ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ ಲೋಕಸಭಾ ಕ್ಷೇತ್ರ | ಗೆಲುವಿಗಾಗಿ ಮೈತ್ರಿಕೂಟದ ಕಸರತ್ತು ಶುರು!

ಮಲ್ಲೇಶ್‌ ಬಾಬು ಕೋಲಾರ ಮೀಸಲು ಕ್ಷೇತ್ರದ ಅಭ್ಯರ್ಥಿ: ಜೆಡಿಎಸ್‌ ಮುಖಂಡರ ಘೋಷಣೆ
Published 30 ಮಾರ್ಚ್ 2024, 7:35 IST
Last Updated 30 ಮಾರ್ಚ್ 2024, 7:35 IST
ಅಕ್ಷರ ಗಾತ್ರ

ಕೋಲಾರ: ಕೋಲಾರ ಮೀಸಲು ಲೋಕಸಭೆ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿಯನ್ನಾಗಿ ಎಂ.ಮಲ್ಲೇಶ್‌ ಬಾಬು ಅವರನ್ನು ಜೆಡಿಎಸ್‌ ಮುಖಂಡರು ಅಂತಿಮಗೊಳಿಸಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ನಿವಾಸದಲ್ಲಿ ನಡೆದ ಕೋಲಾರ ಕ್ಷೇತ್ರದ ಮುಖಂಡರ ಸಭೆಯಲ್ಲಿ ಈ ಘೋಷಣೆ ಆಗಿದೆ. ಈ ವಿಚಾರವನ್ನು ಕ್ಷೇತ್ರದ ಜೆಡಿಎಸ್‌ ಮುಖಂಡರು ಖಚಿತಪಡಿಸಿದ್ದಾರೆ. ಆದರೆ, ಕುಮಾರಸ್ವಾಮಿ ಅವರ ಮೂಲಕವಾಗಲಿ ಅಥವಾ ಪಕ್ಷದಿಂದಿಂದಾಗಲಿ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

‘ಮಲ್ಲೇಶ್‌ ಬಾಬು ನಿಷ್ಠಾವಂತ ಕಾರ್ಯಕರ್ತ. ಅವರನ್ನು ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಎಲ್ಲರ ಒಪ್ಪಿಗೆ ಸಿಕ್ಕಿದೆ. ಅವರನ್ನು ಗೆಲ್ಲಿಸಿಕೊಂಡು ಬರುವುದಾಗಿ ಎಂಟೂ ಕ್ಷೇತ್ರಗಳ ಮುಖಂಡರು ಕುಮಾರಣ್ಣ, ದೇವೇಗೌಡರಿಗೆ ಭರವಸೆ ನೀಡಿದ್ದೇವೆ’ ಎಂದು ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಸಭೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ, ರಾಜ್ಯ ಘಟಕದ ಯುವ ಮುಖಂಡ ನಿಖಿಲ್‌ ಕುಮಾರಸ್ವಾಮಿ, ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್‌, ಇಂಚರ ಗೋವಿಂದರಾಜು, ಮುಖಂಡರಾದ ಸಿಎಂಆರ್‌ ಶ್ರೀನಾಥ್‌, ರಾಮೇಗೌಡ, ಮಲ್ಲೇಶ್‌ ಬಾಬು ಹಾಗೂ ಅವರ ತಾಯಿ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಪಾಲ್ಗೊಂಡಿದ್ದರು.

ಈಗಾಗಲೇ ಬಹುತೇಕ ಜೆಡಿಎಸ್‌ ಮುಖಂಡರು ತಮ್ಮ ಫೇಸ್‌ಬುಕ್‌ನಲ್ಲಿ ಈ ವಿಚಾರ ಬರೆದುಕೊಂಡು ಮಲ್ಲೇಶ್‌ ಬಾಬು ಅವರನ್ನು ಅಭಿನಂದಿಸಿದ್ದಾರೆ. ಅಭ್ಯರ್ಥಿ ಕೂಡ ತಮ್ಮ ಫೇಸ್‌ಬುಕ್‌ನಲ್ಲಿ ಟಿಕೆಟ್‌ ಸಿಕ್ಕಿರುವ ವಿಚಾರ ಹಂಚಿಕೊಂಡಿದ್ದಾರೆ. ಆದರೆ, ಕುಮಾರಸ್ವಾಮಿ ಆಗಲಿ, ನಿಖಿಲ್‌ ಕುಮಾರಸ್ವಾಮಿ ಅವರಾಗಲಿ ತಮ್ಮ ಫೇಸ್‌ಬುಕ್‌ನಲ್ಲಿ ಈ ವಿಚಾರ ಇನ್ನೂ ಪ್ರಸ್ತಾಪಿಸಿಲ್ಲ.

ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಾಗಿ ಸಮೃದ್ಧಿ ಮಂಜುನಾಥ್‌ ಹಾಗೂ ದೇವನಹಳ್ಳಿ ಕ್ಷೇತ್ರದ ಪರಾಜಿತ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿ ಕೂಡ ಇದ್ದರು. ಕೊನೆಯಲ್ಲಿ ಮಲ್ಲೇಶ್‌ ಬಾಬು ಅವರಿಗೆ ಮಣೆ ಹಾಕಲಾಗಿದೆ.

ಏ.26ರಂದು ಬೆಂಗಳೂರಿನಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ ಕೋರ್‌ ಕಮಿಟಿ ಸಭೆ ನಡೆಯುತ್ತಿದ್ದಾಗಲೇ ಹಾಸನ ಪ್ರವಾಸದಲ್ಲಿದ್ದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಮಲ್ಲೇಶ್‌ ಬಾಬು ಹೆಸರನ್ನು ಪ್ರಕಟಿಸಿದ್ದರು. ಆದರೆ, ಎರಡು ದಿನಗಳ ಹಿಂದೆ ಅದೇ ಹೆಸರು ಅಂತಿಮವಲ್ಲ ಎಂದು ಕುಮಾರಸ್ವಾಮಿ ಹೇಳಿದ್ದು ಗೊಂದಲ ಮೂಡಿಸಿತ್ತು.

ಈ ನಡುವೆ, ಶುಕ್ರವಾರ ಬೆಂಗಳೂರಿನಲ್ಲಿ ಮಲ್ಲೇಶ್‌ ಬಾಬು, ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಇಂಚರ ಗೋವಿಂದರಾಜು, ಮಂಗಮ್ಮ ಮುನಿಸ್ವಾಮಿ ಜೊತೆಗಿದ್ದರು.

ಈ ಬೆನ್ನಲೇ ಸಂಜೆ ಇಂಚರ ಗೋವಿಂದರಾಜು ನಿವಾಸದಲ್ಲಿ ಸ್ಥಳೀಯ ಮುಖಂಡರು ಸಭೆ ಸೇರಿ ನಾಮಪತ್ರ ಸಲ್ಲಿಸುವ ಸಂಬಂಧ ಚರ್ಚಿಸಿದ್ದಾರೆ. ಒಳಜಗಳದಿಂದ ಇನ್ನೂ ಅಭ್ಯರ್ಥಿ ಆಯ್ಕೆ ಮಾಡಲು ಸಾಧ್ಯವಾಗದ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಲು ತಂತ್ರ ರೂಪಿಸಿದ್ದಾರೆ. ಈ ಮೂಲಕ ಗೆಲುವಿಗೆ ಮೈತ್ರಿಕೂಟದ ಕಾರ್ಯತಂತ್ರ ಆರಂಭವಾಗಿದೆ. ಸದ್ಯದಲ್ಲೇ ಜೆಡಿಎಸ್‌–ಬಿಜೆಪಿ ಕ್ಷೇತ್ರ ಮಟ್ಟದ ಸಮನ್ವಯ ಸಭೆಯೂ ನಡೆಯಲಿದೆ.

ಬಂಗಾರಪೇಟೆ ವಿಧಾನಸಭೆ ಕ್ಷೇತ್ರದಲ್ಲಿ 2018 ಹಾಗೂ 2023ರಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ಮಲ್ಲೇಶ್‌ ಬಾಬು ಭೋವಿ ಸಮುದಾಯದವರು. 50 ವರ್ಷ ವಯಸ್ಸಿನ ಅವರು ಎಂಬಿಎ ಪದವೀಧರರು.

ಐಎಎಸ್‌ ಅಧಿಕಾರಿಯಾಗಿದ್ದ ದಿವಂಗತ ಮುನಿಸ್ವಾಮಿ ಸಿ. ಹಾಗೂ ಮಂಗಮ್ಮ ಮುನಿಸ್ವಾಮಿ ಪುತ್ರನೂ ಆಗಿರುವ ಮಲ್ಲೇಶ್ ಬಾಬು ಮೊದಲ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. 2009ರಲ್ಲಿ ಮಂಗಮ್ಮ (2.39 ಲಕ್ಷ ಮತ) ಬಿಜೆಪಿಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್‌ನ ಕೆ.ಎಚ್‌.ಮುನಿಯಪ್ಪ (3.21 ಲಕ್ಷ ಮತ) ವಿರುದ್ಧ ಪರಾಭವಗೊಂಡಿದ್ದರು.

ಬಿಜೆಪಿ ಜೊತೆಗಿನ ಮೈತ್ರಿ ಒಪ್ಪಂದದಂತೆ ಈ ಬಾರಿ ಜೆಡಿಎಸ್‌ಗೆ ಕ್ಷೇತ್ರದ ಟಿಕೆಟ್‌ ಒಲಿದಿದೆ. ಹೀಗಾಗಿ, ಹಾಲಿ ಸಂಸದ ಎಸ್‌.ಮುನಿಸ್ವಾಮಿ ಇದ್ದರೂ ಬಿಟ್ಟುಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಈ ಹಿಂದೆ ಅಂದರೆ 1984ರಲ್ಲಿ ಮೊದಲ ಬಾರಿ ಜನತಾ ಪರಿವಾರದ ವಿ.ವೆಂಕಟೇಶ್‌ ಗೆದ್ದಿದ್ದರು. ಆ ಬಳಿಕ ಜನತಾ ಪರಿವಾರಕ್ಕೆ ಗೆಲುವು ಒಲಿದಿಲ್ಲ.

ಜೆಡಿಎಸ್‌ನಿಂದ ಇನ್ನೂ ಹೊರಬೀಳದ ಅಧಿಕೃತ ಘೋಷಣೆ ವಿಧಾನಸಭೆ ಚುನಾವಣೆಯಲ್ಲಿ ಎರಡು ಬಾರಿ ಸ್ಪರ್ಧಿಸಿದ್ದ ಮಲ್ಲೇಶ್‌ ಬಾಬು ಈ ಬಾರಿ ಜೆಡಿಎಸ್‌ಗೆ ಟಿಕೆಟ್‌ ಬಿಟ್ಟುಕೊಟ್ಟಿರುವ ಬಿಜೆಪಿ

- ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆದಿದ್ದು ನನ್ನನ್ನು ಕೋಲಾರ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ ಎಂ.ಮಲ್ಲೇಶ್‌ ಬಾಬು ಕೋಲಾರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ (ಎನ್‌ಡಿಎ)

ಕೋಲಾರಕ್ಕೆ ಸರ್ವಸಮ್ಮತದ ಅಭ್ಯರ್ಥಿಯಾಗಿ ಮಲ್ಲೇಶ್‌ ಬಾಬು ಅವರನ್ನು ಆಯ್ಕೆ ಮಾಡಲಾಗಿದೆ. ನಮ್ಮಲ್ಲಿ ಭಿನ್ನಮತ ಇಲ್ಲ. ಸಭೆಯಲ್ಲಿ 8 ವಿಧಾನಸಭೆ ಕ್ಷೇತ್ರದ ಮುಖಂಡರು ಭಾಗಿಯಾಗಿದ್ದರು

– ಇಂಚರ ಗೋವಿಂದರಾಜು ವಿಧಾನ ಪರಿಷತ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT