ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಲೋಕಸಭಾ: ಒಳೇಟು ತಪ್ಪಿಸಿಕೊಂಡವರೇ ಜಯಶಾಲಿ!

ಏಷ್ಯಾದ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಎನಿಸಿರುವ ಕೋಲಾರದ ಎಪಿಎಂಸಿಗೆ ಹೋಗಿ ಚುನಾವಣೆ ಪ್ರಸ್ತಾಪ ಮಾಡಿದರೆ ರೈತರು, ವರ್ತಕರು ಗರಂ ಆಗುತ್ತಾರೆ.
Published 16 ಏಪ್ರಿಲ್ 2024, 1:29 IST
Last Updated 16 ಏಪ್ರಿಲ್ 2024, 1:29 IST
ಅಕ್ಷರ ಗಾತ್ರ

ಕೋಲಾರ: ‘ನಮ್ಮೂರಿಗೆ ಪ್ರಚಾರಕ್ಕೆ ಯಾರೂ ಬಂದಿಲ್ಲ. ಅಭ್ಯರ್ಥಿಗಳ ಮುಖವನ್ನೇ ನೋಡಿಲ್ಲ. ಹಿಂದೆ ಗೆದ್ದವರು ಅಭಿವೃದ್ಧಿ ಮಾಡಿಲ್ಲ; ಮುಂದೆ ಗೆಲ್ಲುವವರು ಅಭಿವೃದ್ಧಿ ಮಾಡುವ ಭರವಸೆ ಇಲ್ಲ’ ಎಂದು ಗೊಣಗುತ್ತಲೇ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡಿನ ರೈತ ಬಸಪ್ಪರೆಡ್ಡಿ ಬಿಸಿಲಿನ ಧಗೆಯಲ್ಲಿ ತಮ್ಮ ಮಾವಿನ ತೋಟದತ್ತ ಹೊರಟರು.

ಬಿಸಿಲು ಹೆಚ್ಚಿರುವುದರಿಂದ ಈ ಬಾರಿ ಮಾವಿನ ಫಸಲು ಹೇಗೋ ಏನೋ ಎಂಬ ಚಿಂತೆ ಅವರದ್ದು. ಮಾವು ಸಂಸ್ಕರಣಾ ಘಟಕ ಸ್ಥಾಪಿಸಲು ಯಾರಿಂದಲೂ ಸಾಧ್ಯವಾಗಿಲ್ಲ, ಇನ್ನು ಇವರ ಸಹವಾಸ ಯಾರಿಗೆ ಬೇಕು ಎಂಬ ಕೋಪ ಬೇರೆ.

ಏಷ್ಯಾದ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಎನಿಸಿರುವ ಕೋಲಾರದ ಎಪಿಎಂಸಿಗೆ ಹೋಗಿ ಚುನಾವಣೆ ಪ್ರಸ್ತಾಪ ಮಾಡಿದರೆ ರೈತರು, ವರ್ತಕರು ಗರಂ ಆಗುತ್ತಾರೆ. ‘ಟೊಮೆಟೊ ಮಾರುಕಟ್ಟೆ ಕಿಷ್ಕಿಂಧೆ ಆಗಿದೆ. 30 ವರ್ಷದಿಂದ ಮಾರುಕಟ್ಟೆಗೆ ಜಾಗ ಕಲ್ಪಿಸಲು ಯೋಗ್ಯತೆ ಇಲ್ಲದ ಪಕ್ಷಗಳ ಹೆಸರೆತ್ತಬೇಡಿ’ ಎನ್ನುತ್ತಲೇ ಟೊಮೆಟೊ ಹರಾಜಿನತ್ತ ಚಿತ್ತ ಹರಿಸಿದರು.

ಯಾವುದೇ ಹಳ್ಳಿಗೆ ಹೋಗಿ ಯಾರನ್ನೇ ಮಾತನಾಡಿಸಿದರೂ ಒಂದಿಲ್ಲೊಂದು ಸಮಸ್ಯೆ ಎತ್ತಿ ರಾಜಕೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಪರಸ್ಪರ ವಾಗ್ದಾಳಿ, ನಿಂದನೆ, ಪಕ್ಷದೊಳಗಿನ ಗೊಂದಲದಿಂದ ಈ ಬಾರಿಯ ಕ್ಷೇತ್ರದ ಅಭಿವೃದ್ಧಿ ವಿಚಾರ ತೆರೆಯ ಮರೆಗೆ ಸರಿದಿದೆ. 

ಕ್ಷೇತ್ರದ ಮತದಾರರು ಮೂರೂ ಪಕ್ಷಗಳಲ್ಲಿನ ಕಿತ್ತಾಟದ ಬಗ್ಗೆಯೇ ಹೆಚ್ಚು ಚರ್ಚೆಯಲ್ಲಿ ತೊಡಗಿದ್ದಾರೆ. ಸಚಿವ ಕೆ.ಎಚ್‌.ಮುನಿಯಪ್ಪ ಕೋಪ ಹಾಗೂ ಬಿಜೆಪಿ ಮುಖಂಡರ ಮನಸ್ತಾಪ ಚರ್ಚೆಯ ಮುಖ್ಯ ವಸ್ತು. ಹೆಚ್ಚಿನವರಿಗೆ ಕ್ಷೇತ್ರದ ಅಭ್ಯರ್ಥಿಗಳ ಹೆಸರು, ಅವರ ಮುಖ ಪರಿಚಯವೇ ಇಲ್ಲ!

ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆ ವಿಚಾರ, ಬಣ ಜಗಳ, ಶಾಸಕರ ರಾಜೀನಾಮೆ ಪ್ರಹಸನ ಸದ್ದು ಮಾಡಿತು. ಎರಡೂ ಬಣಗಳ ಸಹವಾಸವೇ ಬೇಡವೆಂದು ಮೂರನೇ ಅಭ್ಯರ್ಥಿಗೆ ಟಿಕೆಟ್‌ ನೀಡಿದರೂ ಅಸಮಾಧಾನಕ್ಕೆ ತೆರೆ ಬಿದ್ದಿಲ್ಲ.

ಇನ್ನು ಕೋಲಾರ ಕ್ಷೇತ್ರವನ್ನು ಜೆಡಿಎಸ್‌ಗೆ ಪಡೆದು ಕೊಳ್ಳಲು ಎಚ್‌.ಡಿ.ಕುಮಾರಸ್ವಾಮಿ ಸಾಹಸ ಮಾಡ ಬೇಕಾಯಿತು. ಕಳೆದ ಬಾರಿ ಗೆದ್ದಿದ್ದ ಕ್ಷೇತ್ರವನ್ನೇ ಬಿಜೆಪಿ ತ್ಯಾಗ ಮಾಡಿತು. ಬಿಜೆಪಿಯೊಳಗಿನ ಮನಸ್ತಾಪ, ಹಾಲಿ ಸಂಸದ ಎಸ್‌.ಮುನಿಸ್ವಾಮಿ ಮೇಲೆ ಪಕ್ಷದ ಕೆಲ ಮುಖಂಡರಿಗೆ ಇರುವ ಕೋಪ ಇನ್ನೂ ಶಮನಗೊಂಡಿಲ್ಲ. ಎಷ್ಟೇ ಹೋರಾಟ ನಡೆಸಿದರೂ ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್‌ ಕೊಡಿಸಲಾಗದ ಮುನಿಯಪ್ಪ ಅಸಮಾಧಾನ ಕಾಂಗ್ರೆಸ್‌ ಅಭ್ಯರ್ಥಿ ಕೆ.ವಿ.ಗೌತಮ್ ಅವರಿಗೆ ಯಾವ ರೀತಿ ಒಳೇಟು ನೀಡಬಹುದು? ಜೆಡಿಎಸ್‌ ಅಭ್ಯರ್ಥಿ ಎಂ.ಮಲ್ಲೇಶ್‌ ಬಾಬು ಅವರಿಗೆ ಕ್ಷೇತ್ರದ ಟಿಕೆಟ್‌ ಬಿಟ್ಟುಕೊಟ್ಟಿರುವುದರಿಂದ ಮುಂದೆ ತಮ್ಮ ಅಸ್ಮಿತೆಗೆ ಎಲ್ಲಿ ಧಕ್ಕೆ ಉಂಟಾಗಬಹುದೆಂಬ ಆತಂಕದಲ್ಲಿರುವ 2028ರ ವಿಧಾನಸಭೆ ಚುನಾವಣೆಯ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು ಯಾವ ರೀತಿ ಒಳೇಟು ನೀಡಬಹುದು ಎಂಬ ಚರ್ಚೆ ಚಾಲ್ತಿಯಲ್ಲಿದೆ.

ಕ್ಷೇತ್ರದಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಳೇಟು ತಪ್ಪಿಸಿಕೊಂಡು, ಜಾತಿ ಲೆಕ್ಕಾಚಾರದಲ್ಲಿ ಯಶಸ್ಸು ಕಂಡು, ಮಹಿಳಾ ಮತದಾರರ ಮನಗೆಲ್ಲುವವರೇ ಕ್ಷೇತ್ರದ ಮುಂದಿನ ಸಂಸದರು!

ಬಿಜೆಪಿಗೆ ಅನಾಥ ಭಾವ!

ಲೋಕಸಭೆ ಚುನಾವಣೆ ಇತಿಹಾಸದಲ್ಲಿ 2019ರಲ್ಲಿ ಮೊಟ್ಟಮೊದಲ ಬಾರಿ ಕೋಲಾರ ಮೀಸಲು ಕ್ಷೇತ್ರ ಗೆದ್ದುಕೊಂಡಿದ್ದ ಬಿಜೆಪಿಗೆ ಈ ಬಾರಿ ಟಿಕೆಟ್‌ ಕೈತಪ್ಪಿರುವುದು ಕ್ಷೇತ್ರದ ಕಾರ್ಯಕರ್ತರಲ್ಲಿ ಅನಾಥ ಭಾವ ಮೂಡಿಸಿದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT