ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡಿಕಲ್‌ ಚೌಡೇಶ್ವರಿ ರಥೋತ್ಸವ

Last Updated 7 ಫೆಬ್ರುವರಿ 2023, 5:04 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನ ಮಂಡಿಕಲ್ ಗ್ರಾಮದಲ್ಲಿ ಪುರಾಣ ಪ್ರಸಿದ್ಧ ಶ್ರೀಪ್ರಸನ್ನ ಚೌಡೇಶ್ವರಿ ದೇವಿ ರಥೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ಕೊರೊನಾ ಅವಧಿಯಲ್ಲಿ ಸಾಂಪ್ರದಾಯಿಕವಾಗಿ ಪೂಜಾ ಕಾರ್ಯಕ್ರಮ ನೆರವೇರಿಸಲಾಗಿತ್ತು. ಕಳೆದ ವರ್ಷವೂ ಬೆರಳೆಣಿಕೆಯಷ್ಟು ಜನರ ಸಮ್ಮುಖದಲ್ಲಿ ರಥೋತ್ಸವ ನಡೆದಿತ್ತು. ಈ ಬಾರಿ ಯಾವುದೇ ಆತಂಕ ಇಲ್ಲದಿದ್ದ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಯಿತು.

ಇನ್ನು ಒಂಬತ್ತು ದಿನಗಳ ಕಾಲ ನಡೆಯುವ ಪೂಜಾ ಕಾರ್ಯಕ್ರಮದಲ್ಲಿ ಮೊದಲನೇ ದಿನದ ಪೂಜೆಯನ್ನು ಹರಪನಾಯಕನಹಳ್ಳಿಯಲ್ಲಿ ಮಾಡಿ ನಂತರದ ಪೂಜೆಯನ್ನು ಗೊಲ್ಲಹಳ್ಳಿಯಲ್ಲಿ ಮಾಡುವುದು ವಾಡಿಕೆ. ಅಗ್ನಿಕುಂಡ ಪ್ರವೇಶ, ರುದ್ರೋತ್ಸವ, ಹೋಮ, ಹವನ, ಅಭಿಷೇಕ ಮುಂತಾದ ಕಾರ್ಯಕ್ರಮಗಳು ಮುಗಿದ ನಂತರ ಭಾನುವಾರ ಮಧ್ಯಾಹ್ನ ಅಭಿಜಿನ್ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ಸಿಕ್ಕಿತು.

ರಥೋತ್ಸವ ಪ್ರಯುಕ್ತ ಪ್ರಸನ್ನ ಚೌಡೇಶ್ವರಿ ದೇವರ ಮೂಲ ವಿಗ್ರಹವನ್ನು ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಒಂಬತ್ತು ದಿನಗಳಿಂದಲೂ ಸುತ್ತಮುತ್ತಲಿನ ಗ್ರಾಮಸ್ಥರು ವಿವಿಧ ಪೂಜಾ ಕಾರ್ಯಕ್ರಮ ಏರ್ಪಡಿಸಿದ್ದರು.

ಐತಿಹಾಸಿಕ ಪುರುಷನಾದ ಬಿಸ್ಸೇಗೌಡ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಚಂದ್ರಗಿರಿ ಕೋಟೆಯನ್ನು ಕೊಳ್ಳೆ ಹೊಡೆಯಲು ಹೋಗುತ್ತಾನೆ. ಆಗ ಆತನಿಗೆ ಚೌಡೇಶ್ವರಿಯ ದರ್ಶನವಾಗುತ್ತದೆ. ಅಂದಿನಿಂದ ರಥೋತ್ಸವ ಪ್ರಾರಂಭ ಮಾಡಿದ ಎನ್ನುವುದು ಪ್ರತೀತಿ.

ರಥೋತ್ಸವ ನೋಡಲು ಸುತ್ತಮುತ್ತಲಿನ ಜನರಷ್ಟೇ ಅಲ್ಲದೆ ಆಂಧ್ರಪ್ರದೇಶದ ರಾಮಸಂದ್ರ, ಮಿಣಿಕಿ, ಪುಂಗನೂರು ಮುಂತಾದ ಕಡೆಗಳಿಂದಲೂ ಭಕ್ತರು ಆಗಮಿಸಿದ್ದರು. ಹರಕೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂದಿತು.

ರಥೋತ್ಸವಕ್ಕೆ ಚಾಲನೆ ಸಿಕ್ಕ ತಕ್ಷಣ ನೆರೆದಿದ್ದ ಸಾವಿರಾರು ಸಂಖ್ಯೆಯ ಭಕ್ತರು ರಥದ ಮೇಲೆ ಹೂಗಳು, ಮೆಣಸು, ಬಾಳೆಹಣ್ಣು, ಉಪ್ಪು ಮುಂತಾದ ಪವಿತ್ರ ವಸ್ತುಗಳನ್ನು ಚೆಲ್ಲಿ ಹರಕೆ ತೀರಿಸಿದರು. ಭಕ್ತರಿಗೆ ಅನ್ನದಾನ ನಡೆಯಿತು. .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT