ಸೋಮವಾರ, ಆಗಸ್ಟ್ 26, 2019
28 °C
ದೀನದಯಾಳ್ ಅಂತ್ಯೋದಯ ಯೋಜನೆ: ಸಾಲ ಕೊಡಿಸುವ ನೆಪದಲ್ಲಿ ವಂಚನೆ

ಸೈಬರ್‌ ಸೆಂಟರ್‌ಗಳಿಗೆ ಬೀಗಮುದ್ರೆ

Published:
Updated:
Prajavani

ಕೋಲಾರ: ದೀನದಯಾಳ್ ಅಂತ್ಯೋದಯ ಯೋಜನೆಯಡಿ ಸಾಲ ಕೊಡಿಸುವುದಾಗಿ ಆನ್‌ಲೈನ್‌ನಲ್ಲಿ ಅರ್ಜಿ ಹಾಕಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ನಗರದ ಸೈಬರ್‌ ಸೆಂಟರ್‌ಗಳ ಮೇಲೆ ನಗರಸಭೆ ಅಧಿಕಾರಿಗಳು ಬುಧವಾರ ದಿಢೀರ್‌ ದಾಳಿ ನಡೆಸಿ ಬೀಗಮುದ್ರೆ ಹಾಕಿದರು.

ನಗರಸಭೆಯ ಸಮುದಾಯ ಸಂಘಟನಾ ಅಧಿಕಾರಿ (ಸಿಎಒ) ಶಿವಪ್ರಕಾಶ್ ನೇತೃತ್ವದಲ್ಲಿ ಅಧಿಕಾರಿಗಳು ಮೆಕ್ಕೆ ವೃತ್ತದಲ್ಲಿನ ಮೇರಿಯಮ್ಮ ಕಾಂಪ್ಲೆಕ್ಸ್ ಹಾಗೂ ಅಂಚೆ ಕಚೇರಿ ರಸ್ತೆಯಲ್ಲಿನ ಸೈಬರ್‌ ಸೆಂಟರ್‌ಗಳ ಮೇಲೆ ದಾಳಿ ನಡೆಸಿದರು. ದೀನದಯಾಳ್ ಅಂತ್ಯೋದಯ ಯೋಜನೆಯ ವೆಬ್‌ಸೈಟ್‌ ಬಳಕೆ ಮಾಡುತ್ತಿದ್ದ ಸೆಂಟರ್‌ನ ಮಾಲೀಕರನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು.

ದೀನದಯಾಳ್ ಅಂತ್ಯೋದಯ ಯೋಜನೆಯಡಿ ನಗರದ ವ್ಯಾಪ್ತಿಯ ನಿರುದ್ಯೋಗಿಗಳಿಗೆ ಕೌಶಲ ತರಬೇತಿ ನೀಡಲಾಗುತ್ತದೆ. ಸೈಬರ್‌ ಸೆಂಟರ್‌ನವರು ಸಾಲದ ಆಕಾಂಕ್ಷಿಗಳ ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಡಿತರ ಚೀಟಿಯ ಜೆರಾಕ್ಸ್ ಪ್ರತಿ ಪಡೆದು ಅರ್ಜಿ ಸಲ್ಲಿಸುತ್ತಿದ್ದರು. ಯೋಜನೆಯಡಿ ಅರ್ಜಿ ಹಾಕಿದರೆ ₹ 25 ಲಕ್ಷದವರೆಗೆ ಸಾಲ ಸಿಗುತ್ತದೆ ಎಂದು ಸುಳ್ಳು ಹೇಳುತ್ತಿದ್ದರು.

ಮಹಿಳೆಯರು, ರೈತರು, ಕಾರ್ಮಿಕರು ಹಾಗೂ ನಿರುದ್ಯೋಗಿ ಯುವಕ ಯುವತಿಯರು ಸೈಬರ್‌ ಸೆಂಟರ್‌ ಮಾಲೀಕರ ಮಾತು ನಂಬಿ ತಮ್ಮ ದಾಖಲೆಪತ್ರಗಳೊಂದಿಗೆ ಸೈಬರ್‌ ಸೆಂಟರ್‌ಗಳ ಮುಂದೆ ಸಾಲುಗಟ್ಟಿ ನಿಂತು ಅರ್ಜಿ ಸಲ್ಲಿಸುತ್ತಿದ್ದರು.

₹ 100 ವಸೂಲಿ: ಗಾರೆ ಮೇಸ್ತ್ರಿ, ಚಾಲಕರು, ರೈತರು, ವ್ಯಾಪಾರಿಗಳು, ಸೀಮೆ ಹಸು ಹಾಗೂ ಆಟೊ ಖರೀದಿ, ದಿನಸಿ ಅಂಗಡಿ ತೆರೆಯಲು, ತರಕಾರಿ ವ್ಯಾಪಾರಕ್ಕೆ, ಟೈಲರಿಂಗ್, ಪೇಟಿಂಗ್‌, ಬ್ಯೂಟಿ ಪಾರ್ಲರ್ ಕೆಲಸ ಮಾಡುವವರು ಸಾಲಕ್ಕೆ ಅರ್ಹರಾಗಿದ್ದು, ಅರ್ಜಿ ಸಲ್ಲಿಸಬಹುದೆಂದು ಸೈಬರ್‌ ಸೆಂಟರ್‌ ಮಾಲೀಕರು ಕರಪತ್ರ ಅಂಟಿಸಿದ್ದರು. ಅರ್ಜಿ ಹಾಕಲು ಬಂದ ಸಾರ್ವಜನಿಕರಿಂದ ತಲಾ ₹ 100 ವಸೂಲಿ ಮಾಡುತ್ತಿದ್ದರು.

ಈ ಬಗ್ಗೆ ಮಾಹಿತಿ ಕಲೆಹಾಕಿದ ಅಧಿಕಾರಿಗಳು ಸೆಂಟರ್‌ಗಳ ಮೇಲೆ ದಾಳಿ ನಡೆಸಿ, ‘ಯೋಜನೆಯ ವೆಬ್‌ಸೈಟ್‌ ಬಳಕೆಯ ಮಾಹಿತಿ ಯಾರು ಕೊಟ್ಟಿದ್ದು’ ಎಂದು ಮಾಲೀಕರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮಾಲೀಕರು, ‘ಬಿಜೆಪಿ ಮುಖಂಡರು ಮಾಹಿತಿ ನೀಡಿದರು’ ಎಂದು ಹೇಳಿದರು.

ದಾಳಿ ವೇಳೆ ಕೆಲ ಸೈಬರ್‌ ಮಳಿಗೆಗಳ ಮಾಲೀಕರು ವಾಣಿಜ್ಯ ಪರವಾನಗಿ ಪಡೆಯದೆ ವಹಿವಾಟು ನಡೆಸುತ್ತಿರುವ ಸಂಗತಿ ಬೆಳಕಿಗೆ ಬಂದಿತ್ತು. ಸಾರ್ವಜನಿಕರನ್ನು ವಂಚಿಸುತ್ತಿದ್ದ ಹಾಗೂ ವಾಣಿಜ್ಯ ಪರವಾನಗಿ ಇಲ್ಲದ ಸೈಬರ್‌ ಮಳಿಗೆಗಳಿಗೆ ಅಧಿಕಾರಿಗಳು ಬೀಗಮುದ್ರೆ ಹಾಕಿದರು. ಅಲ್ಲದೇ, ಆ ಮಳಿಗೆಗಳ ಮಾಲೀಕರಿಗೆ ದಂಡ ವಿಧಿಸಿದರು. ಕಂದಾಯ ಅಧಿಕಾರಿ ಚಂದ್ರು, ನಿರೀಕ್ಷಕ ತ್ಯಾಗರಾಜ್ ಹಾಜರಿದ್ದರು.

Post Comments (+)