ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ಪರೀಕ್ಷಾ ಕೇಂದ್ರ ಆರಂಭ

ಜಿಲ್ಲೆಯಲ್ಲೇ ಸೋಂಕು ತಪಾಸಣೆ: ಉಸ್ತುವಾರಿ ಸಚಿವ ನಾಗೇಶ್‌ ಹೇಳಿಕೆ
Last Updated 2 ಜೂನ್ 2020, 15:13 IST
ಅಕ್ಷರ ಗಾತ್ರ

ಕೋಲಾರ: ‘ಕೊರೊನಾ ಸೋಂಕಿತರಿಗೆ ಉತ್ತಮ ವೈದ್ಯಕೀಯ ಸೇವೆ ನೀಡಿ ಗುಣಮುಖವಾಗಿಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್‌ ಹೇಳಿದರು.

ಇಲ್ಲಿನ ಎಸ್‍ಎನ್‍ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ಕೊರೊನಾ ಸೋಂಕು ಪರೀಕ್ಷಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ‘ಜಿಲ್ಲೆಯಲ್ಲಿನ ಶಂಕಿತ ಕೊರೊನಾ ಸೋಂಕಿತರ ಕಫಾ ಮತ್ತು ರಕ್ತ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಿಸುವ ಪರಿಸ್ಥಿತಿಯಿತ್ತು. ಇದರಿಂದ ವರದಿ ಬರುವುದು 2 ದಿನ ವಿಳಂಬವಾಗುತ್ತಿತ್ತು’ ಎಂದರು.

‘ಶಂಕಿತ ಸೋಂಕಿತರ ಕಫಾ ಮತ್ತು ರಕ್ತ ಮಾದರಿಯನ್ನು ಜಿಲ್ಲೆಯಲ್ಲೇ ಪರೀಕ್ಷಿಸಿ ವಿಳಂಬ ತಪ್ಪಿಸುವ ಉದ್ದೇಶಕ್ಕೆ ಸ್ಥಳೀಯವಾಗಿ ಪ್ರಯೋಗಾಲಯ ಆರಂಭಿಸುವಂತೆ ವಿಡಿಯೋ ಸಂವಾದದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆವು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಜಿಲ್ಲೆಗೆ ಕೋವಿಡ್‌–19 ಪರೀಕ್ಷಾ ಕೇಂದ್ರ ಮಂಜೂರು ಮಾಡಿದರು’ ಎಂದು ವಿವರಿಸಿದರು.

‘ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಆರಂಭಿಸಿರುವ ಕೋವಿಡ್‌–19 ಪ್ರಯೋಗಾಲಯದಲ್ಲಿ ದಿನಕ್ಕೆ 150 ಮಂದಿಯ ರಕ್ತ ಮಾದರಿ ಪರೀಕ್ಷೆ ಮಾಡಬಹುದು. ಜತೆಗೆ ವರದಿಯು ಶೀಘ್ರವೇ ಸಿಗಲಿದೆ. ಇದರಿಂದ ಸೋಂಕಿತರನ್ನು ವರದಿ ಬಂದ ದಿನವೇ ಕ್ವಾರಂಟೈನ್‌ ಮಾಡಿ ಹೆಚ್ಚು ಮಂದಿಗೆ ಸೋಂಕು ಹರಡದಂತೆ ತಡೆಯಲು ಸಹಾಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

11 ಮಂದಿ ಗುಣಮುಖ: ‘ಜಿಲ್ಲೆಯಲ್ಲಿ ಈವರೆಗೆ 28 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಈ ಪೈಕಿ 11 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಉಳಿದ 17 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಅವರೆಲ್ಲಾ ಗುಣಮುಖರಾಗುವ ವಿಶ್ವಾಸವಿದೆ. ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಲು ಎಸ್‌ಎನ್ಆರ್‌ ಆಸ್ಪತ್ರೆ ಸಮರ್ಥವಿದೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲಾಧಿಕಾರಿ ಅವರನ್ನು ಒಳಗೊಂಡಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು ಕೊರೊನಾ ಸೋಂಕಿತರ ಮೇಲೆ ನಿಗಾ ಇಟ್ಟು ಗುಣಮುಖರಾಗಿಸುವ ಕೆಲಸ ಮಾಡುತ್ತಿದ್ದಾರೆ. ಎಸ್‌ಎನ್‌ಆರ್‌ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ, ಕೊರೊನಾ ವಾರಿಯರ್ಸ್‌ ನಮ್ಮ ಜತೆ ಕೈಜೋಡಿಸಿ ಉತ್ತಮ ಕೆಲಸ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಣ ತೊಟ್ಟಿದ್ದೇವೆ: ‘ಎಸ್‌ಎನ್ಆರ್‌ ಆಸ್ಪತ್ರೆಯಲ್ಲಿ 200 ಹಾಸಿಗೆ ಸಾಮರ್ಥ್ಯದ ಕೋವಿಡ್‌–19 ವಿಭಾಗ ಆರಂಭಕ್ಕೆ ಸಿದ್ಧತೆ ನಡೆದಿದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದನ್ನು ಸವಾಲಾಗಿ ಸ್ವೀಕರಿಸಿ ಎಸ್‍ಎನ್‍ಆರ್ ಆಸ್ಪತ್ರೆಯನ್ನು ಸುಸಜ್ಜಿತ ಆಸ್ಪತ್ರೆಯಾಗಿ ಮಾಡಲು ಪಣ ತೊಟ್ಟಿದ್ದೇವೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.

‘ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಸಲಕರಣೆ ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಕೋವಿಡ್‌ ವಿಭಾಗಕ್ಕೆ ಬೇಕಾದ ನರ್ಸ್‌ಗಳು, ಡಿ ಗ್ರೂಪ್ ನೌಕರರ ನೇಮಕಾತಿ ಆಗಿದೆ. ವೈದ್ಯರ ನೇಮಕಾತಿ ಮಾಡಿಕೊಳ್ಳುತ್ತೇವೆ. ಈ ಹಿಂದೆ ಇದ್ದ ಮಕ್ಕಳ ಆಸ್ಪತ್ರೆಯಲ್ಲಿ ಶಂಕಿತ ಸೋಂಕಿತರನ್ನು ದಾಖಲು ಮಾಡುತ್ತೇವೆ. ಹಳೇ ಹೆರಿಗೆ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುವುದು’ ಎಂದು ಹೇಳಿದರು.

ಸಂಸದ ಎಸ್‌.ಮುನಿಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT