ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌: ಕೆರೆಗಳಿಂದ ಅಕ್ರಮವಾಗಿ ಮಣ್ಣು ತೆಗೆತ

ಕಾನೂನುಬಾಹಿರ ಚಟುವಟಿಕೆ ತಡೆಯುವಲ್ಲಿ ಜಿಲ್ಲಾಡಳಿತ ವಿಫಲ ಆರೋಪ
Published 21 ಫೆಬ್ರುವರಿ 2024, 14:23 IST
Last Updated 21 ಫೆಬ್ರುವರಿ 2024, 14:23 IST
ಅಕ್ಷರ ಗಾತ್ರ

ಕೆಜಿಎಫ್‌: ಪ್ರಸ್ತುತ ಕಾಮಗಾರಿ ನಡೆಯುತ್ತಿರುವ ಬೆಂಗಳೂರು–ಚೆನ್ನೈ ಕಾರಿಡಾರ್‌ ರಸ್ತೆಗಾಗಿ ಕೆರೆಗಳಿಂದ ಅಕ್ರಮವಾಗಿ ಮಣ್ಣು ತೆಗೆಯಲಾಗುತ್ತಿದೆ. ಈ ಅಕ್ರಮಗಳನ್ನು ತಡೆಯಲು ವಿಫಲವಾಗಿರುವ ಜಿಲ್ಲಾಡಳಿತದ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದು ರೈತ ಸಂಘದ (ಪುಟ್ಟಣ್ಣಯ್ಯ ಬಣ) ಜಿಲ್ಲಾ ಕಾರ್ಯಾಧ್ಯಕ್ಷ ಹರಿಕುಮಾರ್ ತಿಳಿಸಿದ್ದಾರೆ. 

ಅಲ್ಲದೆ, ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲು ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. 

ಜಿಲ್ಲಾಡಳಿತವು ಕಾರಿಡಾರ್ ರಸ್ತೆಗಾಗಿ ಮಣ್ಣು ತೆಗೆಯಲು ಕೆಲ ಆಯ್ದ ಕೆರೆಗಳನ್ನು ನಿಗದಿ ಮಾಡಿಕೊಂಡಿದೆ. ಎಷ್ಟು ಪ್ರಮಾಣದ ಮಣ್ಣು ತೆಗೆಯಬೇಕು ಎಂದು ಕೂಡ ನಿಖರವಾಗಿ ತಿಳಿಸಿತ್ತು. ಆದರೆ ತಾಲ್ಲೂಕಿನ 18ಕ್ಕೂ ಹೆಚ್ಚಿನ ಕೆರೆಗಳಲ್ಲಿ ಅಕ್ರಮವಾಗಿ ಮಣ್ಣು ತೆಗೆಯಲಾಗಿದ್ದು, ಇದು ಪರಿಸರ ನಾಶಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. 

ಕೆಜಿಎಫ್ ತಾಲ್ಲೂಕಿನ ವಡ್ರಹಳ್ಳಿ, ಗೆನ್ನೇರಹಳ್ಳಿ, ಬೆಟ್ಕೂರು ಕೆರೆಗಳಿಗೆ ಬುಧವಾರ ರೈತ ಸಂಘದ ಮುಖಂಡರೊಂದಿಗೆ ಭೇಟಿ ನೀಡಿ ಮಾತನಾಡಿದ ಅವರು, ‘ಕೆರೆಗಳಲ್ಲಿ ಕಾನೂನು ಬಾಹಿರವಾಗಿ ಮಣ್ಣು ತೆಗೆದಿರುವ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಚೆನ್ನೈ ಕಾರಿಡಾರ್‌ ರಸ್ತೆಯ ಗುತ್ತಿಗೆದಾರರು ಹಗಲು–ರಾತ್ರಿ ಎನ್ನದೆ ಕೋಟ್ಯಂತರ ರೂಪಾಯಿ ಮೌಲ್ಯದ ಸುಮಾರು 40-50 ಅಡಿ ಆಳದವರೆಗೂ ಕೆರೆಯ ಮಣ್ಣು ತೆಗೆದಿದ್ದಾರೆ. ಇದು ಮುಂದಿನ ದಿನಗಳಲ್ಲಿ ಪರಿಸರದ ಮೇಲೆ ದೊಡ್ಡ ಪರಿಣಾಮ ಬೀರಲಿದೆ’ ಎಂದು ಎಚ್ಚರಿಕೆ ನೀಡಿದರು. 

ಕೆರೆಗಳು ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿವೆ. ಆದರೆ, ಹೆದ್ದಾರಿ ಕಾಮಗಾರಿಗೆ ಬೇಕಾಗುವಷ್ಟು ಮಣ್ಣನ್ನು ಅವೈಜ್ಞಾನಿಕವಾಗಿ ಕೆರೆಗಳಿಂದ ತೆಗೆಯಲಾಗುತ್ತಿದೆ. ಹೆಚ್ಚಿನ ಆಳದವರೆಗೂ ಮಣ್ಣು ತೆಗೆದಿರುವುದರಿಂದ ಮೂಕ ಪ್ರಾಣಿಗಳು ಹಾಗೂ ಜಾನುವಾರು ಕೆರೆಗಳಲ್ಲಿ ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ನೀರು ಕುಡಿಯಲು ಕೆರೆಗೆ ಇಳಿದರೆ, ಪ್ರಾಣಿಗಳು ಸಾವಿಗೆ ಸಿಲುಕುವ ಸಾಧ್ಯತೆ ಇದೆ. ಮಕ್ಕಳು, ಯುವಕರು ಯಾರಾದರೂ ಕೆರೆಪಾಲಾದ್ರೆ ಅವರ ಶವವನ್ನು ಹುಡುಕಲು ಕಷ್ಟವಾಗುತ್ತದೆ ಎಂದರು. 

ಕಾಮಗಾರಿಗೆ ಮಣ್ಣು ಸಾಗಿಸುವ ಗ್ರಾಮಗಳ ರಸ್ತೆಗಳು ಕೂಡ ಹಾಳಾಗಿ ಹೋಗಿವೆ. ಒಪ್ಪಂದದ ಪ್ರಕಾರ ಮಣ್ಣು ತೆಗೆಯುವ ಕೆರೆಗಳನ್ನು ಸರಿಪಡಿಸಬೇಕು. ಕೆರೆ ಸುತ್ತಲೂ ತಂತಿ ಬೇಲಿ ಹಾಕಿ, ಪ್ರಾಣಿಗಳು ಮತ್ತು ಜನರು ಕೆರೆಗೆ ಇಳಿದು ಹತ್ತಲು ಅನುಕೂಲವಾಗುವ ರೀತಿಯಲ್ಲಿ ಮಾಡಿಕೊಡಬೇಕು ಎಂದು ಸೂಚಿಸಲಾಗಿದೆ. ಆದರೆ, ಗುತ್ತಿಗೆದಾರರು ಮಾತ್ರ ಈ ಎಲ್ಲ ಒಪ್ಪಂದಗಳನ್ನು ಗಾಳಿಗೆ ತೂರಿ ಕಾಟಾಚಾರಕ್ಕೆ ತಂತಿ ಬೇಲಿ ಹಾಕಿದ್ದಾರೆ. ಅಲ್ಲದೆ, ಗ್ರಾಮದ ದೇವಾಲಯಗಳ ನಿರ್ಮಾಣಕ್ಕೆ ಕೆಲವರಿಗೆ ₹50–₹60 ಸಾವಿರ ಕೊಟ್ಟು ಇನ್ನೆರಡು ಮೂರು ತಿಂಗಳಲ್ಲಿ ಹೆದ್ದಾರಿ ಕಾಮಗಾರಿ ಮುಗಿಸಿಕೊಂಡು ಇಲ್ಲಿಂದ ಹೊರಹೋಗಲು ಸಿದ್ಧವಾಗಿದ್ದಾರೆ ಎಂದು ಆರೋಪಿಸಿದರು.

ಹೆದ್ದಾರಿ ಕಾಮಗಾರಿ ನಡೆಸಲು ಹುಲ್ಕೂರು ಸಮೀಪ ಸ್ಥಾಪಿಸಲಾಗಿರುವ ಜಲ್ಲಿ ಕ್ರಷರ್‌ನಿಂದ ಹೊರ ಬರುವ ಧೂಳಿನಿಂದ ಈ ಪ್ರದೇಶದ ಸುತ್ತಮುತ್ತ ರೈತರ ಹಿಪ್ಪು ನೇರಳೆ ಸೊಪ್ಪು ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಆದಾಗ್ಯೂ ಜಿಲ್ಲಾಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸ್ಥಳೀಯ ಶಾಸಕರು ಹಾಗೂ ತಾಲ್ಲೂಕು ಆಡಳಿತ ಮಾತ್ರ ಈ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದರು. 

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕರಗ ನಾರಾಯಣಸ್ವಾಮಿ, ಕೆಜಿಎಫ್ ತಾಲ್ಲೂಕು ಕಾರ್ಯಾಧ್ಯಕ್ಷ ಮುನಿರತ್ನಂ ರೆಡ್ಡಿ, ಅಂಬರೀಶ್, ಅಶೋಕ್ ಕುಮಾರ್, ಮುನಿಶಾಮಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT