ಶುಕ್ರವಾರ, ನವೆಂಬರ್ 22, 2019
26 °C

ಮಕ್ಕಳ ಶಿಕ್ಷಣಕ್ಕೆ ಕೋಚಿಮುಲ್‌ ನೆರವು

Published:
Updated:
Prajavani

ಕೋಲಾರ: ‘ಹಾಲು ಉತ್ಪಾದಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ನೆರವಾಗುವ ನಿಟ್ಟಿನಲ್ಲಿ ಒಕ್ಕೂಟದಿಂದ ವಸತಿನಿಲಯ ಹಾಗೂ ವಿದ್ಯಾರ್ಥಿ ವೇತನ ಸೌಲಭ್ಯ ನೀಡಲಾಗುತ್ತಿದೆ’ ಎಂದು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಹೇಳಿದರು.

ಇಲ್ಲಿ ಬುಧವಾರ ಮೃತ ರಾಸುಗಳ ಮಾಲೀಕರಿಗೆ ಗುಂಪು ವಿಮೆ ಯೋಜನೆಯ ಪರಿಹಾರದ ಚೆಕ್‌ ವಿತರಿಸಿ ಮಾತನಾಡಿ, ‘ಹೈನೋದ್ಯಮವು ಅವಿಭಜಿತ ಕೋಲಾರ ಜಿಲ್ಲೆಯ ಜೀವನಾಡಿ. ಬಹುಪಾಲು ರೈತ ಕುಟುಂಬಗಳು ಜೀವನ ನಿರ್ವಹಣೆಗೆ ಹೈನುಗಾರಿಕೆ ಅವಲಂಬಿಸಿವೆ’ ಎಂದು ತಿಳಿಸಿದರು.

‘ಹೈನೋದ್ಯಮವು ಜಿಲ್ಲೆಯ ರೈತರ ಬೆನ್ನೆಲುಬು. ಗುಣಮಟ್ಟದ ಹಾಲು ಸರಬರಾಜು ಮಾಡಿದರೆ ಮಾತ್ರ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಒಕ್ಕೂಟದಿಂದ ದೊರೆಯುವ ಸೌಕರ್ಯ ಸದ್ಬಳಕೆ ಮಾಡಿಕೊಂಡು ಗುಣಮಟ್ಟದ ಹಾಲು ಸರಬರಾಜು ಮಾಡಿ. ರಾಸುಗಳ ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ’ ಎಂದು ಕಿವಿಮಾತು ಹೇಳಿದರು.

‘ಬೇಸಿಗೆಯಲ್ಲಿ ರಾಸುಗಳಿಗೆ ಮೇವಿನ ಸಮಸ್ಯೆ ಎದುರಾಗದಂತೆ ಈಗಿನಿಂದಲೇ ಮೇವು ಬೆಳೆಯಲು ಆರಂಭಿಸಿ. ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ಇಲ್ಲದಿದ್ದರೆ ಹಾಲಿನ ಉತ್ಪಾದನೆ ಹೆಚ್ಚುತ್ತದೆ. ಒಕ್ಕೂಟಕ್ಕೆ ಹೆಚ್ಚು ಲಾಭ ಬಂದರೆ ಆ ಹಣವನ್ನು ರೈತರ ಉಪಯೋಗಕ್ಕೆ ನೀಡಲಾಗುತ್ತದೆ’ ಎಂದರು.

‘ಹಿಂದಿನ ಜಿಲ್ಲಾಧಿಕಾರಿ ದಿವಂಗತ ಡಿ.ಕೆ.ರವಿ ಅವರು ಒಕ್ಕೂಟಕ್ಕೆ ಜಾಗ ಮಂಜೂರು ಮಾಡಿದ್ದರು. ಆ ಜಾಗದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಸಿ ಒಕ್ಕೂಟಕ್ಕೆ ನೀರು ಪಡೆಯಲಾಗಿದೆ. ಇದರಿಂದ ತಿಂಗಳಿಗೆ ಸುಮಾರು ₹ ೩ ಲಕ್ಷ ಉಳಿಕೆಯಾಗುತ್ತಿದೆ’ ಎಂದು ವಿವರಿಸಿದರು.

ಶಿಬಿರದ ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ ಹಾಜರಿದ್ದರು.

ಪ್ರತಿಕ್ರಿಯಿಸಿ (+)