ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯಕರನ ಕೊಲ್ಲಿಸಿದ ಭಗ್ನಪ್ರೇಮಿ: ನಿಗೂಢ ಪ್ರಕರಣ ಭೇದಿಸಿದ ಗಲ್‌ಪೇಟೆ ಪೊಲೀಸರು

ನಿಗೂಢ ಪ್ರಕರಣ ಭೇದಿಸಿದ ಗಲ್‌ಪೇಟೆ ಪೊಲೀಸರು
Last Updated 10 ಜುಲೈ 2021, 3:54 IST
ಅಕ್ಷರ ಗಾತ್ರ

ಕೋಲಾರ: ಭಗ್ನಪ್ರೇಮಿ ವಿವಾಹಿತ ಮಹಿಳೆಯು ಸುಪಾರಿ ಕೊಟ್ಟು ಪ್ರಿಯಕರನನ್ನು ಕೊಲ್ಲಿಸಿದ ನಿಗೂಢ ಪ್ರಕರಣ ಭೇದಿಸಿರುವ ನಗರದ ಗಲ್‌ಪೇಟೆ ಪೊಲೀಸರು ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ನಗರದ ಕುವೆಂಪುನಗರ ನಿವಾಸಿ ಝಾಕಿಯಾ (40) ಹಾಗೂ ಅವರ ಸ್ನೇಹಿತ ಬೀದರ್‌ನ ಇಬ್ರಾಹಿಂ (30) ಬಂಧಿತರು. ಆರೋಪಿಗಳು ಕುವೆಂಪುನಗರದ ಜಬೀರ್‌ (30) ಎಂಬುವರನ್ನು ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಜಬೀರ್‌, ಹೊರ ರಾಜ್ಯಗಳಿಂದ ಹಳೆಯ ಕಾರುಗಳನ್ನು ಖರೀದಿಸಿಕೊಂಡು ಬಂದು ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಬಾಡಿ ಬಿಲ್ಡರ್‌ ಆಗಿದ್ದ ಅವರು ಫ್ರಿಡ್ಜ್‌ ರಿಪೇರಿ ಮಾಡುತ್ತಿದ್ದರು. ಖಾಸಗಿ ಶಾಲೆಯೊಂದರಲ್ಲಿ ಪ್ರಾಂಶುಪಾಲರಾಗಿದ್ದ ಝಾಕಿಯಾ ಮತ್ತು ಜಬೀರ್‌ ಹಲವು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಝಾಕಿಯಾ, ಆರ್ಥಿಕವಾಗಿ ಜಬೀರ್‌ಗೆ ಸಾಕಷ್ಟು ಸಹಾಯ ಮಾಡಿದ್ದರು.

ಪತಿಯನ್ನು ಕೊಲೆ ಮಾಡಿ ಜಬೀರ್‌ ಅವರನ್ನೇ ಮದುವೆಯಾಗಲು ನಿರ್ಧರಿಸಿದ್ದ ಝಾಕಿಯಾ, ಫೇಸ್‌ಬುಕ್‌ ಮೂಲಕ ಇಬ್ರಾಹಿಂನನ್ನು ಪರಿಚಯ ಮಾಡಿಕೊಂಡಿದ್ದರು. ಅಲ್ಲದೇ, ಪತಿಯನ್ನು ಕೊಲ್ಲುವಂತೆ ಇಬ್ರಾಹಿಂಗೆ ₹ 5 ಲಕ್ಷ ಕೊಟ್ಟಿದ್ದರು. ಇಬ್ರಾಹಿಂ ಮತ್ತು ಜಬೀರ್‌ ಸ್ನೇಹಿತರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ನಡುವೆ ಜಬೀರ್, ಝಾಕಿಯಾಗೆ ಗೊತ್ತಾಗದಂತೆ ಕದ್ದುಮುಚ್ಚಿ ಚಿಕ್ಕಬಳ್ಳಾಪುರದ ಯುವತಿಯನ್ನು ಮಾರ್ಚ್‌ನಲ್ಲಿ ಮದುವೆಯಾಗಿದ್ದರು. ಈ ಸಂಗತಿ ತಿಳಿದು ಕೋಪಗೊಂಡ ಝಾಕಿಯಾ, ಪತಿಯ ಬದಲು ಜಬೀರ್ ಅವರನ್ನು ಕೊಲೆ ಮಾಡುವಂತೆ ಇಬ್ರಾಹಿಂಗೆ ಸುಪಾರಿ ಕೊಟ್ಟಿದ್ದರು. ಬಳಿಕ ಇಬ್ರಾಹಿಂ ಜತೆ ಸೇರಿ ಜಬೀರ್ ಕೊಲೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಝಾಕಿಯಾ, ಹೈದರಾಬಾದ್‌ನ ವ್ಯಕ್ತಿಯೊಬ್ಬರು ತನಗೆ ₹ 3 ಲಕ್ಷ ಕೊಡಬೇಕು. ಆ ವ್ಯಕ್ತಿಯಿಂದ ಹಣ ಪಡೆದು ಬಂದರೆ ₹ 2 ಲಕ್ಷ ಕೊಡುತ್ತೇನೆ ಎಂದು ಹೇಳಿ ಜಬೀರ್‌ರನ್ನು ಮೇ 3ರಂದು ಹೈದರಾಬಾದ್‌ಗೆ ಕಳುಹಿಸಿದ್ದರು. ಜಬೀರ್‌ ಹೈದರಾಬಾದ್‌ಗೆ ಹೋಗಿ ಹಣ ಪಡೆದು ವಾಪಸ್‌ ಬರುವಾಗ ಮಾರ್ಗ ಮಧ್ಯೆ ಇಬ್ರಾಹಿಂನನ್ನು ಭೇಟಿಯಾಗಿದ್ದರು. ಪೂರ್ವಯೋಜಿತ ಸಂಚಿನಂತೆ ಇಬ್ರಾಹಿಂ, ಜಬೀರ್‌ರನ್ನು ತನ್ನ ಬೈಕ್‌ನಲ್ಲೇ ಹೋಟೆಲ್‌ಗೆ ಕರೆದೊಯ್ದು ಕಾಫಿಯಲ್ಲಿ 9 ನಿದ್ದೆ ಮಾತ್ರೆ ಹಾಕಿ ಕುಡಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ನಂತರ ಇಬ್ರಾಹಿಂ ಬೀದರ್‌ಗೆ ಹೋಗುವ ಮಾರ್ಗ ಮಧ್ಯೆ ನಿಡುವಂಚಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಬೈಕ್‌ ನಿಲ್ಲಿಸಿ ನಿದ್ದೆಯ ಮಂಪರಿನಲ್ಲಿದ್ದ ಜಬೀರ್‌ರ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿದ್ದ. ನಂತರ ಶಂಕರ್‌ ಮತ್ತು ಇಮ್ರಾನ್‌ ಎಂಬ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿಕೊಂಡು ಅಲ್ಲಿಯೇ ಗುಂಡಿ ತೋಡಿ ಜಬೀರ್‌ರ ಶವ ಹೂತು ಹಾಕಿದ್ದರು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಮೊಬೈಲ್‌ ಕರೆ ಸುಳಿವು: ಜಬೀರ್ ಮನೆಗೆ ವಾಪಸ್‌ ಬಾರದ ಕಾರಣ ಅನುಮಾನಗೊಂಡ ಕುಟುಂಬ ಸದಸ್ಯರು ಗಲ್‌ಪೇಟೆ ಠಾಣೆಗೆ ದೂರು ಕೊಟ್ಟಿದ್ದರು. ಈ ದೂರು ಆಧರಿಸಿ ಪೊಲೀಸರು ಜಬೀರ್‌ರ ಮೊಬೈಲ್‌ಗೆ ಬಂದಿದ್ದ 900ಕ್ಕೂ ಹೆಚ್ಚು ಕರೆಗಳ ಬಗ್ಗೆ ಮಾಹಿತಿ ಕಲೆ ಹಾಕಿದರು.

ಆಗ ಜಬೀರ್‌ರ ಮೊಬೈಲ್‌ಗೆ ಕೊನೆಯ ಬಾರಿಗೆ ಝಾಕಿಯಾ ಕರೆ ಮಾಡಿರುವ ಸಂಗತಿ ಬಯಲಾಯಿತು. ಈ ಸುಳಿವಿನ ಬೆನ್ನತ್ತಿದ್ದ ಪೊಲೀಸರು ಝಾಕಿಯಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಗುಂಡಿಯಲ್ಲಿ ಹೂತಿಟ್ಟಿದ್ದ ಜಬೀರ್‌ರ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣದ ಇತರೆ ಆರೋಪಿಗಳಾದ ಶಂಕರ್‌ ಮತ್ತು ಇಮ್ರಾನ್‌ ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT