ಶುಕ್ರವಾರ, ಡಿಸೆಂಬರ್ 4, 2020
22 °C
ಕಾರ್ಯಕ್ರಮದಲ್ಲಿ ಅಧಿಕಾರಿಗಳಿಗೆ ಲೋಕಾಯುಕ್ತ ಎಸ್ಪಿ ಜನಾರ್ದನ್‌ ಕಿವಿಮಾತು

ಭ್ರಷ್ಟಾಚಾರ ನಿರ್ಮೂಲನೆಯ ಸಂಕಲ್ಪ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಭ್ರಷ್ಟಾಚಾರದ ಸಾಮಾಜಿಕ ಪಿಡುಗಿನ ನಿರ್ಮೂಲನೆಗೆ ಸರ್ಕಾರಿ ಅಧಿಕಾರಿಗಳು ದೃಢ ಸಂಕಲ್ಪ ಮಾಡಬೇಕು’ ಎಂದು ಲೋಕಾಯುಕ್ತ ಎಸ್ಪಿ ಸಿ.ಎನ್.ಜನಾರ್ದನ್‌ ಕಿವಿಮಾತು ಹೇಳಿದರು.

ಇಲ್ಲಿ ಸೋಮವಾರ ನಡೆದ ಭ್ರಷ್ಟಾಚಾರ ನಿರ್ಮೂಲನೆಯ ಪ್ರತಿಜ್ಞಾ ವಿಧಿ ಬೋಧನಾ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇರಬಾರದು. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿ ಸಾರ್ವಜನಿಕರ ವಿಶ್ವಾಸ ಗಳಿಸಬೇಕು’ ಎಂದು ಸಲಹೆ ನೀಡಿದರು.

‘ದೇಶದ ಎಲ್ಲಾ ರಾಜ್ಯಗಳಲ್ಲಿ ನವೆಂಬರ್‌ ಮೊದಲ ವಾರವನ್ನು ವಿಚಕ್ಷಣ ಸಪ್ತಾಹವಾಗಿ ಆಚರಿಸುವ ಮೂಲಕ ಲೋಕಾಯುಕ್ತ ಕಾಯ್ದೆಗಳ ಬಗ್ಗೆ ಅಧಿಕಾರಿಗಳಿಗೆ ಮತ್ತು ಜನರಿಗೆ ಜಾಗೃತಿ ಮೂಡಿಸಲಾಗುತ್ತದೆ. ಅಧಿಕಾರಿಗಳು ಜನರ ಜತೆ ಹೇಗೆ ವರ್ತಿಸಬೇಕೆಂಬ ಸಂಗತಿ ಲೋಕಾಯುಕ್ತ ಕಾಯ್ದೆಯಲ್ಲಿದೆ. ಎಲ್ಲಾ ತಾಲ್ಲೂಕುಗಳ ಅಧಿಕಾರಿಗಳಿಗೆ ಲೋಕಾಯುಕ್ತ ಕಾಯ್ದೆ ತಿಳಿಸಿಕೊಡಲು ಈ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದು ವಿವರಿಸಿದರು.

‘ಭ್ರಷ್ಟಾಚಾರ ನಿಯಂತ್ರಣ ಸಂಬಂಧ ಜನ ಜಾಗೃತಿ ಮೂಡಿರುವುದು ಸಪ್ತಾಹದ ಮುಖ್ಯ ಉದ್ದೇಶ. ಲಂಚ ಪಡೆಯುವುದು ಮತ್ತು ಕೊಡುವುದು ಕಾನೂನಿನ ಪ್ರಕಾರ ಅಪರಾಧ. ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಕಚೇರಿಗಳ ಮೂಲಕ ಅರಿವು ಮೂಡಿಸಲಾಗುತ್ತದೆ’ ಎಂದು ಲೋಕಾಯುಕ್ತ ಡಿವೈಎಸ್ಪಿ ಕೃಷ್ಣಮೂರ್ತಿ ತಿಳಿಸಿದರು.

‘ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ನಿಗದಿತ ಕಾಲಮಿತಿಯೊಳಗೆ ಸಾರ್ವಜನಿಕರ ಕೆಲಸ ಪೂರ್ಣಗೊಳಿಸಬೇಕು. ಜನರನ್ನು ವಿನಾಕಾರಣ ಕಚೇರಿಗೆ ಅಲೆಸಬಾರದು. ಲಂಚದ ಬೇಡಿಕೆ, ಕರ್ತವ್ಯ ನಿರ್ಲಕ್ಷ್ಯ, ಕಾನೂನು ಉಲ್ಲಂಘನೆ ಅಥವಾ ಅಗೌರವ ತೋರುವುದು, ಜನರೊಂದಿಗೆ ಉದ್ಧಟತನದ ವರ್ತನೆಯು ಕಾನೂನಿನ ಪ್ರಕಾರ ಅಪರಾಧ’ ಎಂದು ಮಾಹಿತಿ ನೀಡಿದರು.

ನೋಟಿಸ್‌ ಜಾರಿ: ‘ಸಾರ್ವಜನಿಕರ ಹಿತದೃಷ್ಟಿಯಿಂದ ಲಂಚದ ಹಾವಳಿ ನಿಯಂತ್ರಣಕ್ಕಾಗಿ 1984ರಲ್ಲಿ ಲೋಕಾಯುಕ್ತ ಸಂಸ್ಥೆ ಸ್ಥಾಪಿಸಿ ಹಲವು ಕಾಯ್ದೆ ಜಾರಿಗೊಳಿಸಲಾಯಿತು. ಜನ ದೂರು ನೀಡಿದಾಕ್ಷಣ ಸರ್ಕಾರಿ ನೌಕರರ ಮೇಲೆ ಶಿಸ್ತುಕ್ರಮ ಜರುಗಿಸುವುದು ಸಾಧ್ಯವಿಲ್ಲ. ನೌಕರರಿಗೂ ಒಂದು ತಿಂಗಳು ಕಾಲಾವಕಾಶ ಕೊಟ್ಟು ಸೂಚನೆ ನೀಡಲಾಗುವುದು’ ಎಂದು ವಿವರಿಸಿದರು.

‘ನೌಕರರು ಸೂಚನೆ ನಂತರವೂ ಜನರ ಕೆಲಸ ಮಾಡಿಕೊಡದಿದ್ದರೆ ನೋಟಿಸ್ ಜಾರಿ ಮಾಡುತ್ತೇವೆ. ನೋಟಿಸ್‌ಗೂ ಜಗ್ಗದಿದ್ದರೆ ಕಾನೂನಿನ ಪ್ರಕಾರ ಶಿಸ್ತುಕ್ರಮ ಜರುಗಿಸಿ ಬಡ್ತಿಗೆ ತಡೆಯೊಡ್ಡುತ್ತೇವೆ. ನೌಕರರ ಸೇವಾ ದಾಖಲಾತಿ ಪುಸ್ತಕದಲ್ಲಿ ದೋಷಾರೂಪ ನಮೂದಿಸಿದರೆ ಭವಿಷ್ಯದಲ್ಲಿ ಖಂಡಿತ ತೊಂದರೆ ಆಗುತ್ತದೆ’ ಎಂದರು.

ಸಾಮಾಜಿಕ ಗೌರವ: ‘ನೌಕರರು ಕಚೇರಿಗಳಲ್ಲಿ 60 ವರ್ಷ ವಯಸ್ಸಿನವರೆಗೆ ಮಾತ್ರ ಕೆಲಸ ಮಾಡುವುದು. ನಿವೃತ್ತಿ ನಂತರ ಸಮಾಜದ ನಡುವೆ ಇರಬೇಕೆಂಬ ಸಂಗತಿ ಗಮನದಲ್ಲಿಟ್ಟುಕೊಂಡು ಉತ್ತಮ ಕೆಲಸ ಮಾಡಬೇಕು. ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆ ಮೂಲಕ ಸಾಮಾಜಿಕ ಗೌರವ ಗಳಿಸಬೇಕು. ಇದಕ್ಕಿಂತ ದೊಡ್ಡ ಆಸ್ತಿ ಮತ್ತೊಂದಿಲ್ಲ’ ಎಂದು ಕಿವಿಮಾತು ತಿಳಿಸಿದರು.

‘ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ಕಾನೂನು ಪಾಲಿಸುತ್ತೇನೆ. ಲಂಚ ಪಡೆಯುವುದಿಲ್ಲ ಮತ್ತು ಕೊಡುವುದಿಲ್ಲ. ಎಲ್ಲಾ ಕಾರ್ಯಗಳನ್ನು ಪಾರದರ್ಶಕ ರೀತಿಯಲ್ಲಿ ನಿರ್ವಹಿಸುತ್ತೇನೆ. ಸಾರ್ವಜನಿಕ ಹಿತಾಸಕ್ತಿಯಿಂದ ಕೆಲಸ ಮಾಡುತ್ತೇನೆ. ವೈಯಕ್ತಿಕ ನಡವಳಿಕೆಯಲ್ಲಿ ನಿಷ್ಠೆ ಪ್ರದರ್ಶಿಸುವ ಮೂಲಕ ಮಾದರಿಯಾಗಿರುತ್ತೇನೆ ಎಂಬ ಸಂಕಲ್ಪ ಮಾಡಿ’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಾಬು, ವಿವಿಧ ಗ್ರಾ.ಪಂ ಪಿಡಿಒಗಳು ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.