ಗುರುವಾರ , ಡಿಸೆಂಬರ್ 5, 2019
20 °C

ಮಕ್ಕಳಲ್ಲಿ ಕನ್ನಡ ಕಲಿಕಾಸಕ್ತಿ ಕ್ಷೀಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಗ್ರಾಮೀಣ ಭಾಗದಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಲ್ಲಿ ನಾಡು ನುಡಿಯ ಜಾಗೃತಿ ಮೂಡಿಸಬೇಕು’ ಎಂದು ನಾರಾಯಣಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಎಸ್.ಅನೀಫ್ ಸಾಬ್ ಕಿವಿಮಾತು ಹೇಳಿದರು.

ಭುವನೇಶ್ವರಿ ಕನ್ನಡ ಯುವಕರ ಸಂಘವು ತಾಲ್ಲೂಕಿನ ಗಂಗಾಪುರ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸದಲ್ಲಿ ಮಾತನಾಡಿ, ‘ಇಂಗ್ಲಿಷ್ ವ್ಯಾಮೋಹದಿಂದಾಗಿ ಮಕ್ಕಳಲ್ಲಿ ಕನ್ನಡ ಕಲಿಕಾಸಕ್ತಿ ಕಡಿಮೆಯಾಗುತ್ತಿದೆ. ಪೋಷಕರು ಮಕ್ಕಳಿಗೆ ಮೊದಲು ಮಾತೃಭಾಷೆ ಕಲಿಸಲು ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.

‘ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವರು ಐಟಿ, ಬಿಟಿ ಕಂಪನಿಗಳಲ್ಲಿ ಸಿಗುವ ತಾತ್ಕಾಲಿಕ ಕೆಲಸಗಳಿಗೆ ಸೇರುತ್ತಿದ್ದಾರೆ. ಸರ್ಕಾರಿ ಇಲಾಖೆಗಳಲ್ಲಿ ಸಾಕಷ್ಟು ಹುದ್ದೆ ಖಾಲಿಯಿವೆ’ ಎಂದು ಹೇಳಿದರು.

‘ಕನ್ನಡ ಕಲಿಯುವುದರಿಂದ ಮಾತ್ರ ಭಾಷೆ, ಗಡಿ, ಜಲ, ನಾಡು ರಕ್ಷಣೆ ಸಾಧ್ಯ. ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ ನೀಡಲು ಸರ್ಕಾರ ಸುತ್ತೋಲೆ ಹೊರಡಿಸಬೇಕು. ಪೋಷಕರಲ್ಲಿ ಇಂಗ್ಲಿಷ್‌ ವ್ಯಾಮೋಹ ಹೆಚ್ಚಿದೆ. ಇದರಿಂದ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ತಾಲ್ಲೂಕಿನ ನರಸಾಪುರ ಮತ್ತು ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಸಾಕಷ್ಟು ಕೈಗಾರಿಕೆಗಳು ಸ್ಥಾಪನೆಯಾಗಿವೆ. ಆದರೆ, ಈ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಕೈಗಾರಿಕೆಗಳಿಗೆ ಕೃಷಿ ಜಮೀನು ಕೊಟ್ಟ ರೈತರ ಕುಟುಂಬ ಸದಸ್ಯರಿಗೂ ಉದ್ಯೋಗ ನೀಡುತ್ತಿಲ್ಲ. ಕೈಗಾರಿಕೆಗಳು ಹೊರ ರಾಜ್ಯಗಳ ಅಭ್ಯರ್ಥಿಗಳನ್ನು ಕೆಲಸಕ್ಕೆ ನೇಮಿಸಿಕೊಂಡು ಸ್ಥಳೀಯರಿಗೆ ಅನ್ಯಾಯ ಮಾಡುತ್ತಿವೆ’ ಎಂದು ದೂರಿದರು.

ವೈದ್ಯ ಕೃಷ್ಣಮೂರ್ತಿ, ಸಾಹಿತಿ ಶರಣಪ್ಪ ಗಬ್ಬೂರು, ಭುವನೇಶ್ವರಿ ಯುವಕರ ಸಂಘದ ಅಧ್ಯಕ್ಷ ಎಂ.ನಾಗರಾಜ್, ಉಪಾಧ್ಯಕ್ಷ ಎಂ.ನಾಗೇಶ್, ಕಾರ್ಯದರ್ಶಿ ಮೋಹಿತ್, ಗೌರವಾಧ್ಯಕ್ಷ ಎನ್.ಮುನಿಯಪ್ಪ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)