ಸೋಮವಾರ, ಮೇ 17, 2021
23 °C
ಲೋಕಾಯುಕ್ತ– ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಭೇಟಿ

ಲಕ್ಷ್ಮೀಸಾಗರ ಕೆರೆ- ಕಾಲುವೆ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಸಿ ವ್ಯಾಲಿ ನೀರಿನಲ್ಲಿ ನೊರೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕೋಲಾರ ತಾಲ್ಲೂಕಿನ ಲಕ್ಷ್ಮೀಸಾಗರ ಕೆರೆ ಬಳಿಯ ನೀರಿನ ಕಾಲುವೆಯನ್ನು ಶುಕ್ರವಾರ ಪರಿಶೀಲಿಸಿದರು.

ಕೋಲಾರ: ಕೆ.ಸಿ ವ್ಯಾಲಿ ಯೋಜನೆ ನೀರಿನಲ್ಲಿ ನೊರೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಾಲ್ಲೂಕಿನ ಲಕ್ಷ್ಮೀಸಾಗರ ಕೆರೆ ಹಾಗೂ ಕಾಲುವೆ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು.

ನೊರೆ ಸಮಸ್ಯೆ ಸಂಬಂಧ ಯೋಜನೆಯ ಅಧಿಕಾರಿಗಳಿಂದ ಮಾಹಿತಿ ಪಡೆದ ಲೋಕಾಯುಕ್ತ ಎಸ್ಪಿ ಕೃಷ್ಣಮೂರ್ತಿ, ‘ಕೆ.ಸಿ ವ್ಯಾಲಿ ನೀರಿನಲ್ಲಿ ನೊರೆ ಕಾಣಿಸಿಕೊಂಡ ತಕ್ಷಣ ನೀರು ಹರಿಸುವುದನ್ನು ಸ್ಥಗಿತಗೊಳಿಸಿರುವುದರಿಂದ ಅಪಾಯ ತಪ್ಪಿದೆ’ ಎಂದು ಅಭಿಪ್ರಾಯಪಟ್ಟರು.  ‘ಬರಪೀಡಿತ ಜಿಲ್ಲೆಯ ನೀರಿನ ಸಮಸ್ಯೆ ಪರಿಹರಿಸಲು ಸರ್ಕಾರ ಕೆ.ಸಿ ವ್ಯಾಲಿ ಯೋಜನೆ ಅನುಷ್ಠಾನಗೊಳಿಸಿದೆ. ಯೋಜನೆ ನೀರಿನಿಂದ

ಏನಾದರೂ ಅಪಾಯ ಸಂಭವಿಸಬಹುದೇ ಎಂಬ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿ ನೀರು ಹರಿಸಬಹುದಿತ್ತು. ಆರಂಭದಲ್ಲೇ ನೊರೆ ಕಾಣಿಸಿಕೊಂಡಿರುವುದರಿಂದ ಜನ ಆತಂಕಗೊಂಡಿದ್ದಾರೆ’ ಎಂದರು.

‘ನೀರಿನ ಗುಣಮಟ್ಟದ ಬಗ್ಗೆ ತಿಳಿಸಲು ನಾನು ತಜ್ಞನಲ್ಲ. ಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳು ಸಂಸ್ಕರಿಸಿದ ತ್ಯಾಜ್ಯ ನೀರಿನ ಮಾದರಿ ಸಂಗ್ರಹಿಸಿ ಗುಣಮಟ್ಟ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಪ್ರಯೋಗಾಲಯದ ವರದಿ ಬಂದ ನಂತರ ನೀರಿನ ಗುಣಮಟ್ಟದ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ’ ಎಂದು ತಿಳಿಸಿದರು.

ನ್ಯಾಯಮೂರ್ತಿಗೆ ಮಾಹಿತಿ: ‘ಕೆರೆಗೆ ಹರಿದ ನೊರೆ ನೀರಿನಿಂದ ಮೀನು ಹಾಗೂ ಜಲಚರಗಳು ಸತ್ತಿರಬಹುದೇ ಎಂಬುದನ್ನು ಪರಿಶೀಲಿಸಿದ್ದೇವೆ. ಆದರೆ, ಆ ರೀತಿಯ ಅವಘಡ ನಡೆದಿಲ್ಲ. ಲಕ್ಷ್ಮೀಸಾಗರ ಕೆರೆ ಪರಿಶೀಲನೆ ಕುರಿತು ಲೋಕಾಯುಕ್ತ ನ್ಯಾಯಮೂರ್ತಿಗೆ ಮಾಹಿತಿ ನೀಡುತ್ತೇವೆ’ ಎಂದು ವಿವರಿಸಿದರು.

‘ಯೋಜನೆಯ ನೀರು ಸಂಸ್ಕರಣಾ ಘಟಕ, ಪಂಪ್ ಹೌಸ್ ಹಾಗೂ ಪೈಪ್‌ಲೈನ್‌ನಲ್ಲಿ ಏನಾದರೂ ಸಮಸ್ಯೆ ಇದ್ದರೆ ದುರಸ್ತಿ ಮಾಡಿದ ನಂತರವಷ್ಟೇ ಕೆರೆಗೆ ನೀರು ಹರಿಸಬೇಕು. ಯಾವುದೇ ಕಾರಣಕ್ಕೂ ನೊರೆ ಮಿಶ್ರಿತ ನೀರು ಹರಿಸಬಾರದು’ ಎಂದು ಸಣ್ಣ ನೀರಾವರಿ ಇಲಾಖೆ ಹಾಗೂ ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಕ್ಕೆ ವರದಿ: ‘ಯೋಜನೆ ನೀರಿನಿಂದ ಪರಿಸರಕ್ಕೆ ಹಾನಿಯಾಗದಂತೆ ಸಂಸ್ಕರಿತ ನೀರನ್ನು ಮಾತ್ರ ಕೆರೆಗೆ ಹರಿಸಲು ಸೂಚಿಸಲಾಗಿದೆ. ನೀರಿನಲ್ಲಿ ನೊರೆ ಕಾಣಿಸಿಕೊಳ್ಳಲು ಕಾರಣವೇನು ಎಂಬುದನ್ನು ಸ್ಪಷ್ಟಪಡಿಸುವಂತೆ ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸಂಸ್ಕರಣಾ ಘಟಕಗಳನ್ನು ಪರಿಶೀಲಿಸಿದ ನಂತರ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ’ ಎಂದು ಜಿಲ್ಲಾ ಪರಿಸರ ಅಧಿಕಾರಿ ಸಿ.ಆರ್.ಮಂಜುನಾಥ್ ಹೇಳಿದರು.

ಸಣ್ಣ ನೀರಾವರಿ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್‌ ಎಸ್‌.ಎನ್‌.ಕೃಷ್ಣಪ್ಪ, ಸಹಾಯಕ ಪರಿಸರ ಅಧಿಕಾರಿ ಮೃತ್ಯುಂಜಯ, ಮೆಗಾ ಕಂಪನಿ ತಾಂತ್ರಿಕ ವಿಭಾಗದ ಎಂಜಿನಿಯರ್ ವಿಜಯ್‌ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು