ಶನಿವಾರ, ಸೆಪ್ಟೆಂಬರ್ 24, 2022
24 °C

ಈ ಸಣ್ಣ ಹೊಟ್ಟೆಗಾಗಿ ಏಕಿಷ್ಟು ಭ್ರಷ್ಟಾಚಾರ: ಜಿಲ್ಲಾ ನ್ಯಾಯಾಧೀಶ ಕೆ.ಆರ್‌.ನಾಗರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ವಿದ್ಯಾವಂತರು, ಅಕ್ಷರಸ್ಥರೇ ಈಚೆಗೆ ಸಮಾಜ ಘಾತುಕ, ಸಮಾಜ ವಿರೋಧಿ ಚಟುವಟಿಕೆ ನಡೆಸುತ್ತಿದ್ದು ಭ್ರಷ್ಟಾಚಾರ, ಮೋಸ, ಕಪಟ, ಲಂಚಗುಳಿತನ, ಅಕ್ರಮ ಸಂಪಾದನೆಯಲ್ಲಿ ತೊಡಗಿದ್ದಾರೆ’ ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶ ಕೆ.ಆರ್‌.ನಾಗರಾಜ್‌ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರ, ಜಿಲ್ಲಾಡಳಿತ, ಕರ್ನಾಟಕ ಲೋಕಾಯುಕ್ತ, ಜಿಲ್ಲಾ ಪೊಲೀಸ್‌ ಆಶ್ರಯದಲ್ಲಿ ಗುರುವಾರ ಇಲ್ಲಿ ಆಯೋಜಿಸಿದ್ದ ‘ಕರ್ನಾಟಕ ಲೋಕಾಯುಕ್ತ ಕಾಯ್ದೆ–1984’ರ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮನುಷ್ಯ ಬದುಕುವ ಒಂದೆರಡು ದಿನಗಳಿಗಾಗಿ, ಈ ಸಣ್ಣ ಹೊಟ್ಟೆಗಾಗಿ ಏಕಿಷ್ಟು ಭ್ರಷ್ಟಾಚಾರ ನಡೆಸಬೇಕು? ಜೀವನವಿಡೀ ಭ್ರಷ್ಟತೆ, ಅಕ್ರಮದಲ್ಲಿ ತೊಡಗಿರಬೇಕೇ? ಬದುಕಿಗೆ ಇವೆಲ್ಲಾ ಅವಶ್ಯವೇ’ ಎಂದು ಪ್ರಶ್ನಿಸಿದರು.

‘ಕೋವಿಡ್‌ನಿಂದ ಎಲ್ಲರೂ ಎಷ್ಟು ಕಷ್ಟ ಅನುಭವಿಸಿದೆವು ಎಂಬುದು ಗೊತ್ತೇ ಇದೆ. ಅದು ದೊಡ್ಡ ಪಾಠ ಕಲಿಸಿ ಹೋಗಿದೆ. ಸಂಬಂಧಿಕರು, ಪರಿಚಿತರನ್ನೇ ಕಳೆದುಕೊಂಡೆವು. ಭಯದಲ್ಲೇ ದಿನ ಕಳೆದವು. ಬದುಕುಳಿದವರೇ ಪುಣ್ಯವಂತರು’ ಎಂದರು.

ಹೋಟೆಲ್‌ನಲ್ಲಿ ಸಪ್ಲೈರ್‌ ಆಗಿದ್ದೆ…

‘ದನ ಕಾಯುತ್ತಿದ್ದವನ ಮಗನಾದ ನಾನು ಹೋಟೆಲ್‌ನಲ್ಲಿ ಸಪ್ಲೈರ್ ಆಗಿದ್ದೆ. ಬಾರ್‌ನಲ್ಲಿ ಕೆಲಸ ಮಾಡಿ ಓದಿ ವಿದ್ಯಾವಂತನಾಗಿದ್ದೇನೆ. ಈಗ ಕೋಲಾರ ಜಿಲ್ಲೆಯಲ್ಲಿ ಹೆಚ್ಚು ವೇತನ ಪಡೆಯುತ್ತಿರುವವನೂ ನಾನೇ’ ಎಂದು ಜಿಲ್ಲಾ ನ್ಯಾಯಾಧೀಶ ಕೆ.ಆರ್‌.ನಾಗರಾಜ್‌ ಹೇಳಿದಾಗ ಸಭಾಂಗಣದಲ್ಲಿ ಕರತಾಡನ ಮೊಳಗಿತು.

‘ಈ ಹಾದಿಯಲ್ಲಿ ನಾನು ಬದುಕಲಿಲ್ಲವೇ? ಅದಕ್ಕಾಗಿ ಅಕ್ರಮ ಸಂಪಾದನೆ ಮಾಡಬೇಕಿತ್ತೇ? ಅದು ಸಾಧ್ಯವಾಗದೆ ನಾನು ಬೆಂಗಳೂರಿನಲ್ಲಿ ಮನೆ ಕಟ್ಟಿದ್ದೇನೆ. ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿದ್ದೇನೆ. ನ್ಯಾಯಯುತ ದುಡಿಮೆಯಿಂದ ಸಾಧಿಸಿ ತೋರಿಸಬಹುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು