ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗ ಪತ್ತೆ ನಿಷೇಧ ಕಾಯ್ದೆ ಬಗ್ಗೆ ಅರಿವು ಮೂಡಿಸಿ

ಲಿಂಗ ಆಯ್ಕೆಯ ನಿಷೇಧದ ಕುರಿತ ಮಾಹಿತಿ ಕಾರ್ಯಾಗಾರ
Last Updated 28 ಮೇ 2019, 11:30 IST
ಅಕ್ಷರ ಗಾತ್ರ

ಕೋಲಾರ: ‘ಹೊಸ ವೈದ್ಯರಿಗೆ ಹೆಣ್ಣು ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆಯ ಬಗ್ಗೆ ಅರಿವು ಮೂಡಿಸಿದಾಗ ಲಿಂಗ ಅಸಮಾನತೆ ನಿವಾರಣೆ ಮಾಡಲು ಸಾಧ್ಯ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಎಚ್.ಗಂಗಾಧರ್ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನಗರದ ಆರೋಗ್ಯ ಇಲಾಖೆ ಸಭಾಗಂಣದಲ್ಲಿ ಮಂಗಳವಾರ ನಡೆದ ಲಿಂಗ ಆಯ್ಕೆಯ ನಿಷೇಧದ ಕುರಿತ ಜಿಲ್ಲಾ ಮಟ್ಟದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘ವೈದ್ಯರು ಆಮಿಷಕ್ಕೆ ಒಳಗಾಗದೆ ಹೆಣ್ಣು ಭ್ರೂಣ ಲಿಂಗ ಪತ್ತೆ ಕಾನೂನು ಬಾಹಿರ ಎಂಬುದನ್ನು ಮನವರಿಕೆ ಮಾಡಿಕೊಡುವ ಮೂಲಕ ಲಿಂಗ ಅಸಮಾನತೆ ನಿವಾರಿಸಲು ಸಹಕರಿಸಬೇಕು’ ಎಂದು ಸಲಹೆ ನೀಡಿದರು.

‘ಭ್ರೂಣ ಲಿಂಗ ಪತ್ತೆ ಜಾಹೀರಾತಿಗೆ, ವೈದ್ಯರಿಗೆ ಮೊದಲ ಪ್ರಕರಣದಲ್ಲಿ 3 ವರ್ಷ ಜೈಲು ಶಿಕ್ಷೆ, ₨ 10 ಸಾವಿರ ದಂಡ, ಪುನರಾವರ್ತನೆಯಾದಲ್ಲಿ 5 ವರ್ಷ ಜೈಲು ₨ 50 ಸಾವಿರ ದಂಡ, ವೈದ್ಯ ವೃತ್ತಿ ಮಾಡದಂತೆ ನಿರ್ಬಂಧ ಇಲ್ಲವೇ ವೈದ್ಯಕೀಯ ಮಂಡಳಿಯಿಂದ ಶಾಶ್ವತವಾಗಿ ಕೈ ಬಿಡಲಾಗುವುದು. ಜತೆಗೆ ಸ್ಕ್ಯಾನಿಂಗ್ ಸೆಂಟರ್‌ನ ಪರವಾನಗಿ ರದ್ದುಪಡಿಸುವ ಮೂಲಕ ಕಠಿಣ ಕ್ರಮಕೈಗೊಳ್ಳಲಾಗುವುದು’ ಎಂದು ವಿವರಿಸಿದರು.

ದೇಶದಲ್ಲಿ 2001ರ ವೇಳೆಗೆ ಲಿಂಗಾನುಪಾತ 1,000: 933 ಇತ್ತು. 2,011ರ ವೇಳೆಗೆ 940ಕ್ಕೆ ಏರಿಕೆಯಾದರೂ ಇನ್ನಷ್ಟು ಸುಧಾರಿಸಬೇಕಿದ್ದು, ವೈದ್ಯರ ಮೇಲೆ ಹೆಚ್ಚು ಜವಾಬ್ದಾರಿಯಿದೆ ಎಂದು ತಿಳಿಸಿದರು.

ಹೆಣ್ಣು ಭ್ರೂಣ ಹತ್ಯೆ ನಿಷೇಧ ಸಂಬಂಧ 1994ರಲ್ಲಿ ಕಾಯಿದೆ ರೂಪಿಸಲಾಯಿತು. 2003ರಲ್ಲಿ ತಿದ್ದುಪಡಿ ತಂದ ಕಾಯಿದೆಗೆ 2011ರಲ್ಲಿ ಸಮಗ್ರ ತಿದ್ದುಪಡಿ ತಂದು ಕಾನೂನು ಜಾರಿಗೊಳಿಸಲಾಗಿದೆ. ವೈದ್ಯರು, ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಆಮಿಷಕ್ಕೆ ಒಳಗಾಗಿ ಇಲ್ಲವೇ ಒತ್ತಾಯಕ್ಕೆ ಭ್ರೂಣ ಲಿಂಗ ಪತ್ತೆ ಮಾಡಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ವಿಜಯಕುಮಾರ್ ಮಾತನಾಡಿ, ‘ಭ್ರೂಣ ಲಿಂಗ ಪತ್ತೆ ತಡೆಯ ಸಂಬಂಧ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿ ಇದೆ. ಕಾನೂನು ಉಲ್ಲಂಘಿಸುವ ವಿರುದ್ದ ಕ್ರಮ ಕೈಗೊಳ್ಳುವ ಅಧಿಕಾರ ಇದೆ’ ಎಂದು ತಿಳಿಸಿದರು.

‘ಜಿಲ್ಲೆಯ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಭ್ರೂಣ ಲಿಂಗ ಪತ್ತೆಯಂತಹ ಕಾನೂನು ಬಾಹಿರ ಕೆಲಸ ಮಾಡಬೇಡಿ. ಯಾರಾದರೂ ಒತ್ತಾಯ ಮಾಡಿದರೆ ಕಾಯ್ದೆ ಕುರಿತು ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ಲಿಂಗಾನುಪಾತದ ಪ್ರಮಾಣ 955 ಇದೆ. ಎರಡು ತಾಲ್ಲೂಕುಗಳಲ್ಲಿ ಇದರ ಪ್ರಮಾಣ ಇನ್ನಷ್ಟು ಕಡಿಮೆ ಇರುವ ಬಗ್ಗೆ ರಾಜ್ಯ ಮಟ್ಟದ ಸಭೆಗಳಲ್ಲಿ ಸಾಕಷ್ಟು ಚರ್ಚೆಗಳು ನಡೆದು ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಿದ್ದಾರೆ. ರಾಜ್ಯದ ತಂಡವೂ ದಿಢೀರ್ ದಾಳಿ ನಡೆಸುವ ಸಾಧ್ಯತೆ ಇದೆ’ ಎಂದು ಎಚ್ಚರಿಸಿದರು.

ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಡೇರಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ರಾಚೇಗೌಡ ಮಾತನಾಡಿ, ‘ಎಲ್ಲಿಯವರೆಗೆ ಹೆಣ್ಣು ಭ್ರೂಣ ಹತ್ಯೆ ಮಹಾಪಾಪ ಎಂದು ತಾಯಿಯಂದಿರಲ್ಲಿ ಅರಿವು ಮೂಡುವುದಿಲ್ಲವೋ ಅಲ್ಲಿಯವರೆಗೆ ಲಿಂಗಾನುಪಾತದಲ್ಲಿ ಸುಧಾರಣೆ ಕಾಣುವುದಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಎಂ.ನಾರಾಯಣಸ್ವಾಮಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಭಾರತಿ, ವಾರ್ತಾ ಮತ್ತು ಪ್ರಚಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಪಲ್ಲವಿ ಹೊನ್ನಾಪುರ, ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ, ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ, ಮಲೇರಿಯಾ ನಿಯಂತ್ರಣಾಧಿಕಾರಿ ಕಮಲಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT