ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಪರಿಶಿಷ್ಟ ಜಾತಿಯ ಎಡಗೈ–ಬಲಗೈ ವಾದ

ರಾಜ್ಯದ ಐದು ಪರಿಶಿಷ್ಟ ಜಾತಿಯ ಲೋಕಸಭಾ ಕ್ಷೇತ್ರ–ಈಗಾಗಲೇ 2 ಬಲಗೈ, 1 ಎಡಗೈಗೆ ಘೋಷಣೆ
Published 28 ಮಾರ್ಚ್ 2024, 5:47 IST
Last Updated 28 ಮಾರ್ಚ್ 2024, 5:47 IST
ಅಕ್ಷರ ಗಾತ್ರ

ಕೋಲಾರ: ರಾಜ್ಯದ ಐದು ಪರಿಶಿಷ್ಟ ಜಾತಿಯ ಲೋಕಸಭಾ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯದಡಿ ಕೋಲಾರ ಸೇರಿದಂತೆ ಎರಡು ಕ್ಷೇತ್ರಗಳಲ್ಲಿ ಎಡಗೈ ಸಮುದಾಯಕ್ಕೆ ಟಿಕೆಟ್‌ ಕೊಡಬೇಕೆಂದು ಸಚಿವ ಕೆ.ಎಚ್‌.ಮುನಿಯಪ್ಪ ಪಟ್ಟು ಹಿಡಿದಿದ್ದಾರೆ.

ಈ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವರಿಕೆ ಮಾಡಿದ್ದು, ಕೋಲಾರ ಮೀಸಲು ಕ್ಷೇತ್ರದಲ್ಲಿ ತಮ್ಮ ಅಳಿಯ ಕೆ.ಜಿ.ಚಿಕ್ಕಪೆದ್ದಣ್ಣ ಅವರಿಗೆ ಬಹುತೇಕ ಟಿಕೆಟ್‌ ನಿಗದಿಮಾಡಿಕೊಂಡಿದ್ದಾರೆ ಎಂಬುದು ಗೊತ್ತಾಗಿದೆ. ಕೆ.ಎಚ್‌.ಮುನಿಯಪ್ಪ ಕೂಡ ಎಡಗೈ ಸಮುದಾಯಕ್ಕೆ ಸೇರಿದವರು.

‘ಕಾಂಗ್ರೆಸ್‌ನಲ್ಲಿ ಎರಡು ಕ್ಷೇತ್ರ ದಲಿತ ಬಲಗೈ, ಎರಡು ಕ್ಷೇತ್ರ ಎಡಗೈ ಹಾಗೂ ಒಂದು ಭೋವಿ‌‌‌ ಅಥವಾ ಲಂಬಾಣಿ ಸಮುದಾಯಕ್ಕೆ ನೀಡುವುದು ಸಾಮಾನ್ಯವಾಗಿ ನಡೆದುಕೊಂಡು ಬಂದಿದೆ. ಈ ಬಾರಿ ಮೂರು ಕ್ಷೇತ್ರಗಳಲ್ಲಿ ಬಲಗೈ ಸಮುದಾಯಕ್ಕೆ ಟಿಕೆಟ್‌ ನೀಡಲಾಗುತ್ತಿದೆ. ಇನ್ನೆರಡು ಕ್ಷೇತ್ರಗಳಲ್ಲಿ ಎಡಗೈ ಸಮುದಾಯಕ್ಕೆ ಟಿಕೆಟ್‌ ನೀಡಬೇಕೆಂಬ ಅಭಿಪ್ರಾಯವಿದೆ’ ಎಂದು ಮಂಗಳವಾರಷ್ಟೇ ಅವರು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಹೇಳಿದ್ದರು.

ಈಗಾಗಲೇ ವಿಜಯಪುರ, ಕಲಬುರಗಿ ಕ್ಷೇತ್ರದಲ್ಲಿ ಬಲಗೈ ಸಮುದಾಯದವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿದೆ. ಚಾಮರಾಜನಗರದಲ್ಲೂ ಬಲಗೈ ಸಮುದಾಯಕ್ಕೆ (ಡಾ.ಎಚ್‌.ಸಿ.ಮಹದೇವಪ್ಪ ಪುತ್ರ ಸುನಿಲ್‌ ಬೋಸ್‌) ಸಿಗುವ ಸಾಧ್ಯತೆ ಇದೆ. ಚಿತ್ರದುರ್ಗದಲ್ಲಿ ಎಡಗೈ ಸಮುದಾಯಕ್ಕೆ (ಬಿ.ಎನ್‌.ಚಂದ್ರಪ್ಪ) ಸಿಕ್ಕಿದ್ದು, 3 ಬಲ+2 ಎಡ ಲೆಕ್ಕಾಚಾರದಲ್ಲಿ ಕೋಲಾರದಲ್ಲೂ ಎಡಗೈ ಸಮುದಾಯಕ್ಕೆ ಸಿಗಬೇಕು ಎಂಬುದು ಅವರ ವಾದವಾಗಿದೆ.‌

ಈ ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾದರೆ ಎಲ್ಲಾ 28 ಕ್ಷೇತ್ರಗಳಲ್ಲಿ ತೊಂದರೆ ಆಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ರವಾನಿಸಿರುವುದು ಗೊತ್ತಾಗಿದೆ.

ಕೋಲಾರ ಕ್ಷೇತ್ರದ ಟಿಕೆಟ್‌ಗಾಗಿ ಹಕ್ಕೊತ್ತಾಯ ಮಾಡುತ್ತಿರುವ ರಾಜ್ಯಸಭೆ ಮಾಜಿ ಸದಸ್ಯ ಎಲ್‌.ಹನುಮಂತಯ್ಯ ಕೂಡ ಎಡಗೈ ಸಮುದಾಯದವರು.

ವಿಧಾನಸಭೆಯಿಂದ ರಾಜ್ಯಸಭೆಗೆ ಈಚೆಗೆ ನಡೆದ ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಮರು ಆಯ್ಕೆಗೆ ಅವಕಾಶ ನೀಡಿರಲಿಲ್ಲ. ಈ ಸಂಬಂಧ ಮಾದಿಗ ಸಮುದಾಯದ ಆಕ್ಷೇಪವೂ ವ್ಯಕ್ತವಾಗಿತ್ತು, ಈ ಹಿನ್ನೆಲೆಯಲ್ಲಿ ಅವರನ್ನು ಕಣಕ್ಕಿಳಿಸಲು ಚರ್ಚೆ ನಡೆದಿತ್ತು. ಈಚೆಗೆ ಅವರನ್ನು ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಕೋಲಾರ ಕ್ಷೇತ್ರದಲ್ಲಿ ಸತತವಾಗಿ ಎಂಟು ಬಾರಿ ಸ್ಪರ್ಧಿಸಿರುವ ಕೆ.ಎಚ್‌.ಮುನಿಯಪ್ಪ ಅಥವಾ ಅವರ ಕುಟುಂಬದ ಸ್ಪರ್ಧೆಗೆ ವಿರೋಧಿಸುತ್ತಿರುವ ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್ ಬಣದವರು ಬಲಗೈ ಸಮುದಾಯಕ್ಕೆ ಟಿಕೆಟ್‌ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ.

ಈ ಬಣದವರು ದಲಿತ ಹೋರಾಟಗಾರ ಸಿ.ಎಂ.ಮುನಿಯಪ್ಪ ಅವರನ್ನು ಕಣಕ್ಕಿಳಿಸಬೇಕೆಂದು ಲಾಬಿ ನಡೆಸಿದ್ದಾರೆ.

ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶ್ರೀನಿವಾಸಪುರ, ಮುಳಬಾಗಿಲು, ಕೆಜಿಎಫ್‌, ಬಂಗಾರಪೇಟೆ, ಕೋಲಾರ, ಮಾಲೂರು ಅಲ್ಲದೇ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಪರಿಶಿಷ್ಟ ಜಾತಿಯ ಮತದಾರರಲ್ಲಿ ಬಲಗೈ ಸಮುದಾಯದವರು ಶೇ 75 ಇದ್ದಾರೆ ಎಂಬ ವಾದ ಮುಂದಿಟ್ಟಿದ್ದಾರೆ. ಈ ಕ್ಷೇತ್ರದಲ್ಲಿ 1952ರಿಂದ ಈವರೆಗೆ ಬಲಗೈ ಸಮುದಾಯಕ್ಕೆ ಟಿಕೆಟ್‌ ಲಭಿಸಿಲ್ಲ.

‌‘ನಮ್ಮ ಉದ್ದೇಶ ಈ ಬಾರಿ ಬಲಗೈ ಸಮುದಾಯಕ್ಕೆ ಟಿಕೆಟ್‌ ಸಿಗಬೇಕು. ಈ ಸಮುದಾಯದವರಿಗೆ ಆರಂಭಿಕ ಚುನಾವಣೆಯಿಂದ ಈ ವರೆಗೆ ಕೋಲಾರ ಕ್ಷೇತ್ರದಲ್ಲಿ ಟಿಕೆಟ್‌ ನೀಡಿಲ್ಲ. ಕೋಲಾರ ಕ್ಷೇತ್ರದಲ್ಲಿ 2019ರ ಚುನಾವಣೆ ರೀತಿಯ ತಪ್ಪುಗಳು ಮರುಕಳಿಸಬಾರದು ಎಂದರೆ ಮುನಿಯಪ್ಪ ಅಥವಾ ಅವರ ಕುಟುಂಬಕ್ಕೆ ಟಿಕೆಟ್‌ ನೀಡಬಾರದೆಂದು ಒತ್ತಾಯಿಸಿದ್ದೇವೆ’ ಎಂದು ಕೊತ್ತೂರು ಮಂಜುನಾಥ್‌ ಹೇಳಿದರು.

ಚುನಾವಣೆ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಬಲಗೈ ಸಮುದಾಯದ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಟಿಕೆಟ್‌ಗೆ ಒತ್ತಾಯಿಸುತ್ತಲೇ ಇದ್ದಾರೆ. ಅವರಿಗೆ ತಿರುಗೇಟು ನೀಡಿ ಎಡಗೈ ಸಮುದಾಯದ ಮುಖಂಡರೂ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ.

ರಮೇಶ್‌ ಕುಮಾರ್‌ ಬಣದಿಂದ ಬಲಗೈ ಸಮುದಾಯಕ್ಕೆ ಟಿಕೆಟ್‌ಗೆ ಪಟ್ಟು ಎಡಗೈ ಸಮುದಾಯದ ತಮ್ಮ ಕುಟುಂಬಕ್ಕೆ ಕೊಡಿ–ಕೆ.ಎಚ್‌.ಮುನಿಯಪ್ಪ ವಾದ ಟಿಕೆಟ್‌ ರೇಸ್‌ನಲ್ಲಿ ಎಡಗೈ ಸಮುದಾಯದ ಹನುಮಂತಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT