ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಲಕ್ಷ್ಯಕ್ಕೊಳಗಾಗಿದ್ದ ಅಪರೂಪದ ಮಾವಿನ ತಳಿಗೆ ದಿಢೀರ್‌ ಬೇಡಿಕೆ

ದೊಡ್ಡ ಗೋಲಿ ಗಾತ್ರದ ಕಾಯಿಗಳಲ್ಲಿ ಹೆಚ್ಚು ನಾರಿನ ಅಂಶ
Last Updated 21 ಜೂನ್ 2020, 19:31 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಹಿಂದೆ ‘ಸಕ್ಕರೆ ಗುತ್ತಿ’ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಒಂದು ಮಾವಿನ ತಳಿ ಬದಲಾದ ಪರಿಸ್ಥಿತಿಯಲ್ಲಿ ಅದು ಮಾರುಕಟ್ಟೆಯಲ್ಲಿ ಮುನ್ನೆಲೆಗೆ ಬಂದಿದ್ದು, ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ.

ತಾಲ್ಲೂಕಿನ ರೈತರು ತೋಟಗಳಲ್ಲಿ ಬಹು ತಳಿಯ ಮಾವನ್ನು ಬೆಳೆಯುತ್ತಿದ್ದರು. ಇದರಲ್ಲಿ ಸಕ್ಕರೆ ಗುತ್ತಿಯೂ ಒಂದಾಗಿತ್ತು. ದೊಡ್ಡ ಗೋಲಿ ಗಾತ್ರದ ಕಾಯಿಗಳು ಹೆಚ್ಚು ನಾರಿನ ಅಂಶದಿಂದ ಕೂಡಿದೆ. ತಿನ್ನಲು ಹೆಚ್ಚು ಸಿಹಿಯಾಗಿದ್ದರಿಂದ ಹಾಗೂ ಕಾಯಿ ಗೊಂಚಲಲ್ಲಿ ಬರುವುದರಿಂದ ಅದನ್ನು ಸ್ಥಳೀಯವಾಗಿ ‘ಸಕ್ಕರೆ ಗುತ್ತಿ’ ಎಂದು ಕರೆಯಲಾಗುತ್ತಿತ್ತು. ಈಗಲೂ ಅದೇ ಹೆಸರು ಚಾಲ್ತಿಯಲ್ಲಿದೆ.

ಈ ಮರಗಳನ್ನು ಯಾರೂ ಉದ್ದೇಶ ಪೂರ್ವಕವಾಗಿ ಬೆಳೆಯುತ್ತಿರಲಿಲ್ಲ. ಒಂದೆರಡು ಮರಗಳು ಪ್ರತಿ ತೋಟದಲ್ಲಿಯೂ ಇರುತ್ತಿದ್ದವು. ಮಾರುಕಟ್ಟೆಯಲ್ಲಿ ಈ ಮಾವಿಗೆ ಬೇಡಿಕೆ ಇರಲಿಲ್ಲವಾದ್ದರಿಂದ, ರೈತರು ಕೊಯ್ಲು ಮಾಡದೆ ಬಿಡುತ್ತಿದ್ದರು. ಕಾಯಿ ಕೋಗಿಲೆಗಳು, ಮಕ್ಕಳು ಅಥವಾ ದನಗಾಹಿಗಳ ಪಾಲಾಗುತ್ತಿತ್ತು.

ಆದರೆ ಈಗ ಸಕ್ಕರೆ ಗುತ್ತಿಗೆ ಎಲ್ಲಿಲ್ಲಿದ ಬೇಡಿಕೆ ಬಂದಿದೆ. ಸಗಟು ಮಾರುಕಟ್ಟೆಯಲ್ಲಿ ಕೆಜಿಯೊಂದಕ್ಕೆ ₹60 ರಂತೆ ಮಾರಾಟವಾಗುತ್ತಿದೆ. ಚಿಲ್ಲರೆ ವ್ಯಾಪಾರಿಗಳಿಗೆ ಇದರ ಬೆಲೆ ಕೆಜಿಯೊಂದಕ್ಕೆ ₹100 ರ ಗಡಿ ದಾಟುತ್ತದೆ. ಬೇಡಿಕೆಯೂ ಹೆಚ್ಚು. ಆದರೆ ಮಾರುಕಟ್ಟೆಗೆ ತೀರಾ ಕಡಿಮೆ ಪ್ರಮಾಣದಲ್ಲಿ ಬರುತ್ತದೆ.

ಈಗ ಹೊಸದಾಗಿ ಮಾವಿನ ಗಿಡ ನಾಟಿ ಮಾಡುವ ರೈತರು, ಸಕ್ಕರೆ ಗುತ್ತಿಯನ್ನೂ ಒಂದು ವಿಶೇಷ ತಳಿಯನ್ನಾಗಿ ಪರಿಗಣಿಸಿ ನಾಟಿ ಮಾಡುತ್ತಿದ್ದಾರೆ. ಹೊಸ ತೋಟಗಳಲ್ಲಿ ಇಂಥ ಗಿಡಗಳು ಕಾಣಿಸಿಕೊಂಡಿವೆ. ಕೊಂಬೆಗಳಲ್ಲಿ ತೂಗುತ್ತಿರುವ ಕಾಯಿ ಗೊಂಚಲುಗಳು ನೋಡುಗರ ಗಮನ ಸೆಳೆಯುವುದರ ಜತೆಗೆ, ಬಾಯಲ್ಲಿ ನೀರೂರಿಸುತ್ತವೆ.

ಸಕ್ಕರೆ ಗುತ್ತಿ ತಳಿಯ ಮಾವು ಮಕ್ಕಳಿಗೆ ಹೆಚ್ಚು ಪ್ರಿಯ. ತೆಳುವಾದ ಹೊಟ್ಟನ್ನು ಬಿಡಿಸಿ, ಬೀಜ ಸಮೇತ ಬಾಯಿಗೆ ಹಾಕಿಕೊಂಡು ಸವಿಯುವುದು ಅವರಿಗೆ ಹೆಚ್ಚು ಖುಷಿ ಕೊಡುತ್ತದೆ. ಆದ್ದರಿಂದಲೇ ಇದಕ್ಕೆ ಮಕ್ಕಳಿಂದ ಹೆಚ್ಚು ಬೇಡಿಕೆ ಬರುತ್ತಿದೆ. ಬೆಳೆಗಾರರಿಗೆ ಒಳ್ಳೆ ಬೆಲೆ ಸಿಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT