ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿನಿ ಉದ್ಯೋಗ ಮೇಳ ನಡೆಸಿ: ಪ್ರಭಾರ ಜಿಲ್ಲಾಧಿಕಾರಿ ದರ್ಶನ್ ಸೂಚನೆ

Last Updated 25 ಫೆಬ್ರುವರಿ 2020, 13:43 IST
ಅಕ್ಷರ ಗಾತ್ರ

ಕೋಲಾರ: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ನಗರದಲ್ಲಿ ಮಿನಿ ಉದ್ಯೋಗ ಮೇಳ ನಡೆಸಿ’ ಎಂದು ಜಿಲ್ಲಾಧಿಕಾರಿ (ಪ್ರಭಾರ) ಎಚ್.ವಿ.ದರ್ಶನ್ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಮಂಗಳವಾರ ನಡೆದ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಪದವಿ ಪಡೆದ ಸಾಕಷ್ಟು ವಿದ್ಯಾರ್ಥಿಗಳು ಜಿಲ್ಲೆಯಲ್ಲಿದ್ದಾರೆ. ವೈದ್ಯಕೀಯ ಕೋರ್ಸ್‌ಗೆ ಸಂಬಂಧಪಟ್ಟಂತೆ ಜಿಲ್ಲೆಗೆ 82 ಮಂದಿ ಆಯ್ಕೆ ಮಾಡುವ ಗುರಿ ನೀಡಿದ್ದು, ವ್ಯಾಪಕ ಪ್ರಚಾರ ನಡೆಸಬೇಕು’ ಎಂದು ಹೇಳಿದರು.

‘ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಮತ್ತು ಗಿರಿಜನ ಉಪ ಯೋಜನೆಯಡಿ (ಟಿಎಸ್‌ಪಿ) ನಿರುದ್ಯೋಗಿಗಳಿಗೆ ಕೆಲಸ ನೀಡಲು ರಾಜ್ಯದ 3 ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು ಮುಂದೆ ಬಂದಿವೆ. ಈ ಹಿನ್ನೆಲೆಯಲ್ಲಿ ಮಿನಿ ಉದ್ಯೋಗ ಮೇಳ ನಡೆಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್‌.ವಿಜಯ್‌ಕುಮಾರ್ ವಿವರಿಸಿದರು.

‘ಬೆಂಗಳೂರಿನಲ್ಲಿರುವ ಅಪೋಲೊ, ಎಂ.ಎಸ್ ರಾಮಯ್ಯ ಹಾಗೂ ನಾರಾಯಣ ಹೃದಯಾಲಯ ಆಸ್ಪತ್ರೆಗಳು 242 ಮಂದಿಗೆ ಕೆಲಸ ನೀಡುವುದಾಗಿ ಹೇಳಿವೆ. ಇಲಾಖೆಯಿಂದ ಉದ್ಯೋಗ ಮೇಳ ಆಯೋಜನೆ ಮಾಡಿದರೆ ಆ ಆಸ್ಪತ್ರೆಯವರೇ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ’ ಎಂದು ಮಾಹಿತಿ ನೀಡಿದರು.

ಕೌಶಲ ತರಬೇತಿ: ‘18 ವರ್ಷದಿಂದ 35 ವರ್ಷ ವಯೋಮಾನದ ನಿರುದ್ಯೋಗಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು. ಪಿಯುಸಿ ಓದಿರುವ ಹಾಗೂ ನರ್ಸಿಂಗ್ ಪದವಿ ಪಡೆದಿರುವ ಸಾಕಷ್ಟು ನಿರುದ್ಯೋಗಿಗಳು ಜಿಲ್ಲೆಯಲ್ಲಿದ್ದಾರೆ. ಇವರಿಗೆ ಕೌಶಲ ತರಬೇತಿ ನೀಡಲಾಗುವುದು. ತರಬೇತಿ ಕಾರ್ಯಕ್ರಮದಲ್ಲಿ ಶೇ 50ರಷ್ಟು ಸೌಕರ್ಯವನ್ನು ಮಹಿಳೆಯರಿಗೂ ಮೀಸಲಿಡುತ್ತೇವೆ’ ಎಂದು ಹೇಳಿದರು.

‘ಉದ್ಯೋಗ ಮೇಳದ ಸಂಬಂಧ ಶೀಘ್ರವೇ ಪ್ರಕಟಣೆ ನೀಡಿ. ಉದ್ಯೋಗ ಆಕಾಂಕ್ಷಿಗಳು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆಯನ್ನು ಸಂಪರ್ಕಿಸಿ ವೈದ್ಯಕೀಯ ಕೋರ್ಸ್‌ಗಳನ್ನು ಓದಿರುವವರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಿರಿ. ಪಟ್ಟಿಯಲ್ಲಿ ಅರ್ಹರಿದ್ದರೆ ಗುರುತಿಸಿ ಕೆಲಸ ಕೊಡಿಸಬೇಕು’ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್‌, ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT