ಶುಕ್ರವಾರ, ಆಗಸ್ಟ್ 6, 2021
25 °C
ರಾಜಾರೊಷವಾಗಿ ರೈತರಿಂದ ಕಮಿಷನ್‌ ಪಡೆಯುವ ವರ್ತಕರು

ಶ್ರೀನಿವಾಸಪುರ: ಮಾವು ಬೆಳೆಗಾರರಲ್ಲಿ ಹೊಗೆಯಾಡಿದ ಅತೃಪ್ತಿ

ಆರ್‌.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮಾವಿನ ಸುಗ್ಗಿ ಅಂತಿಮ ಹಂತ ತಲುಪಿದೆ. ಇನ್ನು ಶೇ 10ರಷ್ಟು ಕಾಯಿ ಮಾತ್ರ ತೋಟಗಳಲ್ಲಿ ಉಳಿದಿದೆ. ಆದರೆ, ಬೆಲೆ ನಿರ್ಧಾರ ಹಾಗೂ ಮಾರುಕಟ್ಟೆ ಅವ್ಯವಸ್ಥೆ ಬಗ್ಗೆ ಬೆಳೆಗಾರರಲ್ಲಿ ಅತೃಪ್ತಿ ಕಾಡುತ್ತಿದೆ.

ಕೊರೊನಾ ಭೀತಿ ನಡುವೆ ಮಾವಿನ ವಹಿವಾಟು ನಡೆಯಿತು ಎಂಬುದನ್ನು ಬಿಟ್ಟರೆ, ಯಾವುದೇ ರೀತಿಯಲ್ಲೂ ಹಿಂದಿನ ವರ್ಷಗಳಿಗಿಂತ ಭಿನ್ನವಾಗಿಲ್ಲ. ಎಪಿಎಂಸಿ ನಿಯಮಗಳನ್ನು ಗಾಳಿಗೆ ತೂರಿ, ವರ್ತಕರ ಮರ್ಜಿಗೆ ಅನುಗುಣವಾಗಿ ವಹಿವಾಟು ನಡೆಸಲಾಗುತ್ತಿದೆ ಎಂಬ ಆಪಾದನೆ ಸಾಮಾನ್ಯವಾಗಿ ಕೇಳಿಬರುತ್ತಿದೆ. ಇಲ್ಲಿನ ವರ್ತಕರು ರಾಜಾರೊಷವಾಗಿ ರೈತರಿಂದ ಶೇ 10ರಷ್ಟು ಕಮಿಷನ್‌ ಪಡೆಯುತ್ತಿದ್ದಾರೆ.

ಈ ಬಾರಿ, ವರ್ತಕರು ಎಪಿಎಂಸಿಗೆ ನೀಡಬೇಕಾಗಿದ್ದ ಶೇ 1ರಷ್ಟು ಸೇವಾ ಶುಲ್ಕವನ್ನು ಸರ್ಕಾರ ರದ್ದುಪಡಿಸಿದೆ. ಇಷ್ಟರ ನಡುವೆಯೂ ಇಲ್ಲಿನ ಮಂಡಿ ಮಾಲೀಕರು ಕಾಯಿ ಖರೀದಿಸುವ ವ್ಯಾಪಾರಿಗಳು ಹಾಗೂ ರೈತರಿಂದ ಕಮಿಷನ್‌ ಪಡೆದುಕೊಳ್ಳುತ್ತಿದ್ದಾರೆ. ಎಪಿಎಂಸಿ ಅಧಿಕಾರಿಗಳ ಮೂಗಿನ ಕೆಳಗೆ ರೈತರ ಶೋಷಣೆ ನಡೆಯುತ್ತಿದ್ದರೂ, ಅವರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

‘ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ರಸ ತೆಗೆಯಲು ಬಳಸುವ ತೋತಾಪುರಿ ಮಾವಿನಕಾಯಿ ಬೆಲೆ ನಿಗದಿಪಡಿಸುವಲ್ಲಿ ಭಾರಿ ಮೋಸ ನಡೆಯುತ್ತಿದೆ. ಇಲ್ಲಿನ ವರ್ತಕರು ರಸ ತೆಗೆಯುವ ಕಾರ್ಖಾನೆಗಳ ಮಾಲೀಕರೊಂದಿಗೆ ಶಾಮೀಲಾಗಿ, ಮನಸ್ಸಿಗೆ ಬಂದಂತೆ ಬೆಲೆ ನಿಗದಿಪಡಿಸುತ್ತಿದ್ದಾರೆ. ಒಂದೊಂದು ಮಂಡಿಯಲ್ಲಿ ಒಂದೊಂದು ಬೆಲೆ ಇದೆ. ಟನ್‌ ಒಂದಕ್ಕೆ ₹18 ಸಾವಿರದಿಂದ ₹21 ಸಾವಿರದವರೆಗೆ ಖರೀದಿಸಲಾಗುತ್ತಿದೆ. ರೈತರಿಂದ ಶೇ 10ರಷ್ಟು ಕಮಿಷನ್ ಪಡೆಯಲಾಗುತ್ತಿದೆ’ ಎಂದು ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾರುಕಟ್ಟೆಯಲ್ಲಿ ಕಾಯಿ ಹರಾಜು ನಡೆಯುತ್ತಿಲ್ಲ. ಇ–ಟೆಂಡರ್‌ ವ್ಯವಸ್ಥೆ ಜಾರಿಗೆ ತಂದಿಲ್ಲ. ರೈತರಿಂದ ಕಮಿಷನ್‌ ಪಡೆಯುವ ವ್ಯವಸ್ಥೆ ಮುಂದುವರಿದಿದೆ. ಆದ್ದರಿಂದ ರೈತರ ಹಿತ ಕಾಯುವಲ್ಲಿ ವಿಫಲವಾಗಿರುವ ಹಾಗೂ ವರ್ತಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಎಪಿಎಂಸಿ ಆಡಳಿತ ಮಂಡಳಿಯನ್ನು ಸರ್ಕಾರ ರದ್ದುಪಡಿಸಬೇಕು. ಬೆಳೆಗಾರರ ಹಿತ ಕಾಯಲು ಮುಂದಾಗಬೇಕು’ ಎಂದು ಆಗ್ರಹಿಸಿದರು.

ಎಪಿಎಂಸಿ ಮಂಡಳಿಯ ಅಸಮರ್ಥತೆ ಹಾಗೂ ಮಂಡಿ ಮಾಲೀಕರ ಶೋಷಣೆ ವಿರುದ್ಧ ಹೋರಾಟ ಮಾಡಲಾಗುವುದು. ರೈತರ ಹಿತವನ್ನು ಕಡೆಗಣಿಸುವ ವ್ಯಕ್ತಿಗಳಿಗೆ ಸರಿಯಾದ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.

ಸುಗ್ಗಿಯ ಕೊನೆಯಲ್ಲಿ ಕಾಯಿಗೆ ಉತ್ತಮ ಬೆಲೆ ನಿರೀಕ್ಷಿಸಿದ್ದ ಮಾವು ಬೆಳೆಗಾರಿಗೆ ನಿರಾಸೆಯಾಗಿದೆ. ಬೆಲೆ ಏರಿಕೆ ಕಂಡುಬರುತ್ತಿಲ್ಲ. ಆದರೆ, ಕೊಯ್ಲು ಮಾಡುವುದು ತಡವಾದ ಪರಿಣಾಮ ಬಹಳಷ್ಟು ಕಾಯಿ ತೋಟಗಳಲ್ಲಿ ಕೊಳೆತು ಹಾಳಾಗಿದೆ.

ಗ್ರಾಹಕರ ಕಡೆಗಣನೆಗೆ ಒಳಗಾಗಿದ್ದ ನೀಲಂ ತಳಿ ಮಾವಿಗೆ ಈ ಬಾರಿ ಒಳ್ಳೆ ಬೆಲೆ ಬಂದಿದೆ. ಮಾರುಕಟ್ಟೆಯಲ್ಲಿ ಟನ್‌ ಒಂದಕ್ಕೆ ₹30 ಸಾವಿರದಿಂದ ₹35 ಸಾವಿರದವರೆಗೆ ಮಾರಾಟವಾಗುತ್ತಿದೆ. ಆದರೆ, ಹಿಂದೆ ಈ ತಳಿಯ ಮಾವಿಗೆ ಬೇಡಿಕೆ ಕುಸಿದ ಪರಿಣಾಮ ರೈತರು ಮರದ ಕೊಂಬೆಗಳನ್ನು ಕಡಿದು ತಳಿ ಬದಲಾವಣೆ ಮಾಡಿದ್ದಾರೆ. ಇರುವ ಕಾಯಿಗೆ ಮಾತ್ರ ಒಳ್ಳೆ ಬೆಲೆ ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು