ಮಂಗಳವಾರ, ನವೆಂಬರ್ 12, 2019
27 °C
ಆಹಾರ– ನಾಗರೀಕ ಸರಬರಾಜು ಇಲಾಖೆ ಸೂಚನೆ

ಕೆವೈಸಿ: ಆಧಾರ್ ದೃಢೀಕರಣ ಮಾಡಿ

Published:
Updated:

ಕೋಲಾರ: ಸರ್ಕಾರದ ಆದೇಶದಂತೆ ಕೆವೈಸಿ ಪ್ರಕ್ರಿಯೆಗೆ ಆಧಾರ್ ದೃಢೀಕರಣ ಮಾಡಿಸದ ಫಲಾನುಭವಿಗಳ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂನ್ ಮತ್ತು ಜುಲೈ ತಿಂಗಳಲ್ಲಿ ಪಡಿತರ ಚೀಟಿಯಲ್ಲಿನ ಎಲ್ಲಾ ಸದಸ್ಯರ ಕೆವೈಸಿ ಮಾಡಿಸಲು ಸರ್ಕಾರ ಆದೇಶಿಸಿತ್ತು. ಆದರೆ, ಕಾರಣಾಂತರದಿಂದ ಕೆವೈಸಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಸರ್ಕಾರ ಕೆವೈಸಿ ಪ್ರಕ್ರಿಯೆ ಪುನರಾರಂಭಿಸುವಂತೆ ಆದೇಶಿಸಿದೆ. ಹೀಗಾಗಿ ಪಡಿತರ ಚೀಟಿಯಲ್ಲಿನ ಎಲ್ಲಾ ಸದಸ್ಯರ ಆಧಾರ್ ದೃಢೀಕರಣವನ್ನು ಸೆ.11ರಿಂದ ನವೆಂಬರ್ ತಿಂಗಳ ಅಂತ್ಯದವರೆಗೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ನಿಗದಿತ ಗಡುವಿನೊಳಗೆ ಆಧಾರ್‌ ದೃಢೀಕರಣ ಮಾಡಿಸದಿದ್ದರೆ ಡಿಸೆಂಬರ್‌ ತಿಂಗಳಲ್ಲಿ ಪಡಿತರ ವಿತರಣೆ ಸ್ಥಗಿತಗೊಳಿಸುತ್ತೇವೆ. ಆ ನಂತರ ಆಧಾರ್ ದೃಢೀಕರಣ ಮಾಡಿಸಿದರೆ 2020ರ ಜನವರಿಯಿಂದ ಪಡಿತರ ವಿತರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯಲ್ಲಿ 20,261 ಅಂತ್ಯೋದಯ ಹಾಗೂ 3,23,735 ಬಿಪಿಎಲ್ ಪಡಿತರ ಚೀಟಿಗಳಿದ್ದು, ಒಟ್ಟಾರೆ 11,15,403 ಮಂದಿ ಅನ್ನಭಾಗ್ಯ ಯೋಜನೆ ಸೌಲಭ್ಯ ಪಡೆಯುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬಕ್ಕೆ ಪಡಿತರ ಚೀಟಿಯಲ್ಲಿರುವ ಕುಟುಂಬ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ತಲಾ 7 ಕೆ.ಜಿ ಆಹಾರಧಾನ್ಯ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ 25 ಕೆ.ಜಿ ಅಕ್ಕಿ ಮತ್ತು 10 ಕೆ.ಜಿ ರಾಗಿ ಸೇರಿ ಒಟ್ಟು 35 ಕೆ.ಜಿ ಆಹಾರಧಾನ್ಯಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಜತೆಗೆ ಪ್ರತಿ ಪಡಿತರ ಚೀಟಿಗೆ ₹ 38ರ ದರದಲ್ಲಿ1 ಕೆ.ಜಿ ತೊಗರಿ ಬೇಳೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ನೋಂದಾಯಿತ ಎಪಿಎಲ್ ಕುಟುಂಬಗಳ ಏಕ ವ್ಯಕ್ತಿ ಪಡಿತರ ಚೀಟಿಗೆ 5 ಕೆ.ಜಿ ಅಕ್ಕಿ ಮತ್ತು ಹೆಚ್ಚಿನ ಕುಟುಂಬ ಸದಸ್ಯರಿರುವ ಪಡಿತರ ಚೀಟಿಗೆ 10 ಕೆ.ಜಿ ಅಕ್ಕಿ (ಕೆ.ಜಿಗೆ ₹ 15ರಂತೆ) ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಅಡುಗೆ ಅನಿಲ ಸಂಪರ್ಕವಿಲ್ಲದ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ತಿಂಗಳಿಗೆ ಪ್ರತಿ ಕಾರ್ಡ್‌ಗೆ 3 ಲೀಟರ್ ಸೀಮೆಎಣ್ಣೆ (ಲೀಟರ್‌ಗೆ ₹ 35ರಂತೆ) ನೀಡಲಾಗುತ್ತಿದೆ. ಅಡುಗೆ ಅನಿಲ ಸಂಪರ್ಕ ಹೊಂದಿರುವ ಪಡಿತರ ಚೀಟಿದಾರರಿಗೆ ತಲಾ 1 ಲೀಟರ್‌ ಸೀಮೆಎಣ್ಣೆ ವಿತರಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಬಯೋಮೆಟ್ರಿಕ್: ಪಡಿತರ ಆಹಾರಧಾನ್ಯಗಳ ದುರುಪಯೋಗ ತಡೆಗೆ ಸರ್ಕಾರವು ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿರುವ ಎಲ್ಲಾ ನ್ಯಾಯಬೆಲೆ ಅಂಗಡಿಗಳನ್ನು ಪಿಓಎಸ್ ಅಂಗಡಿಗಳಾಗಿ ಪರಿವರ್ತಿಸಲಾಗಿದೆ. ಪಡಿತರ ಚೀಟಿದಾರರು ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ ಬಯೋಮೆಟ್ರಿಕ್‌ ವ್ಯವಸ್ಥೆಗೆ ಬೆರಳಚ್ಚು ನೀಡಿ ಆಹಾರಧಾನ್ಯ ಪಡೆಯಬಹುದು. ಇದರಿಂದ ಪಡಿತರ ವಸ್ತುಗಳು ದುರ್ಬಳಕೆಯಾಗದೆ ನೇರವಾಗಿ ನೈಜ ಫಲಾನುಭವಿಗಳಿಗೆ ತಲುಪುತ್ತವೆ ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)