ಶನಿವಾರ, ಫೆಬ್ರವರಿ 27, 2021
27 °C

ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಸಂಕಲ್ಪ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣವು ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದ್ದು, ಇದನ್ನು ನನಸು ಮಾಡಲು ದೃಢ ಸಂಕಲ್ಪ ಮಾಡಿ’ ಎಂದು ಸಂಸದ ಎಸ್.ಮುನಿಸ್ವಾಮಿ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಗಾಂಧಿ ಜಯಂತಿ ಅಂಗವಾಗಿ ಬಿಜೆಪಿ ವತಿಯಿಂದ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಾದಯಾತ್ರೆ ಮತ್ತು ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಮನುಷ್ಯನ ದುರಾಸೆಯ ಫಲವಾಗಿ ಪರಿಸರ ನಾಶವಾಗಿದೆ. ಪ್ರಕೃತಿ ಮುನಿದಿರುವುದರಿಂದ ಅತಿವೃಷ್ಟಿ, ಅನಾವೃಷ್ಟಿ ಸಮಸ್ಯೆ ಎದುರಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ಗಿಡ ಮರ ಬೆಳೆಸದಿದ್ದರೆ ಭವಿಷ್ಯದಲ್ಲಿ ಮತ್ತಷ್ಟು ಸಂಕಷ್ಟ ಎದುರಾಗುತ್ತದೆ. ಮಹಾತ್ಮ ಗಾಂಧೀಜಿ ಸಮಾಜಕ್ಕೆ ಶ್ರಮದಾನದ ಮಹತ್ವ ತಿಳಿಸಿಕೊಟ್ಟರು. ಸ್ವದೇಶಿ ವಸ್ತುಗಳ ಬಳಕೆ ಮತ್ತು ಉತ್ಪಾದನೆಗೆ ಹೆಚ್ಚು ಒತ್ತು ಕೊಟ್ಟರು. ವಿದೇಶಿ ಬಟ್ಟೆ ತ್ಯಜಿಸಿ ದೇಸಿ ಬಟ್ಟೆ ಬಳಕೆಗೆ ಕರೆ ಕೊಟ್ಟರು. ಚರಕದ ಬಳಕೆ ಪರಿಚಯಿಸಿ ಸ್ವತಃ ಚರಕದಿಂದ ಬಟ್ಟೆ ನೇಯ್ದು ಬಳಸುತ್ತಿದ್ದರು. ಗಾಂಧೀಜಿಯ ಸರಳತೆ ಹಾಗೂ ಚಿಂತನೆ ಅನುಕರಣೀಯ’ ಎಂದು ಶ್ಲಾಘಿಸಿದರು.

‘ಕಾರ್ಯಕರ್ತರು ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಅಭಿಯಾನ ನಡೆಸಿ ಪ್ಲಾಸ್ಟಿಕ್‌ ಬಳಕೆಯ ದುಷ್ಪರಿಣಾಮದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಮೋದಿಯವರು ಗ್ರಾಮೀಣ ಭಾಗದ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ನೀಡಿದ್ದರಿಂದ ಸೌದೆಗೆ ಗಿಡ ಮರ ಬಳಕೆ ಕಡಿಮೆಯಾಗಿದೆ’ ಎಂದು ತಿಳಿಸಿದರು.

ಜೂನಿಯರ್ ಕಾಲೇಜು ಮೈದಾನದಿಂದ ಆರಂಭವಾದ ಪಾದಯಾತ್ರೆ ಕಾಲೇಜು ವೃತ್ತ, ಚಂಪಕ್ ವೃತ್ತ, ಎಂ.ಜಿ ರಸ್ತೆ, ಗಾಂಧಿವನ, ಗೌರಿಪೇಟೆ, ಕುರುಬರಪೇಟೆ ರಸ್ತೆ, ಇಟಿಸಿಎಂ ವೃತ್ತ, ಅಂಬೇಡ್ಕರ್ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಸಾಗಿತು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ವಿಭಾಗ ಪ್ರಭಾರಿ ಗೀತಾ, ಸಹ ವಿಭಾಗ ಪ್ರಭಾರಿ ಶಿವಕುಮಾರ್, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಕಾಂತರಾಜ್, ಮಾಜಿ ಶಾಸಕರಾದ ವೈ.ಸಂಪಂಗಿ, ಎ.ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ, ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಓಂಶಕ್ತಿ ಚಲಪತಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.