ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್‌ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ

ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮಂಜುನಾಥ್‌ ಸೂಚನೆ
Last Updated 12 ಮಾರ್ಚ್ 2019, 14:33 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜೂನ್‌ 1ರಿಂದ ಬೈಕ್‌ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚಿಸಿದರು.

ಇಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿ, ‘ನಗರದಲ್ಲಿ ಈ ಹಿಂದೆಯೇ ಹೆಲ್ಮೆಟ್ ಬಳಕೆ ಕಡ್ಡಾಯ ಮಾಡಿದ್ದರೂ ಸಮರ್ಪಕವಾಗಿ ಕಾರ್ಯಗತಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಾಣ ಹಾನಿಯಾಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದ್ದು, ಈ ನಿಟ್ಟಿನಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ. ಕಾಮಗಾರಿ ವಿಳಂಬವಾದರೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಜಿಲ್ಲೆ ವ್ಯಾಪ್ತಿಯಲ್ಲಿ 67 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ಈ ರಸ್ತೆಯಲ್ಲಿ ಹೆಚ್ಚು ಅಪಘಾತ ಸಂಭವಿಸುವ ಅಪಾಯಕಾರಿ ಸ್ಥಳಗಳನ್ನು ಗುರುತಿಸಲಾಗಿದೆ. ಹೆದ್ದಾರಿಯಲ್ಲಿನ ಸಮಸ್ಯೆಗಳ ಬಗ್ಗೆ ಅನೇಕ ಬಾರಿ ಸಭೆಯಲ್ಲೂ ಚರ್ಚೆಯಾಗಿದೆ. ಆದರೆ, ಅಧಿಕಾರಿಗಳು ಇದನ್ನು ಯಾಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ಕೆಂಡಾಮಂಡಲರಾದರು.

‘ಹಿಂದಿನ ಸಭೆಗಳಲ್ಲಿ ಚರ್ಚಿಸಿದ್ದ ಸಮಸ್ಯೆಗಳಲ್ಲಿ ಇನ್ನೂ ಕೆಲವು ಹಾಗೆಯೇ ಉಳಿದುಕೊಂಡಿವೆ. ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಹೆದ್ದಾರಿ ಮತ್ತು ಲ್ಯಾಂಕೊ ಅಧಿಕಾರಿಗಳು ಶೀಘ್ರವೇ ರಸ್ತೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

ಮೇಲ್ಸೇತುವೆ ನಿರ್ಮಿಸಿ: ‘ಜಿಲ್ಲಾಡಳಿತ ಭವನದ ಎದುರು, ಪವನ್ ಕಾಲೇಜು ಹಾಗೂ ಟಮಕ ಬಳಿ ಪಾದಚಾರಿ ಮೇಲ್ಸೇತುವೆ ನಿರ್ಮಿಸಬೇಕು. ಮೂರ್ನಾಲ್ಕು ವಾರದಲ್ಲಿ ಈ ಕೆಲಸ ಆರಂಭಿಸಬೇಕು. ಅಗತ್ಯ ಇರುವ ಕಡೆ ಬ್ಯಾರಿಕೇಡ್, ಬ್ಲಿಂಕರ್, ಲೈಟಿಂಗ್ ವ್ಯವಸ್ಥೆ ಮಾಡಬೇಕು’ ಎಂದು ಸೂಚಿಸಿದರು.

‘ಅಪಘಾತದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದರೆ ತಮಗೆ ಕಾನೂನು ಸಮಸ್ಯೆ ಎದುರಾಗುತ್ತದೆ ಎಂಬ ಕಾರಣಕ್ಕೆ ಅನೇಕರು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದವರಿಗೆ ಯಾವುದೇ ಕಾರಣಕ್ಕೂ ಕಾನೂನು ಸಮಸ್ಯೆ ಎದುರಾಗುವುದಿಲ್ಲ. ತುರ್ತು ಚಿಕಿತ್ಸೆಗೆ ಸ್ಪಂದಿಸುವ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಿ’ ಎಂದು ಸಲಹೆ ನೀಡಿದರು.

‘ಈಗಾಗಲೇ ಅಸಂಘಟಿತ ಕಾರ್ಮಿಕರ ಸಂಘದ ಸಹಯೋಗದಲ್ಲಿ ಆಟೊ, ವಾಣಿಜ್ಯ ವಾಹನ ಚಾಲಕರಿಗೆ ಪ್ರಥಮ ಚಿಕಿತ್ಸೆ ಕುರಿತು ಉಚಿತ ತರಬೇತಿ ನೀಡಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಿದರೆ ₹ 1 ಸಾವಿರ ಬಹುಮಾನ ನೀಡಲಾಗುತ್ತದೆ’ ಎಂದು ವಿವರಿಸಿದರು.

ಸುರಕ್ಷತಾ ಕಿಟ್‌: ‘ರಸ್ತೆ ಸುರಕ್ಷತೆ ಬಗ್ಗೆ ಜನರಿಗೆ ಅರಿವು ಮೂಡಿಸಲು ಹರಿಯಾಣ ಮಾದರಿಯಲ್ಲಿ ಜಿಲ್ಲೆಯಲ್ಲೂ ಹೋಂಡಾ ಕಂಪನಿ ಸಹಯೋಗದೊಂದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ 10 ಕಿ.ಮೀಗೆ ಸುರಕ್ಷತಾ ಸಾಧನ ಕಿಟ್‌ಗಳ ವ್ಯವಸ್ಥೆ ಮಾಡಲಾಗುವುದು. ಜತೆಗೆ ಚಿತ್ರಮಂದಿರ, ಶಾಲಾ ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.

ಪ್ರಥಮ ಚಿಕಿತ್ಸೆ ತರಬೇತಿ: ‘ವಾಣಿಜ್ಯ ವಾಹನ ಮತ್ತು ಆಟೊ ಚಾಲಕರಿಗೆ ಪ್ರಥಮ ಚಿಕಿತ್ಸೆ ಕುರಿತು ಒಂದು ದಿನದ ತರಬೇತಿಯನ್ನು ಜಿಲ್ಲೆಯಲ್ಲಿ 500 ಹಾಗೂ ರಾಜ್ಯದಲ್ಲಿ 15 ಸಾವಿರ ಮಂದಿಗೆ ನೀಡಲಾಗಿದೆ. ಜತೆಗೆ ಚಾಲಕರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಿಸಲಾಗಿದೆ’ ಎಂದು ರಾಜ್ಯ ಆಟೊ ಚಾಲಕರ ಒಕ್ಕೂಟದ ಅಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್ ತಿಳಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ನೇಫಾನಂದ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಾಜುದ್ದೀನ್‌ ಖಾನ್‌, ಹೋಂಡಾ ಕಂಪನಿ ಅಧಿಕಾರಿಗಳಾದ ವೆಂಕಟ್, ವಿನೋದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT