ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ವಿರುದ್ಧ ಭೂ ಕಬಳಿಕೆ ಪ್ರಕರಣ ವಜಾ ಇಲ್ಲ

ರೈತ ಸಂಘದ ನಳಿನಿಗೌಡ ಸ್ಪಷ್ಟನೆ
Last Updated 7 ಫೆಬ್ರುವರಿ 2023, 5:04 IST
ಅಕ್ಷರ ಗಾತ್ರ

ಬಂಗಾರಪೇಟೆ: ‘ಶಾಸಕ ಎಸ್.ಎನ್. ನಾರಾಯಣಸ್ವಾಮಿ ವಿರುದ್ಧ ನಾನು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಹೂಡಿರುವ ಪ್ರಕರಣವನ್ನು ನ್ಯಾಯಾಲಯ ವಜಾ ಮಾಡಿಲ್ಲ. ಮುಂದಿನ ಕ್ರಮಕ್ಕಾಗಿ ಹಾಗೆಯೇ ಉಳಿಸಿದೆ’ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಎ. ನಳಿನಿಗೌಡ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನನ್ನ ವಿರುದ್ಧದ ಭೂ ಕಬಳಿಕೆ ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದೆ ಎಂದು ಶಾಸಕರು ಹೇಳಿದ್ದಾರೆ. ಇದು ಸತ್ಯಕ್ಕೆ ದೂರವಾದ ಸಂಗತಿ’ ಎಂದರು.

ತಾಲ್ಲೂಕಿನ ಕೋಲಾರ ಮುಖ್ಯರಸ್ತೆಯಲ್ಲಿರುವ ಅನಿಗಾನಹಳ್ಳಿ ಸರ್ವೆ ನಂ. 36ರಲ್ಲಿ 35 ಗುಂಟೆ ಜಮೀನು ಒತ್ತುವರಿ ಆಗಿದೆ. ಇದನ್ನು ತೆರವುಗೊಳಿಸಬೇಕು ಎಂದು ಹಲವು ಬಾರಿ ರೈತ ಸಂಘದಿಂದ ಪ್ರತಿಭಟನೆ ಮಾಡುವ ಮೂಲಕ ತಾಲ್ಲೂಕು ಆಡಳಿತದ ಗಮನ ಸೆಳೆದಿದ್ದೆವು. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ನಾವು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಮೊರೆ ಹೋದೆವು ಎಂದು ತಿಳಿಸಿದರು.

2022ರ ಮಾರ್ಚ್‌ನಿಂದ ಇದುವರೆಗೂ ಕೋರ್ಟ್‌ 5 ವಿಚಾರಣಾ ದಿನಾಂಕ ನೀಡಿದೆ. ತಾಲ್ಲೂಕು ಆಡಳಿತ ಮತ್ತು ಉಪ ವಿಭಾಗಾಧಿಕಾರಿ ಮೂರು ವಿಚಾರಣಾ ದಿನಾಂಕಗಳಲ್ಲಿ ತಮಗೆ ಕಾಲಾವಕಾಶ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ ಎಂದರು.

ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮಕ್ಕೆ ಕಳೆದ ವರ್ಷ ತಿದ್ದುಪಡಿ ತರಲಾಗಿದೆ. ನಗರಸಭೆ ಪರಿಮಿತಿಯಿಂದ 5 ಕಿ.ಮೀ ವ್ಯಾಪ್ತಿ ಒಳಗಿನ ಭೂಮಿ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಪರಿಮಿತಿಯ 3 ಕಿ.ಮೀ ವ್ಯಾಪ್ತಿಯ ಒಳಗಿನ ಭೂಮಿ ಹೊರತುಪಡಿಸಿ ಇತರೆ ಪ್ರದೇಶಗಳಲ್ಲಿನ ಭೂ ಕಬಳಿಕೆಗೆ ಸಂಬಂಧಿಸಿದಂತೆ ಬಾಕಿ ಪ್ರಕರಣಗಳು ಮಾತ್ರ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಡಿ ಬರುತ್ತವೆಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ತಿಳಿಸಿದರು.

ಅದರಂತೆಯೇ ಜ. 9ರಂದು ತಹಶೀಲ್ದಾರ್‌ ಅವರು ಅನಿಗಾನಹಳ್ಳಿ ಸರ್ವೆ ನಂ 36ರಲ್ಲಿ ಸರ್ವೆ ಮಾಡಿದ್ದಾರೆ. ಒಟ್ಟು 35 ಗುಂಟೆ ಪೈಕಿ 0.14 ಗುಂಟೆ ಒತ್ತುವರಿ ಆಗಿದೆ. ಈ ಪ್ರದೇಶ ರಾಜ್ಯಪತ್ರದಲ್ಲಿ ಹೊರಡಿಸಿರುವ ವ್ಯಾಪ್ತಿಗೆ ಒಳಪಡುವುದಿಲ್ಲ. ಸದರಿ ಜಮೀನು ಬಂಗಾರಪೇಟೆ ಪುರಸಭಾ ವ್ಯಾಪ್ತಿಯಿಂದ 7 ಕಿ.ಮೀ ಮತ್ತು ಕೋಲಾರ ನಗರಸಭೆ ವ್ಯಾಪ್ತಿಯಿಂದ 7.5 ಕಿ.ಮೀ ಇರುವುದಾಗಿ ಉಪ ವಿಭಾಗಾಧಿಕಾರಿಗಳಿಗೆ ಲಿಖಿತ ಮಾಹಿತಿ ನೀಡಿದ್ದಾರೆ. ಆದರೆ, ಶಾಸಕರು ಕಳೆದ ವಾರ ಸುದ್ದಿಗೋಷ್ಠಿ ನಡೆಸಿ ಈ ಪ್ರಕರಣ ವಜಾ ಆಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT