ಜೆಡಿಎಸ್‌ ಬೆಂಬಲಿತ ಸದಸ್ಯ ನಾರಾಯಣಸ್ವಾಮಿಗೆ ಅಧ್ಯಕ್ಷಗಾದಿ

7
ನಗರಸಭೆ ಸ್ಥಾಯಿ ಸಮಿತಿ ಚುನಾವಣೆ: ಕಾಂಗ್ರೆಸ್‌ ಪಾಳಯಕ್ಕೆ ಮುಖಭಂಗ

ಜೆಡಿಎಸ್‌ ಬೆಂಬಲಿತ ಸದಸ್ಯ ನಾರಾಯಣಸ್ವಾಮಿಗೆ ಅಧ್ಯಕ್ಷಗಾದಿ

Published:
Updated:
Deccan Herald

ಕೋಲಾರ: ನಗರಸಭೆ ಸ್ಥಾಯಿ ಸಮಿತಿಗೆ ಇಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯ ನಾರಾಯಣಸ್ವಾಮಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದು, ಅಧ್ಯಕ್ಷಗಾದಿ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್‌ ಪಾಳಯಕ್ಕೆ ಮುಖಭಂಗವಾಗಿದೆ.

ಸಮಿತಿಯ 9 ಸದಸ್ಯರ ಸ್ಥಾನಕ್ಕೆ ಮೊದಲು ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ 8 ಸದಸ್ಯರು ಹಾಗೂ ಸಿಪಿಎಂ ಬೆಂಬಲಿತ ಸದಸ್ಯ ನಾರಾಯಣಸ್ವಾಮಿ ಆಯ್ಕೆಯಾದರು. ಬಳಿಕ ಈ 9 ಮಂದಿಯಲ್ಲಿ ನಾರಾಯಣಸ್ವಾಮಿ ಅಧ್ಯಕ್ಷರಾಗಿ ಆಯ್ಕೆಯಾದರು.

ಚುನಾವಣಾ ಕಣದಲ್ಲಿದ್ದ ಜೆಡಿಎಸ್‌ ಪಾಳಯದ 8 ಮಂದಿಗೆ ತಲಾ 18 ಮತಗಳು ಲಭಿಸಿದವು. ನಾರಾಯಣಸ್ವಾಮಿ ಪರ 19 ಮತ ಚಲಾವಣೆಯಾದವು. ಕಾಂಗ್ರೆಸ್ ಪಾಳಯದಿಂದ ಸ್ಪರ್ಧಿಸಿದ್ದ 8 ಮಂದಿ ಪೈಕಿ 5 ಸದಸ್ಯರು ತಲಾ 14 ಮತ ಪಡೆದರು. ಇಬ್ಬರು ಸದಸ್ಯರು ತಲಾ 12 ಹಾಗೂ ಮತ್ತೊಬ್ಬ ಸದಸ್ಯರು 13 ಮತ ಗಳಿಸಿದರು.

ಸಂಸದರು, ಕ್ಷೇತ್ರದ ಶಾಸಕರು ಹಾಗೂ ನಗರಸಭೆಯ 35 ಮಂದಿ ಚುನಾಯಿತ ಸದಸ್ಯರು ಸೇರಿದಂತೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಒಟ್ಟು 37 ಮಂದಿಗೆ ಮತ ಚಲಾಯಿಸುವ ಹಕ್ಕಿದೆ. ಒಬ್ಬೊಬ್ಬ ಸದಸ್ಯರಿಗೂ ತಲಾ 9 ಮತ ಹಾಕುವ ಅವಕಾಶ ನೀಡಲಾಗಿತ್ತು. ನಗರಸಭೆ ಸದಸ್ಯರ ಪೈಕಿ 4 ಮಂದಿ ಹಾಗೂ ಸಂಸದ ಕೆ.ಎಚ್‌.ಮುನಿಯಪ್ಪ ಅವರು ಮತ ಹಾಕಲಿಲ್ಲ. ಶಾಸಕ ಕೆ.ಶ್ರೀನಿವಾಸಗೌಡ ಮತ್ತು ನಗರಸಭೆಯ 31 ಸದಸ್ಯರು ಮತ ಚಲಾಯಿಸಿದರು.

ಹೋಟೆಲ್‌ ವಾಸ್ತವ್ಯ: ಸ್ಥಾಯಿ ಸಮಿತಿ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಾಳಯದ ಸದಸ್ಯರು ಜೆಡಿಎಸ್‌ ಬೆಂಬಲಿತ ಸದಸ್ಯರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡಿದ್ದರು. ಇದರ ಸುಳಿವು ಅರಿತ ಜೆಡಿಎಸ್‌ ಮುಖಂಡರು ತಮ್ಮ ಪಕ್ಷದ ಸದಸ್ಯರನ್ನು ಬುಧವಾರ (ಜುಲೈ 8) ಸಂಜೆಯೇ ಕೆಜಿಎಫ್‌ನ ಸಿಲ್ವನ್‌ ವಿಲ್ಲಾ ಹೋಟೆಲ್‌ಗೆ ಕರೆದೊಯ್ದಿಯ್ದರು. ಪಕ್ಷದ ಸದಸ್ಯರು ಕಾಂಗ್ರೆಸ್‌ ಮುಖಂಡರ ಸಂಪರ್ಕಕ್ಕೆ ಸಿಗದಂತೆ ಜೆಡಿಎಸ್‌ ಮುಖಂಡರು ಕಟ್ಟೆಚ್ಚರ ವಹಿಸಿದ್ದರು. ಗುರುವಾರ ಮಧ್ಯಾಹ್ನ ಸದಸ್ಯರನ್ನು ನಾಲ್ಕೈದು ಕಾರುಗಳಲ್ಲಿ ಹೋಟೆಲ್‌ನಿಂದ ನೇರವಾಗಿ ನಗರಸಭೆಗೆ ಕರೆತಂದು ಮತ ಹಾಕಿಸಿದರು.

ಜೆಡಿಎಸ್‌ ಸಂಭ್ರಮಾಚರಣೆ: ಸಮಿತಿ ಸದಸ್ಯರ ಆಯ್ಕೆಗೆ ಬೆಳಿಗ್ಗೆ 10 ಗಂಟೆಗೆ ಆರಂಭವಾದ ಚುನಾವಣೆ ಪ್ರಕ್ರಿಯೆ ಮಧ್ಯಾಹ್ನ 2ಕ್ಕೆ ಕೊನೆಗೊಂಡಿತು. ನಂತರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು, ನಾರಾಯಣಸ್ವಾಮಿ ಅವರು ಆಯ್ಕೆಯಾಗಿರುವುದಾಗಿ ನಗರಸಭೆ ಆಯುಕ್ತ ಸತ್ಯನಾರಾಯಣ ಘೋಷಿಸಿದರು.

ಬಳಿಕ ಜೆಡಿಎಸ್‌ ಸದಸ್ಯರು ನಗರಸಭೆ ಆವರಣದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನಂತರ ಶಾಸಕ ಶ್ರೀನಿವಾಸಗೌಡರ ನಿವಾಸಕ್ಕೆ ತೆರಳಿ ಅವರಿಗೆ ಹೂವಿನ ಹಾರ ಹಾಕಿ ಜೈಕಾರ ಕೂಗಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !