ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಸಿ ವ್ಯಾಲಿ ನೀರು ಕಳವು: ಪ್ರಕರಣಕ್ಕೆ ನಿರ್ಧಾರ

ರೈತರಿಗೆ ಎಚ್ಚರಿಕೆ ನೀಡಿ: ಅಧಿಕಾರಿಗಳಿಗೆ ಶಾಸಕ ರಮೇಶ್‌ಕುಮಾರ್‌ ಸೂಚನೆ
Last Updated 22 ಏಪ್ರಿಲ್ 2020, 9:08 IST
ಅಕ್ಷರ ಗಾತ್ರ

ಕೋಲಾರ: ಕೆ.ಸಿ ವ್ಯಾಲಿ ಯೋಜನೆ ನೀರಿನ ಕಳವು ತಡೆ ಸಂಬಂಧ ಇಲ್ಲಿ ಸೋಮವಾರ ನಡೆದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ನೀರು ಕಳವು ಮಾಡುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ನಿರ್ಧರಿಸಲಾಯಿತು.

‘ಕೆ.ಸಿ ವ್ಯಾಲಿ ಯೋಜನೆಯಿಂದ ಜಿಲ್ಲೆಗೆ 280 ಎಂಎಲ್‌ಡಿ ನೀರು ಬರುತ್ತಿದೆ. ಆದರೆ, ಕೆಲ ದಿನಗಳಿಂದ ಯೋಜನೆ ವ್ಯಾಪ್ತಿಯ ಕಾಲುವೆಗಳಲ್ಲಿ ನೀರು ಹರಿಯುವುದು ನಿಂತಿದೆ. ಜನ್ನಘಟ್ಟ ಕೆರೆ ತುಂಬಲು 14 ದಿನ ಸಾಕು. ಆದರೆ, ಈವರೆಗೆ ಜನಘಟ್ಟ ಕೆರೆಗೆ ಒಂದು ತೊಟ್ಟು ನೀರು ಬಂದಿಲ್ಲ. ಹಾಗಾದರೆ ನೀರು ಎಲ್ಲಿಗೆ ಹೋಗುತ್ತಿದೆ?’ ಎಂದು ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಅಧಿಕಾರಿಗಳನ್ನು ಪ್ರಶ್ನಿಸಿದರು.

‘ಕೆಲ ವ್ಯಕ್ತಿಗಳು ಕೆ.ಸಿ ವ್ಯಾಲಿ ಕಾಲುವೆಗಳಿಗೆ ಪೈಪ್‌ ಹಾಕಿ ಪಂಪ್ ಮೋಟರ್‌ ಇಟ್ಟು ನೀರು ಕಳವು ಮಾಡುತ್ತಿದ್ದಾರೆ. ಮತ್ತೆ ಕೆಲವರು ಯೋಜನೆ ನೀರನ್ನು ಮಾರಾಟ ಮಾಡುತ್ತಿದ್ದಾರೆ. ಈ ರೀತಿ ಮಾಡುವವರನ್ನು ರೈತರೆಂದು ಹೇಗೆ ಕರೆಯುವುದು’ ಎಂದು ಕಿಡಿಕಾರಿದರು.

‘ಕೆ.ಸಿ ವ್ಯಾಲಿ ಕಾಲುವೆಯ ಅಕ್ಕಪಕ್ಕ ಕೊಳವೆ ಬಾವಿ ಕೊರೆಯದಂತೆ ರೈತರಿಗೆ ಎಚ್ಚರಿಕೆ ನೀಡಬೇಕು. ನೀರು ಹರಿಯುವ ಕಾಲುವೆ ಅಕ್ಕಪಕ್ಕದ ಕೊಳವೆ ಬಾವಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು. ನೀರು ಕದಿಯುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಐಪಿಸಿ ಅಡಿ ಪ್ರಕರಣ ದಾಖಲಿಸಬೇಕು’ ಎಂದು ಹೇಳಿದರು.

ಅಂತರ್ಜಲ ವೃದ್ಧಿ: ‘ನೀರು ಕಳವು ಮಾಡುವವರ ಕಾಲಿಗೆ ನಮಸ್ಕರಿಸಿ ಕೇಳುತ್ತೇನೆ. ಜಿಲ್ಲೆಯ ಕೆರೆಗಳನ್ನು ತುಂಬಿಸಿ ಅಂತರ್ಜಲ ವೃದ್ಧಿಸುವುದು ಕೆ.ಸಿ ವ್ಯಾಲಿ ಯೋಜನೆಯ ಮೂಲ ಉದ್ದೇಶ. ಕೆರೆಗಳು ತುಂಬಿದ ಮೇಲೆ ನೀರು ಏನಾದರೂ ಮಾಡಿಕೊಳ್ಳಲಿ. ಅದಕ್ಕೆ ಅಡ್ಡಿಪಡಿಸುವುದಿಲ್ಲ. ಆದರೆ, ಕೆರೆಗಳಿಗೆ ನೀರು ಹರಿಯುವ ಮೊದಲೇ ನೀರನ್ನು ಕಳವು ಮಾಡಿ ಕೃಷಿಗೆ ಬಳಸಿಕೊಂಡರೆ ಹೇಗೆ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ನೀರಿನ ಸಮಸ್ಯೆಯಿದೆ. ಕೆರೆಗಳು ಬತ್ತಿ ವರ್ಷಗಳೇ ಆಗಿವೆ. ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಕೆ.ಸಿ ವ್ಯಾಲಿ ಮೂಲಕ ಜಿಲ್ಲೆಗೆ ನೀರು ತರುವುದು ನನ್ನ ಕನಸಾಗಿತ್ತು. ಎತ್ತಿನಹೊಳೆ ಮತ್ತು ಯರಗೋಳ್ ಯೋಜನೆ ನೀರು ತಂದು ಜಿಲ್ಲೆಯನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿ. ರೈತರು ಈ ಹಿಂದೆ ಜಿಲ್ಲೆಯ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ವೃದ್ಧಾಪ್ಯ ವೇತನ: ‘ಅಂಗವಿಕಲರ ಮಾಸಾಶನ ಮತ್ತು ವೃದ್ಧಾಪ್ಯ ವೇತನವನ್ನು ₹ 1 ಸಾವಿರಕ್ಕೆ ಹೆಚ್ಚಿಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿಯವರು ಒಪ್ಪಿದ್ದಾರೆ’ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್‌.ವಿ.ದರ್ಶನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಉಪ ವಿಭಾಗಾಧಿಕಾರಿ ಸೋಮಶೇಖರ್‌ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT