ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: ‌ಪೊಲೀಸ್‌ ಠಾಣೆಯಲ್ಲಿ ಅದ್ದೂರಿ ಸೀಮಂತ

ಠಾಣೆಯಲ್ಲಿ ಭೋಜನ ವ್ಯವಸ್ಥೆ, ಪೊಲೀಸ್‌ ಅಧಿಕಾರಿಗಳು ಭಾಗಿ–ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ
Published 2 ಜುಲೈ 2024, 5:29 IST
Last Updated 2 ಜುಲೈ 2024, 5:29 IST
ಅಕ್ಷರ ಗಾತ್ರ

ಕೋಲಾರ: ‌ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಬರ್ತ್‌ಡೇ ಪಾರ್ಟಿ, ಬಾಡೂಟದ ಬೆನ್ನಲ್ಲೇ ಇದೀಗ ಪೊಲೀಸ್ ಠಾಣೆಯಲ್ಲಿ ಮಹಿಳಾ ಕಾನ್‌ಸ್ಟೇಬಲ್‌ಗಳಿಗೆ ಅದ್ದೂರಿ ಸೀಮಂತ ಕಾರ್ಯಕ್ರಮ ಏರ್ಪಡಿಸಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ತಮ್ಮ ಸಹೋದ್ಯೋಗಿಗಳಿಗೆ ಗೌರವ ಸಲ್ಲಿಸಿದ್ದು, ಮನಮೆಚ್ಚುವ ಕಾರ್ಯಕ್ರಮ ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಠಾಣೆಯನ್ನು ಛತ್ರವಾಗಿ ಮಾರ್ಪಡಿಸಲಾಗಿತ್ತು ಎಂದು ಕೆಲವರು ಟೀಕಿಸಿದ್ದಾರೆ.

ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಸೋಮವಾರ ಇಬ್ಬರು ಕಾನ್‌ಸ್ಟೇಬಲ್‌ಗಳಿಗೆ ಸೀಮಂತ ಕಾರ್ಯಕ್ರಮ ನಡೆದಿದ್ದು, ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಕಾರ್ಯಕ್ರಮದ ಅಂಗವಾಗಿ ಮಹಿಳಾ ಪೊಲೀಸ್ ಠಾಣೆಯ ಆವರಣವನ್ನು ಅಲಂಕರಿಸಲಾಗಿತ್ತು. ಶಾಮಿಯಾನ ಹಾಕಲಾಗಿತ್ತು. ಠಾಣೆ ಸಿಬ್ಬಂದಿ, ಪೊಲೀಸ್‌ ಅಧಿಕಾರಿಗಳು ಭಾಗಿಯಾಗಿದ್ದರು.

ಸೀಮಂತ ಕಾರ್ಯಕ್ರಮವನ್ನು ಶಾಸ್ತ್ರೋಕ್ತವಾಗಿ ನಡೆಸಲಾಯಿತು. ಕಾರ್ಯಕ್ರಮಕ್ಕೆ ಬಂದಿದ್ದ ಪೊಲೀಸ್ ಅಧಿಕಾರಿಗಳು ಗರ್ಭಿಣಿ ಸಿಬ್ಬಂದಿಗೆ ಉಡುಗೊರೆ ನೀಡಿ ಶುಭ ಹಾರೈಸಿದರು. ಟೇಬಲ್, ಚೇರ್ ಹಾಕಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದೆ. ಎರಡೂ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.

ಠಾಣೆಯಲ್ಲಿ ನಡೆದ  ಈ ಕಾರ್ಯವನ್ನು ಕೆಲವರು ಶ್ಲಾಘಿಸಿದರೆ, ಇನ್ನು ಕೆಲವರು ದೂರು ಹೊತ್ತು ಠಾಣೆಗೆ ಬರುವ ದೂರದಾರರಿಗೆ ತೊಂದರೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

‘ಕೆಲ ಪೊಲೀಸ್‌ ಠಾಣೆಗಳಲ್ಲಿ ಮಾನವೀಯತೆ ದೃಷ್ಟಿಯಿಂದ ತಮ್ಮ ಸಹೋದ್ಯೋಗಿಗಳಿಗೆ ಸೀಮಂತ ಕಾರ್ಯಕ್ರಮ ನಡೆಸುವುದನ್ನು ಕಾಣಬಹುದು. ಹಿಂದೆಯೂ ಹಲವಾರು ಠಾಣೆಗಳಲ್ಲಿ, ಸರ್ಕಾರದ ಇತರೆ ಕಚೇರಿಗಳಲ್ಲಿ ನಡೆದಿದೆ. ಇದಕ್ಕೆ ಅಪಾರ್ಥ ಕಲ್ಪಿಸಬೇಕಾಗಿಲ್ಲ. ಬರ್ತ್‌ಡೇ ಪಾರ್ಟಿ, ಬಾಡೂಟವೇ ಬೇರೆ ಸೀಮಂತ ಕಾರ್ಯಕ್ರಮವೇ ಬೇರೆ. ಠಾಣೆಯಲ್ಲಿ ಇದೊಂದು ಸಂಭ್ರಮದ ಕಾರ್ಯಕ್ರಮ ಅಷ್ಟೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈಚೆಗೆ ಕೋಲಾರದ ಹಿರಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕೆಲಸದ ಸಮಯದಲ್ಲಿ ಬರ್ತ್‌ಡೇ ಪಾರ್ಟಿ ನಡೆದಿತ್ತು. ತೊಟ್ಲಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕೆ ಜಿಲ್ಲೆಯಲ್ಲಿ ಸಾರ್ವಜನಿಕರಿಂದ‌ ಟೀಕೆ ವ್ಯಕ್ತವಾಗಿತ್ತು.

ಕೋಲಾರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಸೋಮವಾರ ಪೊಲೀಸ್‌ ಕಾನ್‌ಸ್ಟೆಬಲ್‌ಗಳಿಗೆ ಹಮ್ಮಿಕೊಂಡಿದ್ದ ಸೀಮಂತ ಕಾರ್ಯಕ್ರಮ
ಕೋಲಾರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಸೋಮವಾರ ಪೊಲೀಸ್‌ ಕಾನ್‌ಸ್ಟೆಬಲ್‌ಗಳಿಗೆ ಹಮ್ಮಿಕೊಂಡಿದ್ದ ಸೀಮಂತ ಕಾರ್ಯಕ್ರಮ

ಕೋಲಾರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ನಡೆದ ಕಾರ್ಯಕ್ರಮ ಮನಮಿಡಿಯುವ ಕಾರ್ಯಕ್ರಮ ಎಂದು ಮೆಚ್ಚುಗೆ ದೂರುದಾರರಿಗೆ ತೊಂದರೆ ಆಗುವುದಿಲ್ಲವೇ ಎಂದು ಕೆಲವರ ಪ್ರಶ್ನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT