ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಆರು ಕ್ಷೇತ್ರಗಳಲ್ಲಿ ಸಿಪಿಐ ಸ್ಪರ್ಧೆ

ಬಿಜೆಪಿ ಸೋಲಿಸಲು ಸಮಾನಮನಸ್ಕ ಪಕ್ಷದ ಮೈತ್ರಿಗೆ ಸಿದ್ಧ
Last Updated 23 ಜನವರಿ 2023, 4:24 IST
ಅಕ್ಷರ ಗಾತ್ರ

ಕೆಜಿಎಫ್‌: ಸಿಪಿಐ ಪಕ್ಷವು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೆಜಿಎಫ್ ಸೇರಿದಂತೆ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಸಾಥಿ ಸುಂದರೇಶನ್‌ ಹೇಳಿದರು.

ರಾಬರ್ಟಸನ್‌ಪೇಟೆಯಲ್ಲಿ ಭಾನುವಾರ ಜಿಲ್ಲಾ ಪದಾಧಿಕಾರಿಗಳ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆಜಿಎಫ್‌, ಮೂಡಿಗೆರೆ, ಕೂಡ್ಲಿಗಿ, ಆಳಂದ, ಜೀವರ್ಗಿ ಮತ್ತು ಸಿರಾ ಕ್ಷೇತ್ರಗಳಲ್ಲಿ ಸಿಪಿಐ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಕೆಜಿಎಫ್‌ ಕ್ಷೇತ್ರದಿಂದ ಜಿಲ್ಲಾ ಕಾರ್ಯದರ್ಶಿ ಜ್ಯೋತಿಬಸು ಅಭ್ಯರ್ಥಿಯಾಗಲಿದ್ದಾರೆ. ಅವರ ಹೆಸರನ್ನು ರಾಜ್ಯ ಮಂಡಳಿ ಚರ್ಚೆಯ ನಂತರ ಪ್ರಕಟಿಸಲಾಗುವುದು ಎಂದು
ತಿಳಿಸಿದರು.

‘ಬಿಜೆಪಿಯನ್ನು ಸೋಲಿಸುವುದು ಪಕ್ಷದ ಪ್ರಮುಖ ಗುರಿಯಾಗಿದೆ. ಅದಕ್ಕಾಗಿ ಸಮಾನಮನಸ್ಕ ಮತ್ತು ಜಾತ್ಯತೀತ ಮನೋಭಾವದ ಪಕ್ಷಗಳ ಜೊತೆ ಕೈಜೋಡಿಸಲು ಸಿಪಿಐ ಸಿದ್ಧವಾಗಿದೆ. ಇತರ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಸ್ಪರ್ಧೆ ಮಾಡಿದರೆ 6 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ. ಇಲ್ಲವಾದಲ್ಲಿ 20 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಇಳಿಯುತ್ತೇವೆ’ ಎಂದು ತಿಳಿಸಿದರು.

‘ದೇಶದಲ್ಲಿ 14 ಶ್ರೀಮಂತರ ಆಸ್ತಿ ಒಂದೇ ಸಮನೆ ಏರುತ್ತಿದೆ. ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯಿಂದಾಗಿ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಕಾರ್ಪೋರೇಟ್ ಪಾಲಾಗುತ್ತಿದೆ. ಬಿಜೆಪಿ ತನ್ನ ತಪ್ಪು ಮುಚ್ಚಿಕೊಳ್ಳಲು ಜನರನ್ನು ಭಾವನಾತ್ಮಕವಾಗಿ ಬೇರೆಡೆಗೆ ಸೆಳೆಯಲು ನೋಡುತ್ತಿದೆ. ಇಲ್ಲವೇ ಜನ ಪರಸ್ಪರ ಜಗಳವಾಡುತ್ತಿರಬೇಕು ಎಂದು ಬಯಸುತ್ತಿದೆ. ಈಗ ಪ್ರತಿ ಜಿಲ್ಲೆಯಲ್ಲಿ ನಡೆಯುತ್ತಿರುವ ಉತ್ಸವ ಕೂಡ ಜನರ ಗಮನವನ್ನು ಬೇರೆಡೆ ಸೆಳೆಯಲು ಮಾಡುತ್ತಿರುವ ಪ್ರಯತ್ನ’
ಎಂದರು.

‘ರಾಜ್ಯದಲ್ಲಿ 17 ಲಕ್ಷ ಎಕರೆ ಗೋಮಾಳ ಜಮೀನನ್ನು ಮಠ, ಟ್ರಸ್ಟ್‌ ಮತ್ತು ಪ್ರಭಾವಿ ವ್ಯಕ್ತಿಗಳಿಗೆ ಪರಭಾರೆ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದು ಶ್ರೀಮಂತರ ಪರವಾದ ತೀರ್ಮಾನವಾಗಿದೆ’ ಎಂದು ಸಾಥಿ ಸುಂದರೇಶನ್‌ ಆರೋಪಿಸಿದರು.

ರಾಜ್ಯದಲ್ಲಿ ಕನಿಷ್ಠ 5 ಲಕ್ಷ ಎಕರೆ ಗೋಮಾಳ ಜಮೀನನ್ನು ಬಡವರ ಮನೆಗಳ ನಿರ್ಮಾಣಕ್ಕೆ ಮೀಸಲು ಇಡಬೇಕು. ವಸತಿ ಯೋಜನೆಯಲ್ಲಿ ನೀಡುವ ಅನುದಾನವನ್ನು ₹1.50 ಲಕ್ಷದಿಂದ ₹5 ಲಕ್ಷಕ್ಕೆ ಏರಿಸಬೇಕು ಎಂದು ಅವರು ಒತ್ತಾಯಿಸಿದರು.

ಪದಾಧಿಕಾರಿಗಳಾದ ಶಿವಕುಮಾರ್‌, ರಂಜಿತ್‌, ಮುರಳಿ, ರಣದೇವ್‌, ಸಿ.ಮಣಿವಣ್ಣನ್‌, ಸಿಲಂಬರಸನ್‌, ಪುಷ್ಪರಾಜ್‌ ಮತ್ತು ಮುರಳೀಧರನ್ ಇದ್ದರು.

ಕಾಂಗ್ರೆಸ್‌ನೊಂದಿಗೆ ಹೊಂದಣಿಕೆ?

ಬಿಜೆಪಿ ವಿರೋಧಿ ಮತಗಳು ಹಂಚಿ ಪುನಃ ಬಿಜೆಪಿಗೆ ಅನುಕೂಲವಾಗಬಾರದು ಎನ್ನುವ ದೃಷ್ಟಿಯಿಂದ ಹೊಂದಾಣಿಕೆಗೆ ಸಮ್ಮತಿ ನೀಡಲಾಗಿದೆ. ಬಾಗೇಪಲ್ಲಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಸಿಪಿಎಂ ಪಕ್ಷಕ್ಕೆ ಪಕ್ಷವು ಬೆಂಬಲ ನೀಡುತ್ತದೆ. ರಾಜ್ಯದ ಪ್ರತಿ ಕ್ಷೇತ್ರಗಳಲ್ಲಿಯೂ ಕನಿಷ್ಠ 2 ರಿಂದ 5 ಸಾವಿರ ಸಿಪಿಐ ಬೆಂಬಲಿಗರು ಇದ್ದಾರೆ. ಅವರ ಮತಗಳು ಚುನಾವಣೆ ಫಲಿತಾಂಶದ ಮೇಲೆ ಪರಿಣಾಮಬೀರಬಲ್ಲದು. ಈ ಹಿನ್ನೆಲೆಯಲ್ಲಿ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೊಂದಾಣಿಕೆ ಕುರಿತು ಪತ್ರ ಬರೆಯಲಾಗಿದೆ. ಇನ್ನೂ ಅವರಿಂದ ಉತ್ತರ ಬಂದಿಲ್ಲ’ ಎಂದು ಸುಂದರೇಶನ್‌ ಹೇಳಿದರು.

ಸಂಸದರ ಹೇಳಿಕೆ ಅವೈಜ್ಞಾನಿಕ

ಬಿಜಿಎಂಎಲ್‌ ಪುನರಾರಂಭ ಮಾಡಿ ಓಪನ್‌ ಕಾಸ್ಟ್‌ ಗಣಿಗಾರಿಕೆ ಮಾಡಲಾಗುವುದು ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿರುವುದು ಅವೈಜ್ಞಾನಿಕ. ಓಪನ್‌ ಕಾಸ್ಟ್‌ ಗಣಿಗಾರಿಕೆ ಮಾಡಿದರೆ ಊರೇ ನಾಶವಾಗುತ್ತದೆ. ಸಂಸದರು ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಜಿಲ್ಲೆಯೊಳಗೆ ಕಾಲಿಡಲು ಸಿಪಿಐ ಪಕ್ಷವು ಬಿಡುವುದಿಲ್ಲ ಎಂದು ಜಿಲ್ಲಾ ಕಾರ್ಯದರ್ಶಿ ಜ್ಯೋತಿಬಸು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT