಜಿಲ್ಲೆಯ ದಲಿತ ಹೋರಾಟಗಳು’ ವಿಚಾರ ಕುರಿತು ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಮೈಸೂರು ಜಿಲ್ಲಾ ಜಂಟಿ ನಿರ್ದೇಶಕ ಎನ್,ಮುನಿರಾಜು, ‘ದಲಿತರ ಹೆಸರಿನಲ್ಲಿ ಅನೇಕ ಸಂಘಟನೆಗಳು ದಿಢೀರನೆ ಹುಟ್ಟಿಕೊಂಡಿವೆ. ಸಂಘಟನೆಗಳ ಮೇಲಾಟದಲ್ಲಿ ಜೀವವನ್ನೇ ಚಳವಳಿಗಾಗಿ ಮುಡುಪ್ಪಿಟ್ಟವರಿಗೆ ಕನಿಷ್ಠ ಗೌರವ ಇಲ್ಲಾದಂತಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಅಸ್ಪೃಶ್ಯರು ಹಾಗೂ ಶೋಷಿತ ವರ್ಗಗಳನ್ನು ಕಾಪಾಡುವ ನಿಟ್ಟಿನಲ್ಲಿ ನಡೆಯುತ್ತಿದ್ದ ದಲಿತ ಹೋರಾಟಗಳನ್ನು, ಮತ್ತು ಅಸ್ಪೃಶ್ಯೇತರ ದಲಿತ ಹೋರಾಟವನ್ನು ವಿನಾಶಕ್ಕೆ ಕೊಂಡೂಯ್ಯುತ್ತಿದ್ದಾರೆ. ಪ್ರಸ್ತುತ ಸ್ವಾರ್ಥದ ಪರಂಪರೆಯ ದಲಿತ ಚಳವಳಿ ಹುಟ್ಟಿಕೊಳ್ಳುವ ರೀತಿ ಮುಂದಿನ ಪೀಳಿಗೆಗೆ ಭಯ ಹುಟ್ಟಿಸುವಂತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ವೀರಾವೇಶ ಮರುಕಳಿಸಲಿ: ‘ಜಿಲ್ಲೆಯಲ್ಲಿ 70ರ ದಶಕದಲ್ಲಿ ಹುಟ್ಟಿಕೊಂಡ ದಲಿತ ಸಂಘಟನೆಗಳು ಸಹಸ್ರಾರು ಶೋಷಿತರಿಗೆ ಬದುಕು ಕಟ್ಟಿಕೊಟ್ಟಿವೆ. ಆದರೆ, ಸ್ವಾರ್ಥ, ರಾಜಕೀಯ ಏಳಿಗೆ, ಎಡ–ಬಲ ಉಪಜಾತಿಗಳ ಅವಿವೇಕದ ನಡವಳಿಕೆಯಿಂದ ಇಂದಿನ ಹೋರಾಟಗಳ ರೂಪುರೇಷೆಗಳೇ ಸಾಯುತ್ತಿವೆ. ಹಿಂದಿನ ಹೋರಾಟದ ತಾಕತ್ತು, ಕಾವು, ಗುಡುಗು, ವೀರಾವೇಶ ಮರುಕಳಿಸಬೇಕು’ ಎಂದರು.

‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಈ ಹಿಂದೆ ನೀರು ಹೇರಳವಾಗಿ ಸಿಗುತ್ತಿತ್ತು. ಜಿಲ್ಲೆಯನ್ನು ಕಾಪಾಡುವವರಿಗೆ ಈಗ ಇಚ್ಛಾಶಕ್ತಿ ಇಲ್ಲದ ಕಾರಣ ಬರಡಾಗಿದೆ. ಲಭ್ಯ ನೀರನ್ನು ಉಳಿಸುವ ಪ್ರಯತ್ನ ನಡೆಯುತ್ತಿಲ್ಲ. ಪುಟ್ಟ ದೇಶ ಇಸ್ರೇಲ್‌ನ ರೀತಿ ನೀರು ಉಳಿಸುವ ಕೆಲಸವಾಗಬೇಕು. ಕೃಷಿ ನಡೆದಷ್ಟೂ ದೇಶವು ವಿಶ್ವದಲ್ಲೇ ಮಾದರಿಯಾಗುತ್ತದೆ’ ಎಂದು ಭೂ ವಿಜ್ಞಾನಿ ಎಂ.ವೆಂಕಟಸ್ವಾಮಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT