ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ 3ನೇ ಅಲೆ: ಸಿದ್ಧತೆ ಮಾಡಿಕೊಳ್ಳಿ: ಅರವಿಂದ ಲಿಂಬಾವಳಿ

ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸೂಚನೆ
Last Updated 6 ಜುಲೈ 2021, 14:54 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್‌ 3ನೇ ಅಲೆ ಎದುರಿಸಲು ಈಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಿ. 2ನೇ ಅಲೆಯ ಸಂದರ್ಭದಂತೆ ಸೋಂಕಿತರ ಚಿಕಿತ್ಸೆಗೆ ಬೆಡ್‌ ಹಾಗೂ ವೈದ್ಯಕೀಯ ಆಮ್ಲಜನಕದ ಕೊರತೆ ಆಗಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್‌ 3ನೇ ಅಲೆ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಸಂಬಂಧ ಇಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿ, ‘3ನೇ ಅಲೆ ಆರಂಭವಾದಾಗ ಸೋಂಕಿತರನ್ನು ಶೀಘ್ರವೇ ಪತ್ತೆಹಚ್ಚಿ ಚಿಕಿತ್ಸೆ ಕೊಡಬೇಕು. ಸೋಂಕಿತರಿಗೆ ಸಕಾಲಕ್ಕೆ ಚಿಕಿತ್ಸೆ ನೀಡಿದರೆ ಸಾವು ತಪ್ಪಿಸಬಹುದು’ ಎಂದು ಹೇಳಿದರು.

‘3ನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಜಿಲ್ಲೆಯ ಗಡಿ ಭಾಗದ ತಾಲ್ಲೂಕುಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಗಡಿ ಗ್ರಾಮಗಳಲ್ಲಿ ಸೋಂಕು ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಕೋವಿಡ್‌ ಲಸಿಕೆ ಪಡೆದವರೆಗೆ ಮಾತ್ರ ಜಿಲ್ಲೆ ಪ್ರವೇಶಿಸಲು ಗಡಿ ಭಾಗದಲ್ಲಿ ಅನುಮತಿ ನೀಡಬೇಕು. ಜತೆಗೆ ಕೋವಿಡ್‌ ಪರೀಕ್ಷೆ ಕಡ್ಡಾಯಗೊಳಿಸಬೇಕು’ ಎಂದು ಸೂಚಿಸಿದರು.

‘ಕೋವಿಡ್‌ ಲಸಿಕೆಯ 2ನೇ ಡೋಸ್ ಪಡೆಯುವವರಿಗೆ ಮೊದಲ ಆದ್ಯತೆ ನೀಡಿ. ಇಲ್ಲವಾದರೆ ಜನ ಗಲಾಟೆ ಮಾಡುತ್ತಾರೆ. ಹೀಗಾಗಿ 2ನೇ ಡೋಸ್‌ನವರಿಗೆ ಮೊದಲು ಲಸಿಕೆ ನೀಡಿ. ನಂತರ ಉಳಿದ ಲಸಿಕೆಗಳನ್ನು ಮೊದಲ ಡೋಸ್ ಪಡೆಯುವವರಿಗೆ ಕೊಡಿ’ ಎಂದು ಸಲಹೆ ನೀಡಿದರು.

ಲಾಕ್‌ಡೌನ್‌ ಅನಿವಾರ್ಯ: ‘ಜಿಲ್ಲಾಡಳಿತವು ಕೋವಿಡ್‌ 3ನೇ ಅಲೆ ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಿಲ್ಲಾಡಳಿತದ ಅಂದಾಜಿಗಿಂತಲೂ ಸೋಂಕು ಹರಡುವಿಕೆ ಹೆಚ್ಚಿ ಪರಿಸ್ಥಿತಿ ಕೈ ಮೀರಿದರೆ ಲಾಕ್‌ಡೌನ್‌ ಜಾರಿ ಅನಿವಾರ್ಯ’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಕೊರೊನಾ ಸೋಂಕಿನ ಪ್ರಕರಣ ವರದಿಯಾದ ತಕ್ಷಣ ಹಾಗೂ ಸೋಂಕು ಹರಡುವಿಕ ಪ್ರಮಾಣ ಹೆಚ್ಚಿರುವ ಪ್ರದೇಶಗಳನ್ನು ತಡ ಮಾಡದೆ ಕಂಟೈನ್‌ಮೆಂಟ್‌ ವಲಯಗಳಾಗಿ ಮಾಡಿ. ಆ ಮೂಲಕ ಸೋಂಕು ಹರಡುವಿಕೆ ನಿಯಂತ್ರಿಸಬೇಕು. ಅಗತ್ಯವಿದ್ದರೆ ಈ ಕಾರ್ಯಕ್ಕೆ ಪೊಲೀಸರ ಸಹಕಾರ ಪಡೆಯಿರಿ’ ಎಂದು ಹೇಳಿದರು.

ಸಜ್ಜಾಗಿದ್ದೇವೆ: ‘ಜಿಲ್ಲೆಯ 17 ಲಕ್ಷ ಜನಸಂಖ್ಯೆಯಲ್ಲಿ ಶೇ 40ರಷ್ಟು ಮಕ್ಕಳಿದ್ದಾರೆ. ಆ ಪೈಕಿ 3ನೇ ಅಲೆಯ ಸಂದರ್ಭದಲ್ಲಿ ಶೇ 5ರಷ್ಟು ಮಕ್ಕಳಿಗೆ ಸೋಂಕು ಹರಡುವ ಸಾಧ್ಯತೆಯಿದೆ. ಎಸ್‍ಎನ್‍ಆರ್ ಜಿಲ್ಲಾ ಆಸ್ಪತ್ರೆ ಹಾಗೂ ಆರ್.ಎಲ್‌ ಜಾಲಪ್ಪ ಆಸ್ಪತ್ರೆಯಲ್ಲಿ ಸೋಂಕಿತ ಮಕ್ಕಳಿಗೆ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಂಡು ಸಜ್ಜಾಗಿದ್ದೇವೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್ ವಿವರಿಸಿದರು.

‘ಮಕ್ಕಳಲ್ಲಿ ಕೊರೊನಾ ಸೋಂಕಿನ ಲಕ್ಷಣ ಗುರುತಿಸಿ ಶೀಘ್ರವೇ ಚಿಕಿತ್ಸೆ ನೀಡಲು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುತ್ತಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಸೋಂಕಿತ ಮಕ್ಕಳ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಪ್ರತ್ಯೇಕ ತೀವ್ರ ನಿಗಾ ಘಟಕ ಹಾಗೂ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಔಷಧಗಳ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರತ್ಯೇಕ ಕೇಂದ್ರ: ‘ಕೊರೊನಾ ಸೋಂಕಿತ ಮಕ್ಕಳ ಚಿಕಿತ್ಸೆಗಾಗಿಯೇ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಪ್ರತ್ಯೇಕ ಕೋವಿಡ್‌ ಆರೈಕೆ ಕೇಂದ್ರ ತೆರೆಯಲಾಗಿದೆ. ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಿಸಲಾಗಿದ್ದು, ಆಮ್ಲಜನಕ ಕೊರತೆ ಎದುರಾಗುವುದಿಲ್ಲ. ಜುಲೈ ಅಂತ್ಯದ ವೇಳೆಗೆ ಈ ಆಮ್ಲಜನಕ ಘಟಕಗಳು ಕಾರ್ಯಾರಂಭ ಮಾಡಲಿವೆ’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್‌.ಎಂ.ನಾಗರಾಜ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್‌ಬಾಬು, ಕೆಜಿಎಫ್‌ ಪೊಲೀಸ್‌ ಜಿಲ್ಲಾ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್‌, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT