ಶನಿವಾರ, ನವೆಂಬರ್ 26, 2022
22 °C

ಅಂತರಗಂಗೆ: ಒತ್ತುವರಿ ತೆರವಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಇತಿಹಾಸ ಪ್ರಸಿದ್ಧ ಅಂತರಗಂಗೆ ಬೆಟ್ಟ ಹಾಗೂ ತಪ್ಪಲಲ್ಲಿ ಆಗಿರುವ ಒತ್ತುವರಿ ತೆರವುಗೊಳಿಸಬೇಕು ಎಂದು ಸಂಸದ ಎಸ್‌.ಮುನಿಸ್ವಾಮಿ ಸೂಚಿಸಿದರು.

ಗುರುವಾರ ಇಲ್ಲಿ ಪರಿಶೀಲನೆ ಸಭೆ ಹಾಗೂ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಮನೆ ಕಟ್ಟಿಕೊಳ್ಳಲು ಬಡವರಿಗೆ ಬಿಡುತ್ತಿಲ್ಲ. ಆದರೆ, ಹೊರ ರಾಜ್ಯಗಳಿಂದ ಬಂದು ಒಂದು ಸಮುದಾಯದವರು ಅಕ್ರಮವಾಗಿ ಕಟ್ಟಡ ನಿರ್ಮಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಅರ್ಜಿ ನೀಡಿದ್ದಾರೆ’ ಎಂದರು.

‘ಕಂದಾಯ ಇಲಾಖೆ ಅಧಿಕಾರಿಗಳು ಈಗಾಗಲೇ ಹೋಗಿ ಪರಿಶೀಲಿಸಿದ್ದು, ಶೇ 70ರಷ್ಟು ಅಕ್ರಮ ಕಟ್ಟಡಗಳಿವೆ ಎಂಬುದಾಗಿ ಹೇಳಿದ್ದಾರೆ. ಹೀಗಾಗಿ, ಕ್ರಮಕ್ಕೆ ಜಿಲ್ಲಾಧಿಕಾರಿ, ಪೊಲೀಸ್‌ ಇಲಾಖೆಯವರಿಗೆ ಸೂಚನೆ ನೀಡಿದ್ದೇನೆ’ ಎಂದು ಹೇಳಿದರು.

‘ನ.27ರಂದು ಜೆಸಿಬಿ ತೆಗೆದುಕೊಂಡು ಹೋಗಿ ಬೆಟ್ಟದ ತಪ್ಪಲು ಹಾಗೂ ಅಂತರಗಂಗೆ ರಸ್ತೆಯ ಅಕ್ಕಪಕ್ಕ ನಡೆದಿರುವ ಜಮೀನು ಒತ್ತುವರಿ ತೆರವುಗೊಳಿಸಿ’ ಎಂದರು.

‘ಬೆಟ್ಟದಲ್ಲಿ ಯೋಗ ದಿನಾಚರಣೆ ನಡೆಸಿದ 40 ಎಕರೆ ಸ್ಥಳ ಸರ್ಕಾರದ್ದು. ತನಿಖೆ ನಡೆಸಿದಾಗ ಯಾರೋ ಅಕ್ರಮ ದಾಖಲೆ ಹೊಂದಿದ್ದರು ಎಂಬುದು ಗೊತ್ತಾಗಿದೆ’ ಎಂದು ತಿಳಿಸಿದರು.

‘ಅಂತರಗಂಗೆಯು ರಾಜ್ಯದ ಅತಿಮುಖ್ಯ ಪ್ರವಾಸಿ ತಾಣ. ಪ್ರವಾಸಿ ತಾಣದ ಅಭಿವೃದ್ದಿಗೆ ಕ್ರಮವಹಿಸಬೇಕು. ಇಂತಹ ಪುಣ್ಯಕ್ಷೇತ್ರದಲ್ಲಿ ಒತ್ತುವರಿ ನೋಡಿಕೊಂಡು ಸುಮ್ಮನಿದ್ದಿರಲ್ಲ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಭೆಗೆ ತಹಶೀಲ್ದಾರ್ ಹಾಜರಾಗದ ಕುರಿತು ಆಕ್ರೋಶ ವ್ಯಕ್ತಪಡಿಸಿ, ‘ಸಭೆಗಳ ಮಹತ್ವ ಅರಿತು ಹಾಜರಿರಬೇಕು. ಯಾವಾಗ ಕೇಳಿದರೂ ನ್ಯಾಯಾಲಯ, ಪೊಲೀಸ್‌ ಠಾಣೆ ಎನ್ನುತ್ತಾರೆ. ಅಲ್ಲೇ ಮನೆ ಮಾಡಿಕೊಂಡು ಇರಲು ಹೇಳಿ’ ಎಂದು ಹರಿಹಾಯ್ದರು.

‘ಸಂಗೊಂಡಹಳ್ಳಿಯ ಗಣೇಶ ದೇಗುಲದ ಸಮಸ್ಯೆಯನ್ನೂ ಬಗೆಹರಿಸಲಾಗುವುದು. ಅನಧಿಕೃತವಾಗಿ ಬಡಾವಣೆ ಮಾಡಿ ರಸ್ತೆ ಬೇಕೆಂದು ಕೇಳುತ್ತಿರುವುದಕ್ಕೆ ಅವಕಾಶ ನೀಡಲ್ಲ. ಈ ಬಗ್ಗೆ ಕ್ರಮ ವಹಿಸಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.